ಕನ್ನಡ ಚಿತ್ರದಲ್ಲಿ ನಟಿಸಿದ್ದ ನಾಯಕಿ ಜೊತೆ ಮದುವೆಯಾಗದೇ ಒಂದೇ ಮನೆಯಲ್ಲಿ ವಾಸಿಸಲು ಮುಂದಾದ ಇಮ್ರಾನ್ ಖಾನ್ ...!
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಇಮ್ರಾನ್ ಖಾನ್ ಅತ್ಯುತ್ತಮ ಉದಾಹರಣೆ..
ಹೌದು. ಇಮ್ರಾನ್ ಖಾನ್ .. ಎರಡು ದಶಕದ ಹಿಂದೆ ಹೆಣ್ಮಕ್ಳ ಪಾಲಿಗೆ ಕನಸಿನ ಹುಡುಗನಾಗಿದ್ದ ನಾಯಕ. ಆಮೀರ್ ಖಾನ್ ಪ್ರಭಾವಳಿಯಲ್ಲಿಯೇ ಚಿತ್ರರಂಗಕ್ಕೆ ಬಂದ ಇಮ್ರಾನ್ ಖಾನ್, ತಮ್ಮ ಮೊದಲನೇ ಸಿನಿಮಾ ಜಾನೇ ತು ಯಾ ಜಾನೇ ನಾ ಚಿತ್ರದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದರು. ಆ ನಂತರ.. ಒಂದಾದ ಮೇಲೊಂದು ಸಿನಿಮಾ ಮಾಡಿದರು. ಇದರ ನಡುವೆ ಹೆಣ್ಮಕ್ಕಳ ಕನಸು ಮತ್ತು ಮನಸನ್ನ ನುಚ್ಚು ನೂರು ಮಾಡಿ ತಮ್ಮ ಬಾಲ್ಯದ ಗೆಳತಿ ಅವಂತಿಕಾ ಮಲಿಕ್ ಅವರನ್ನ 2011ರಲ್ಲಿ ಮದುವೆಯೂ ಆದರು.

ಆದರೆ.. ಅದೇನಾಯ್ತೋ ಗೊತ್ತಿಲ್ಲ. ಬಾನೆತ್ತರದಲ್ಲಿ ತೇಲುತ್ತಿದ್ದ ಇಮ್ರಾನ್ ಖಾನ್ ಏಕಾಏಕಿ ಪಾತಾಳಕ್ಕೆ ಕುಸಿದರು. ಮಾಡಿದ ಸಿನಿಮಾ ಗೆಲ್ಲಲಿಲ್ಲ. ವ್ಯೆಯಕ್ತಿಕ ಬದುಕಿನಲ್ಲಿ ಕೂಡ ನೆಮ್ಮದಿ ಸಿಗಲಿಲ್ಲ. ಇಮ್ರಾನ್ ಮತ್ತು ಅವಂತಿಕಾ ನಡುವೆ ಹೊಂದಾಣಿಕೆಯಾಗಲಿಲ್ಲ. ಈ ಕಾರಣಕ್ಕೆ 2019ರಲ್ಲಿ ತಲಾಖ್ ಪಡೆದು ದೂರವಾದ ಇಮ್ರಾನ್ ಮತ್ತು ಆವಂತಿಕಾ ತಮ್ಮ ಈ ಕಷ್ಟದ ಅನುಭವಗಳಿಂದ ಜೀವನ ಸ್ಫೂರ್ತಿಯನ್ನ ಪಡೆದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.
ಆದರೆ ಈಗ ಇಮ್ರಾನ್ ಖಾನ್‌ಗೆ ಒಂಟಿ ಬದುಕು ಸಾಕೆನಿಸಿದೆ. ಜಂಟಿಯಾಗಲು ಮನಸು ಮತ್ತೊಮ್ಮೆ ಹಾತೊರೆಯುತ್ತಿದೆ. ಹೀಗಾಗಿಯೇ ಲೇಖಾ ವಾಷಿಂಗ್ಟನ್ ಜೊತೆ ಒಂದೇ ಸೂರಿನಡಿ ಇರುವ ನಿರ್ಧಾರಕ್ಕೆ ಬಂದಿದ್ದಾರೆ ಇಮ್ರಾನ್ ಖಾನ್.

ಹೌದು, ಅಸಲಿಗೆ ನಿಮಗೆ ಗೊತ್ತಿರಲಿ .. ಅವಂತಿಕಾ ಅವರಿಂದ ಅಂತರ ಕಾಪಾಡಿಕೊಂಡ ನಂತರ ಇಮ್ರಾನ್ ಖಾನ್ ಮುಖ ಲೇಖಾ ಕಂಡ ನಂತರ ಅರಳಿತ್ತು. ಲೇಖಾ ಅವರಿಗೂ ಕೂಡ ಇಮ್ರಾನ್ ಹೃದಯದ ಮೇಲೆ ಲೇಖನಿಯಿಂದ ಪ್ರೇಮ ಕವನ ಬರೆಯುವ ಬಯಕೆಯಾಯಿತು. ಹೀಗಾಗಿಯೇ ಕೊರೊನಾ ಭಯದಿಂದ ವಿಶ್ವದೆಲ್ಲೆಡೆ ಜನ ಕಂಗಲಾದ ಸಮಯದಲ್ಲಿ ಇಮ್ರಾನ್ ಮತ್ತು ಲೇಖಾ ಪ್ರೇಮದ ಅಮಲಿನಲ್ಲಿ ವಾಲಾಡುತ್ತಿದ್ದರು. ಆಮೀರ್ ಖಾನ್ ಮಗಳು ಇರಾ ಮದುವೆಯಲ್ಲಿ ಜೊತೆ ಜೊತೆಯಾಗಿಯೇ ಬಂದು ನವ ಜೋಡಿಗೆ ಹರಸಿ ಹಾರೈಸಿದರು. ಎಲ್ಲರೆದುರು ನಾವು ಇಬ್ಬರು ಈಗ ಲವ್ ಬರ್ಡ್ಸ್ ಎಂದು ಘಂಟಾ ಘೋಷವಾಗಿ ಹೇಳಿದರು
ಹೀಗೆ ಹೆಚ್ಚು ಕಡಿಮೆ ಕಳೆದ ಐದು ವರ್ಷದಿಂದ ಒಬ್ಬರನ್ನೊಬ್ಬರು ಇಷ್ಟ ಪಡ್ತಿರುವ ಇಮ್ರಾನ್ ಖಾನ್ ಮತ್ತು ಲೇಖಾ ವಾಷಿಗ್ಟಂನ್ ಈಗ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿ ಬದುಕಿನ ಬಂಡಿಯನ್ನೇಳೆಯಲು ಸಿದ್ಧರಾಗಿದ್ದಾರೆ. ಒಂದೇ ಮನೆಯಲ್ಲಿ ವಾಸ ಮಾಡುವ ನಿರ್ಧಾರಕ್ಕೆ ಬಂದ ಹಿನ್ನೆಲೆ, ಮನೆಗೆ ಬೇಕಾದ ಪಾತ್ರೆ-ಪಗಡೆಗಳನ್ನ ಖರೀದಿಸುತ್ತಿದ್ದೇವೆ ಎಂದಿದ್ದಾರೆ.

ಹಾಸ್ಯನಟ ರೌನಕ್ ರಜನಿಯ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡಿರುವ ಇಮ್ರಾನ್ ಖಾನ್, ಅವಂತಿಕಾ ಅವರಿಂದ ದೂರವಾಗಿ ಒಂಟಿಯಾಗಿದ್ದಾಗ ನನ್ನ ಮನೆಯಲ್ಲಿ ಕೇವಲ ಮೂರೇ ಮೂರು ಪ್ಲೇಟ್‌ಗಳಿದ್ದವು. ಆದರೆ ಲೇಖಾ ಬಂದ ನಂತರ 15 ಪ್ಲೇಟ್‌ಗಳಿವೆ ಎಂದಿದ್ದಾರೆ. ಪಾನೀಯಗಳನ್ನ ಕುಡಿಯಲು, ಸವಿಯಲು ನಾನಾ ತರಹದ ಗ್ಲಾಸ್‌ಗಳನ್ನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಇದರ ಜೊತೆ ಮದುವೆ.. ವಿಚ್ಛೇದನ.. ಗೆಲುವು..ಸೋಲುಗಳ ಬಗ್ಗೆಯೂ ಮನ ಬಿಚ್ಚಿ ಈ ಸಂದರ್ಶನದಲ್ಲಿ ಇಮ್ರಾನ್ ಮಾತನಾಡಿದ್ದಾರೆ. ಸದ್ಯಕ್ಕೆ ಇಮ್ರಾನ್ ಖಾನ್ ಅವರ ಈ ಮಾತು ಬಾಲಿವುಡ್‌ನಲ್ಲಿ ಚರ್ಚೆಗೀಡಾಗುತ್ತಿದೆ. ಲಿವ್ ಇನ್ ಸಂಬಂಧಕ್ಕೆ ಮುಂದಾದ ಇಮ್ರಾನ್ ಖಾನ್ ಮತ್ತು ಲೇಖಾ ವಾಷಿಂಗ್ಟನ್ ಅವರಿಗೆ ಒಂದು ವರ್ಗ ಶುಭಾಶಯವನ್ನೂ ಕೋರುತ್ತಿದೆ.


Click it and Unblock the Notifications