ನೋರಾ ಫತೇಹಿ ಬಾಯ್‌ಫ್ರೆಂಡ್ ಮೇಲೆ ಅ*ತ್ಯಾಚಾರದ ಆರೋಪ ; ಸಾಬೀತಾದರೆ 15 ವರ್ಷ ಜೈಲು-ಬಳಕುವ ಬಳ್ಳಿಗೆ ಢವಢವ
ಸಿನಿಮಾ ಇರಲಿ, ಕ್ರೀಡೆ ಇರಲಿ ಅಥವಾ ಬೇರೆ ಯಾವುದೇ ಕ್ಷೇತ್ರ ಇರಲಿ.. ಯಶಸ್ಸಿನ ಶಿಖರಕ್ಕೇರಿದವರು ತುಂಬಾನೇ ಜಾಗರೂಕವಾಗಿರಬೇಕಾಗುತ್ತೆ. ಜವಾಬ್ಧಾರಿಯಿಂದ ಬದುಕಬೇಕಾಗುತ್ತೆ. ಇಲ್ಲದಿದ್ದರೆ ಒಂದೇ ಒಂದು ವಿವಾದ.. ಒಂದೇ ಒಂದು ಕಪ್ಪುಚುಕ್ಕೆ.. ಇಡೀ ಸಾಧನೆಯನ್ನೇ ಅಳಸಿ ಹಾಕುತ್ತೆ. ಕೇವಲ ವೃತ್ತಿ ಬದುಕು ಮಾತ್ರ ಅಲ್ಲ ವೈಯಕ್ತಿಕ ಜೀವನ ಕೂಡ ಮೂರಾಬಟ್ಟೆಯಾಗುತ್ತೆ. ಸದ್ಯ ಇಂತಹದ್ದೇ ಒಂದು ಭಯದಲ್ಲಿ ಮತ್ತು ಗೆಲ್ಲುವ ವಿಶ್ವಾಸದಲ್ಲಿ ಅಶ್ರಫ್ ಹಕೀಮಿ ಬದುಕುತ್ತಿದ್ದಾರೆ.
ಹೌದು, ಅಶ್ರಫ್ ಹಕೀಮಿ .. ಬಾಲಿವುಡ್‌ನ ಬಳಕುವ ಬಳ್ಳಿ ನೋರಾ ಫತೇಹಿ ಅವರ ಜೊತೆ ತಳುಕು ಹಾಕಿಕೊಂಡಿರುವ ಹೆಸರು. ಮೊರಾಕ್ಕೋ ಫುಟ್ಬಾಲ್ ತಂಡದ ನಾಯಕ ಮಾತ್ರ ಅಲ್ಲದೇ ಪ್ಯಾರಿಸ್ ಸೈಂಟ್ ಜರ್ಮನ್ ತಂಡದ ಸ್ಟಾರ್ ಆಟಗಾರ ಕೂಡ ಆಗಿರುವ ಅಶ್ರಫ್ ಹಕೀಮಿ ಮತ್ತು ನೋರಾ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ.

ಇದಕ್ಕೆ ಪೂರಕವಾಗಿ ನೋರಾ ಫತೇಹಿ ಈ ವರ್ಷದ ಆರಂಭದಲ್ಲಿ ಮೊರಾಕ್ಕೊದ ರಬಾತ್ ನಲ್ಲಿರುವ ಪ್ರಿನ್ಸ್ ಮೌಲೆ ಅಬ್ದೆಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಿದ್ದರು. ಮೊರಾಕ್ಕೊ ಮತ್ತು ಕ್ಯಾಮರೂನ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದರು. ಮೊರಾಕ್ಕೊ ಗೆಲುವಿಗೆ ಪ್ರಾರ್ಥನೆಯನ್ನು ಮಾಡಿದ್ದ ನೋರಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಭ್ರಮವನ್ನು ಕೂಡ ಹಂಚಿಕೊಂಡಿದ್ದರು.
ವಿಶೇಷ ಅಂದರೆ ನೋರಾ ಮತ್ತು ಅಷ್ರಫ್ ಹಕಿಮಿ ಮೂಲ ಒಂದೇ. ಇಬ್ಬರು ಮೊರಾಕ್ಕೊ ಹಿನ್ನೆಲೆಯವರೇ. ಇಬ್ಬರ ಸಂಬಂಧದ ಕುರಿತು ಹಲವರಿಗೆ ಅನುಮಾನ ಮೂಡಲು ಇದು ಕೂಡ ಒಂದು ಕಾರಣ. ಅಂದ್ಹಾಗೇ ಡ್ಯಾನ್ಸಿಂಗ್ ಡಾಲ್ ನೋರಾ ಫತೇಹಿಗೆ ಈಗ 33ವರ್ಷ. ಮತ್ತೊಂದೆಡೆ ಅಶ್ರಫ್ ಹಕಿಮಿಗೆ 27ವರ್ಷ. ಇಬ್ಬರ ನಡುವೆ 6 ವರ್ಷಗಳ ಅಂತರ ಇದೆ. ಈ ವಿಚಾರ ಕೆಲವರಿಗೆ ಇಷ್ಟ ಆಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಇಬ್ಬರ ಸಂಬಂಧಕ್ಕೆ ಅಪಸ್ವರ ತೆಗೆದಿದ್ದರು.
ಇನ್ನು ವಿಶ್ವದ ಅತ್ಯುತ್ತಮ ಡಿಫೆಂಡರ್‌ಗಳಲ್ಲಿ ಅಶ್ರಫ್ ಹಕೀಮಿ ಕೂಡ ಒಬ್ಬರು. 2022ರ ವಿಶ್ವಕಪ್‌ನಲ್ಲಿ ಮೊರಾಕ್ಕೊ ತಂಡ ಸಮಿಫೈನಲ್ ಪ್ರವೇಶ ಮಾಡಿದಾಗ ತಂಡದಲ್ಲಿ ಇವರ ಪಾತ್ರ ತುಂಬಾನೇ ದೊಡ್ಡದಿತ್ತು.
ಇಂಥಾ ಅಶ್ರಫ್ ಹಕೀಮಿ ವಿರುದ್ಧ 2023ರಲ್ಲಿ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು. ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತ ಮಹಿಳೆ ನೀಡಿದ್ದ ದೂರನ್ನು ದಾಖಲಿಸಿಕೊಂಡಿದ್ದ ಫ್ರಾನ್ಸ್‌ನ ಪೊಲೀಸರು ತನಿಖೆ ಶುರು ಮಾಡಿದ್ದರು. ವಿಚಾರಣೆಯನ್ನು ನಡೆಸಿದ್ದರು.

ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಅಶ್ರಫ್ ಹಕೀಮಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಈ ಪ್ರಕರಣದ ಸಂಪೂರ್ಣ ವಿಚಾರಣೆ ಇನ್ಮುಂದೆ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಹೇಳಿದೆ. ಈ ಮೂಲಕ ನ್ಯಾಯಾಲಯದಲ್ಲಿ ಟ್ರಯಲ್ ಆರಂಭವಾಗಿದ್ದು ಹಕೀಮಿ ಬದುಕು ನಿರ್ಣಾಯಕ ಹಂತಕ್ಕೆ ಈಗ ಬಂದು ತಲುಪಿದೆ. ಹಮೀಮಿ ಇಮೇಜ್‌ಗೆ ಧಕ್ಕೆಯಾಗುವ ಸಾಧ್ಯತೆ ಕೂಡ ಇದೆ.
ತಮ್ಮ ಮೇಲಿನ ಆರೋಪಗಳಿಗೆ ಮತ್ತು ನಡೆದ ಹೊಸ ವಿದ್ಯಮಾನದ ಕುರಿತು ಅಶ್ರಫ್ ಹಕೀಮಿ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದು ತಮ್ಮ ಮೇಲೆ ಮಾಡಲಾದ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ, ವಿಚಾರಣೆಯನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ನ್ಯಾಯಾಲಯ ನೀಡಿದ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಅಶ್ರಫ್ ಹಕೀಮಿ ಅವರ ಪರ ವಕೀಲರು ಹೇಳಿದ್ದು ವಕೀಲರು ಕೂಡ ಸಂತ್ರಸ್ತೆ ಮಾಡಿದ ಆರೋಪಗಳನ್ನೆಲ್ಲ ನಿರಾಕರಿಸಿದ್ದಾರೆ.
ವಿಚಾರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ ಒಂದು ವೇಳೆ ಅಶ್ರಫ್ ಹಕೀಮಿಯ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದರೆ 15 ವರ್ಷ ಅಶ್ರಫ್ ಹಕೀಮಿ ಕಂಬಿ ಹಿಂದೆ ಹೋಗುವ ಸಾಧ್ಯತೆ ಇದೆ. ನ್ಯಾಯಾಲಯವು ಅಂತಿಮ ತೀರ್ಪು ನೀಡುವವರೆಗೂ, ಕಾನೂನಿನ ಪ್ರಕಾರ ಹಕೀಮಿ ನಿರಪರಾಧಿಯಾಗಿದ್ದು ವಿಚಾರಣೆಯ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ ನೋರಾ ಫತೇಹಿ ಸಹಜವಾಗಿಯೇ ಈ ಬೆಳವಣಿಗೆಯಿಂದ ಆತಂಕಕ್ಕೀಡಾಗಿದ್ದಾರೆ ಎನ್ನುವ ಸುದ್ದಿ ಮುಂಬೈನಲ್ಲಿ ಸದ್ಯ ಕೇಳಿ ಬರುತ್ತಿದೆ.


Click it and Unblock the Notifications











