ಶಾರುಖ್ ಖಾನ್ ಹಾಡು ಹಾಡಿದ WWE ಕುಸ್ತಿಪಟು ಜಾನ್ ಸೀನಾ; ಕಿಂಗ್ ಖಾನ್ ಏನಂದ್ರು?
ಖ್ಯಾತ ಡಬ್ಲ್ಯೂಡಬ್ಲ್ಯೂಇ(WWE) ರೆಸ್ಲರ್ ಜಾನ್ ಸೀನಾಗೆ ಭಾರತ ದೇಶ ಅಂದ್ರೆ ವಿಶೇಷ ಅಭಿಮಾನ. ಆಗಾಗ್ಗೆ ಭಾರತ, ಭಾರತೀಯರು ಹಾಗೂ ಆಚಾರ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಕೆಲವೊಮ್ಮೆ ಭಾರತದ ಸಿನಿಮಾಗಳ ಬಗ್ಗೆ ಕೂಡ ಪೋಸ್ಟ್ ಮಾಡಿದ್ದಾರೆ.
ಸದ್ಯ ಬಾಲಿವುಡ್ ನಟ ಶಾರುಖ್ ಖಾನ್‌ಗಾಗಿ ಜಾನ್ ಸೀನಾ ಹಾಡೊಂದು ಹಾಡಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಜಾನ್ ಸೀನಾಗೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಲೇಟೆಸ್ಟ್ ಗೀತೆಗಳನ್ನು ಕೂಡ ಕಳುಹಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಸದ್ಯ ಶಾರುಖ್ ಖಾನ್ ಪೋಸ್ಟ್‌ಗೆ ಜಾನ್ ಸೀನಾ ಕೂಡಲೇ ಸ್ಪಂದಿಸಿದ್ದಾರೆ. "ನಿಮ್ಮ ಸಿನಿಮಾಗಳ ಮೂಲಕ ಪ್ರಪಂಚದಲ್ಲಿ ಸಾಕಷ್ಟು ಜನಕ್ಕೆ ಸಂತೋಷ ಕೊಡುತ್ತಿದ್ದೀರಾ, ಅದಕ್ಕಾಗಿ ನಿಮಗೆ ಧನ್ಯವಾದ" ಎಂದು ರಿಪ್ಲೇ ಮಾಡಿದ್ದಾರೆ. ಇತ್ತೀಚೆಗೆ ಜಾನ್ ಸೀನಾ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವೇಳೆ ಭಾರತದ ರೆಸ್ಲರ್ ಗುರ್ವ್ ಸಿಹ್ರಾ ವಿಡಿಯೋ ಮಾಡಿ ಜಾನ್ ಸೀನಾ ಅವರೊಟ್ಟಿಗೆ ಶಾರುಖ್ ಖಾನ್ ಸಿನಿಮಾ ಹಾಡು ಹಾಡಿದ್ದರು.
'ದಿಲ್ ತೋ ಪಾಗಲ್ ಹೈ' ಚಿತ್ರದ 'ಭೋಲಿ ಸಿ ಸೂರತ್' ಹಾಡಿನ ಸಾಲುಗಳನ್ನು ಅಭಿಮಾನಿ ಜೊತೆ ಸೇರಿ ಜಾನ್ ಸೀನಾ ಹಾಡಿದ್ದರು. ಈ ವೀಡಿಯೋ ವೈರಲ್ ಆಗಿ ಶಾರುಖ್ ಖಾನ್ ಕಣ್ಣಿಗೆ ಬಿದ್ದಿತ್ತು. ಗುರ್ವ್ ಸಿಹ್ರಾ, ಜಾನ್ ಅವರನ್ನು "ಅತ್ಯಂತ ದೊಡ್ಡ ಶಾರುಖ್ ಖಾನ್ ಅಭಿಮಾನಿ" ಎಂದು ಪರಿಚಯಿಸಿದರು, ಅದಕ್ಕೆ ಜಾನ್ ಉತ್ತರಿಸಿದರು.
"ನೀವು ಬೆಳವಣಿಗೆಯ ಹಾದಿಯನ್ನು ಆರಿಸಿಕೊಂಡಾಗ ನೀವು ಏನು ಕಲಿಯಬೇಕು ಎಂದು ಗೊತ್ತಾಗಲ್ಲ. ಇಲ್ಲಿ ನಾವು ಜಿಮ್‌ನಲ್ಲಿದ್ದೇವೆ, ಆದ್ದರಿಂದ ನಾವು ಬೆಳೆಯಲು ಪ್ರಯತ್ನಿಸುತ್ತಿದ್ದೇವೆ, ಆದರೆ ಹಲವಾರು ಬೆಳವಣಿಗೆಯ ಮಾರ್ಗಗಳಿವೆ ಮತ್ತು ನಾನು ಹಾಡನ್ನು ಕಲಿಯಲು ನನ್ನ ಅತ್ಯುತ್ತಮ ಪ್ರಯತ್ನ ಮಾಡಲಿದ್ದೇನೆ" ಎಂದಿದ್ದರು. ಜಿಮ್‌ನಲ್ಲಿ ವರ್ಕ್‌ಔಟ್ ಮತ್ತು ಶಾರುಖ್ ಖಾನ್ ಹಾಡುಗಳನ್ನು ಹಾಡುತ್ತಿದ್ದೇವೆ" ಎಂದ ಬರೆದು ಗುರ್ವ್ ಸಿಹ್ರಾ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ಗುರ್ವ್ ಸಿಹ್ರಾ ಇನ್‌ಸ್ಟಾ ವಿಡಿಯೋವನ್ನು ಬಾಲಿವುಡ್ ಬಾಯ್ಸ್ ಟ್ವಿಟ್ಟರ್ ಪೇಜ್‌ನಲ್ಲಿ ಶೇರ್ ಮಾಡಲಾಗಿತ್ತು. ಇದಕ್ಕೆ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದರು. ಒಟ್ಟಾರೆ ಕಿಂಗ್ ಖಾನ್ ಹಾಗೂ ಜಾನ್ ಸೀನಾ ಟ್ವಿಟ್ಟರ್ ಸಂಭಾಷಣೆ ವೈರಲ್ ಆಗುತ್ತಿದೆ. ಇನ್ನು ಶಾರುಖ್ ಖಾನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 4 ವರ್ಷಗಳ ಬಳಿಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಈ ವರ್ಷ ಕಿಂಗ್ ಖಾನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರುವುದು ಅನುಮಾನ. ಕಾರಣ ಶಾರುಖ್ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆ ಚಿತ್ರದಲ್ಲಿ ನಟಿಸುತ್ತಾರೆ, ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಬರೀ ಅಂತೆ ಕಂತೆ ಸುದ್ದಿ ಮಾತ್ರ ವೈರಲ್ ಆಗುತ್ತಿದೆ. ಅಧಿಕೃತವಾಗಿ ಯಾವುದೇ ಸಿನಿಮಾ ಶುರುವಾಗಿಲ್ಲ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಬಾಲಿವುಡ್ ಎಂಟ್ರಿ ಬಗ್ಗೆಯೂ ಭಾರೀ ಚರ್ಚೆ ನಡೀತಿದೆ. ಈಗಾಗಲೇ 'ದಿ ಆರ್ಚೀಸ್' ಎನ್ನುವ ಸಿನಿಮಾದಲ್ಲಿ ಆಕೆ ನಟಿಸಿದ್ದರು. ಆ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಹಾಗಾಗಿ ಸುಹಾನಾ ಬೆಳ್ಳಿತೆರೆಗೆ ಇನ್ನು ಎಂಟ್ರಿ ಕೊಟ್ಟಿಲ್ಲ. ಇನ್ನು ತಂದೆ ಮಗಳು ಒಟ್ಟಿಗೆ ನಟಿಸುವ ಬಗ್ಗೆಯೂ ಸಾಕಷ್ಟು ಚರ್ಚೆ ನಡೀತಿದೆ.
'ಕಿಂಗ್' ಎನ್ನುವ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೊಂದು ಆಕ್ಷನ್ ಎಂಟರ್‌ಟ್ರೈನರ್ ಆಗಿದ್ದು ಪಾತ್ರಕ್ಕೆ ಸುಹಾನಾ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ ಎಂದು ವರದಿ ಆಗಿದೆ. ಸುಜಯ್ ಘೋಷ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಶೀಘ್ರದಲ್ಲೇ 'ಕಿಂಗ್' ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.


Click it and Unblock the Notifications











