'ಸೀರಿಯಲ್ ಕಿಸ್ಸರ್' ಟ್ಯಾಗ್ ಬಗ್ಗೆ ಬೇಸರ ಹೊರಹಾಕಿದ ನಟ ಇಮ್ರಾನ್ ಹಶ್ಮಿ
ಬಾಲಿವುಡ್ ನಟ ಇಮ್ರಾನ್ ಹಶ್ಮಿ ತನ್ನ ಹೆಸರಿಗಿಂತ ಹೆಚ್ಚಾಗಿ 'ಸೀರಿಯಲ್ ಕಿಸ್ಸರ್' ಹೆಸರಿನ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದವರು. ಇಮ್ರಾನ್ ತನ್ನ ವೃತ್ತಿ ಜೀವನದನ ಆರಂಭದಲ್ಲಿ ಮಾಡಿದ ಸಿನಿಮಾಗಳಿಂದ ಸೀರಿಯಲ್ ಕಿಸ್ಸರ್ ಎನ್ನುವ ಬಿರುದನ್ನು ಪಡೆದುಕೊಂಡರು. ಇಮ್ರಾನ್ ಹಶ್ಮಿಯನ್ನು ಹೆಚ್ಚಾಗಿ ಉತ್ತಮ ಸಿನಿಮಾಗಳು, ಅದ್ಭುತ ಪಾತ್ರಗಳಲ್ಲಿ ನೋಡುವುದಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ಕಿಸ್ಸಿಂಗ್ ದೃಶ್ಯಗಳಲ್ಲಿ ಹೆಚ್ಚಾಗಿ ನೋಡಲು ಕಾಯುತ್ತಿದ್ದರು. ಇಮ್ರಾನ್ ಸಿನಿಮಾಗಳಲ್ಲಿ ನಟಿಮಣಿಯರ ಜೊತೆ ಚುಂಬಿಸುವ ದೃಶ್ಯ ಇಲ್ಲದಿದ್ದರೆ ಇಮ್ರಾನ್ ಸಿನಿಮಾನೇ ಅಲ್ಲವೇನೋ ಎನ್ನುವ ಮಟ್ಟಕ್ಕೆ ಅಭಿಮಾನಿಗಳು ಫೀಲ್ ಆಗುತ್ತಿದ್ದರು.
ಆದರೀಗ ಈ ಬಗ್ಗೆ ಇಮ್ರಾನ್ ಹಶ್ಮಿ ಬೇಸರ ಹೊರಹಾಕುತ್ತಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಇಮ್ರಾನ್, ತನ್ನನ್ನು ಎಲ್ಲರೂ ನಟಿಯರ ಜೊತೆ ಚುಂಬಿಸುವ ನಟ ಎಂದೇ ಕರೆಯುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದು ತನೆಗೆ ಯಾವುದೇ ಸೃಜನಶೀಲ ತೃಪ್ತಿ ನೀಡಿಲ್ಲ ಎಂದ ಇಮ್ರಾನ್ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ಇಮ್ರಾನ್ ಹಶ್ಮಿ ಸಂದರ್ಶನದಲ್ಲಿ ಮಾತನಾಡಿ ತನ್ನ ವೃತ್ತಿಜೀವನದ ಆರಂಭದಲ್ಲಿ ಸಿಕ್ಕಿದ ಸೀರಿಯಲ್ ಕಿಸ್ಸರ್ ಎನ್ನುವ ಟ್ಯಾಗ್ ಮತ್ತು ಅದು ಹೇಗೆ ಅಂತಹ ಪಾತ್ರಗಳಿಗೆ ಮಾತ್ರ ಸೀಮಿತ ಆಗುವಂತಾಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. "ನನ್ನ ವೃತ್ತಿ ಜೀವನದ ಆರಂಭದಲ್ಲಿ ಮೊದಲ 10 ವರ್ಷಗಳಲ್ಲಿ ನಾನು ಈ ಚಿತ್ರಗಳನ್ನು ಮಾಡುತ್ತಿದ್ದೆ. ಸೀರಿಯಲ್ ಕಿಸ್ಸರ್ ಟ್ಯಾಗ್ ಎಂದು ನಾನು ನನಗೆ ತಮಾಷೆಯಾಗಿ ಹೇಳಿಕೊಂಡಿದ್ದೆ. ನಂತರ ಮಾಧ್ಯಮದಲ್ಲಿ ಪ್ರಸಾರವಾಯಿತು. ಈ ಬಗ್ಗೆ ಮಾತು ಪ್ರಾರಂಭವಾಯಿತು. ಯಾವುದೇ ಒಂದು ಲೇಖನ, ವಿಮರ್ಶೆ ಎಲ್ಲಾ ಕಡೆ ಇದೇ ಹೆಸರು ಬಳಕೆಯಾಯಿತು" ಎಂದಿದ್ದಾರೆ.

"ಭಾರತದಂತಹ ಮಡಿಮಂತಿಕೆ ದೇಶದಲ್ಲಿ ಇಂಥ ಪಾತ್ರಗಳನ್ನು ತೆರೆಮೇಲೆ ತರುವುದು ದೊಡ್ಡ ಚರ್ಚೆಯ ವಿಷಯವಾಯಿತು. ಆಗ ನಾನು 2003ರಲ್ಲಿ ಅರಂಭಿಸಿದಾಗ ಎಲ್ಲಾ ನಾಯಕಿಯರ ಜೊತೆ ಕಿಸ್ ಮಾಡುವ ವ್ಯಕ್ತಿ ಈತ ನೋಡಲು ಆಹಾ ಕ್ಷಣವಾಗಿತ್ತು ಎಂದು ಮಾತನಾಡುವ ವಿಷಯವಾಗಿತ್ತು" ಎಂದಿದ್ದಾರೆ.
"ಸಮಯ ಕಳೆದಂತೆ ಅದರ ಬಗ್ಗೆ ಅರಿತುಕೊಂಡೆ. ಜೊತೆಗೆ ನಾನು ಇದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇನೆ ಎನ್ನುವುದು ಅರಿವಾಯಿತು. ಬಾಕ್ಸ್ ಆಫೀಸ್ ನಲ್ಲಿ ಆ ಚಿತ್ರಗಳು ಉತ್ತಮ ಪ್ರದರ್ಶನ ನೀಡುತ್ತಿತ್ತು. ನಾನು ಆಗಲೇ ಸ್ಯಾಚುರೇಶನ್ ಪಾಯಿಂಟ್ ತಲುಪಿದ್ದೆ. ನನ್ನಲ್ಲಿ ಒಬ್ಬ ನಟನಿದ್ದಾನೆ ಎಂದು ನಾನು ಭಾವಿಸಿದೆ. ನಾನು ಒಬ್ಬ ನಟನಾಗಿ ಪ್ರಭುದ್ಧನಾಗಿದ್ದೇನೆ. ಆದರೆ ಅಂತಹ ಸ್ಕ್ರಿಪ್ಟ್ ಗಳೇ ನನ್ನ ಬಳಿ ಬರುತ್ತಿತ್ತು. ಇದರಿಂದ ನನಗೆ ಯಾವುದೇ ಸೃಜನಶೀಲ ಪಾತ್ರಗಳು ಸಿಕ್ಕಿಲ್ಲ" ಎಂದು ಇಮ್ರಾನ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಇಮ್ರಾನ್ ಹಶ್ಮಿ ಸಿನಿಮಾಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಸದ್ಯ ಚಹ್ರೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರಲ್ಲಿ ಬಿಗ್ ಬಿ ಅಮಿತಾಬ್ ಜೊತೆ ತೆರೆಹಂಚಿಕೊಂಡಿದ್ದಾರೆ. ಚೆಹ್ರೆ ಸಿನಿಮಾಗೆ ರೂಮಿ ಜಾಫ್ರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಿಯಾ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಹ್ರೆ ಸಿನಿಮಾ ಜೊತೆ ಇಮ್ರಾನ್, ಸಲ್ಮಾನ್ ಖಾನ್ ನಟನೆಯ ಟೈಗರ್-3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಟೈಗರ್-3 ಸಿನಿಮಾದ ಚಿತ್ರೀಕರಣ ಸದ್ಯ ರಷ್ಯಾದಲ್ಲಿ ನಡೆಯುತ್ತಿದೆ. ಈಗಾಗಲೇ ಸಲ್ಮಾನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











