ಹುಟ್ಟೂರಿನಲ್ಲಿ ಅಹನ್ ಶೆಟ್ಟಿ ಜೊತೆಗೆ ನಟ ಸುನೀಲ್ ಶೆಟ್ಟಿ!
ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ತನ್ನ ಮಗನನ್ನು ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ. ಸುನೀಲ್ ಶೆಟ್ಟಿ ಪುತ್ರ ಅಹನ್ ಶೆಟ್ಟಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ಡಿ.3ರಂದು ಅಹನ್ ಶೆಟ್ಟಿ ಚೊಚ್ಚಲ ಚಲನಚಿತ್ರ 'ತಡಪ್' ವಿಶ್ವದಾದ್ಯಂತ ತೆರೆ ಕಾಣಲಿದೆ. ಮಗನ ಅದೃಷ್ಟ ಪರೀಕ್ಷೆ ಮಾಡುವ ಮುನ್ನ ಹುಟ್ಟೂರಿನ ಕಾರಣಿಕ ಶಕ್ತಿಗಳನ್ನು ಮರೆಯದ ಸುನೀಲ್ ಶೆಟ್ಟಿ ಮಗನ ಜೊತೆ ತನ್ನ ಆರಾಧ್ಯದೈವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಂಗಳೂರಿನಲ್ಲಿ ಮಗನ ಜೊತೆ ಸುನೀಲ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಪುತ್ರ ಅಹನ್ ಶೆಟ್ಟಿಯ ಚೊಚ್ಚಲ ಚಲನಚಿತ್ರ 'ತಡಪ್' ಪ್ರಮೋಷನ್ ಮಾಡಿದ ಸುನೀಲ್, 30ವರ್ಷಗಳ ಹಿಂದೆ ನನಗೆ ಸಿನಿಮಾದ ಮೊದಲ ಚೆಕ್ ನೀಡಿದ ಸಾಜಿದ್ ನಾಡಿಯಾಡ್ ವಾಲ ಈಗ ನನ್ನ ಮಗನ ಮೊದಲ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾಕತಾಳೀಯ ಎಂಬಂತೆ ಇಬ್ಬರ ಮೊದಲ ಸಿನಿಮಾ ಸಾಜಿದ್ ನಾಡಿಯಾಡ್ ವಾಲಾ ಅವರ ನಿರ್ಮಾಣದಲ್ಲೇ ತೆರೆಗೆ ಬರುತ್ತಿದೆ. ಈ ಮೂಲಕ ಓರ್ವ ನಿರ್ಮಾಪಕ ಎರಡು ತಲೆಮಾರನ್ನು ಬಾಲಿವುಡ್‌ಗೆ ಪರಿಚಯ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಅಂತ ಹೇಳಿದ್ದಾರೆ.
'ತಡಪ್' ಲವ್ ಸ್ಟೋರಿಯಿರುವ ಗಟ್ಟಿ ಕಥಾನಕದ ಸಿನಿಮಾ. ಡಿಸೆಂಬರ್ 3ರಂದು ಭಾರತ ಮಾತ್ರವಲ್ಲ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಸಿನಿಮಾ ಕೆಲಸ ಸಾಕಷ್ಟು ಹಿಂದೆಯೇ ಪೂರ್ಣಗೊಂಡಿದ್ದರೂ, ಕೊರೊನಾ ಕಾರಣದಿಂದ ಒಂದು ವರ್ಷದ ಬಳಿಕ ಇದೀಗ ರಿಲೀಸ್ ಮಾಡುತ್ತಿದ್ದೇವೆ. ಸಿನಿಮಾ ರಿಲೀಸ್ ಮಾಡಲು ಏಕಾಏಕಿ ಒಂದು ಒಳ್ಳೆಯ ಡೇಟ್ ಸಿಕ್ಕಿದ್ದು, ಪ್ರಚಾರಕ್ಕೆ ಒಂದು ತಿಂಗಳು ಮಾತ್ರ ಸಮಯ ದೊರಕಿದೆ ಎಂದು ಸುನೀಲ್ ಶೆಟ್ಟಿ ತನ್ನ ಮಗನ ಚಿತ್ರದ ಬಗ್ಗೆ ಹೇಳಿದ್ದಾರೆ.

ಹುಟ್ಟೂರಿನ ನಂಟು ತೆರೆದಿಟ್ಟ ಸುನೀಲ್ ಶೆಟ್ಟಿ!
ಇನ್ನು ತನ್ನ ಹುಟ್ಟೂರಿನ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಸುನೀಲ್ ಶೆಟ್ಟಿ, "ನಾನು ಮುಂಬೈಯಲ್ಲಿಯೇ ನೆಲೆಸಿದ್ದರೂ ಯಾವತ್ತೂ ಕರಾವಳಿಯ ಸಂಪರ್ಕ ಕೊಂಡಿಯನ್ನು ಕಳಚಿಕೊಂಡಿಲ್ಲ. ವರ್ಷ ವರ್ಷವೂ ಕರಾವಳಿಗೆ ಬಂದು ಇಲ್ಲಿನ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತೇನೆ. ಅಲ್ಲದೆ ನಮ್ಮ ಕುಟುಂಬದ ದೈವಾರಾಧನೆ, ನಾಗಾರಾಧನೆಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಇದೀಗ ಅಹನ್ ಶೆಟ್ಟಿ ತಾನೂ ಈ ಸಲ ಊರಿಗೆ ಬರುತ್ತೇನೆಂದು ಹೇಳಿದ್ದರಿಂದ ಒತ್ತಡದ ನಡುವೆ ಇಂದು ಮಂಗಳೂರಿಗೆ ಆಗಮಿಸಿದ್ದೇವೆ" ಎಂದು ಹೇಳಿದ್ದಾರೆ.

ಮಗನ ಆಸೆ ಪೂರೈಸಿದ ಸುನೀಲ್ ಶೆಟ್ಟಿ!
ಅಹನ್ ಶೆಟ್ಟಿಯ ಮನದ ಬಯಕೆಯಂತೆ ನಗರದ ಮುಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಯ ಹಾಗೂ ಶಿಮಂತೂರು ಶ್ರೀ ಆದಿ ಜನಾರ್ದನ ದೇವರ ದರ್ಶನ ಮಾಡಿ ಬಂದಿದ್ದಾರೆ. "ನನಗೆ ಬಪ್ಪನಾಡು ಶ್ರೀದುರ್ಗೆಯ ಅನುಗ್ರಹ ಸದಾ ಇತ್ತು. ಎಂತಹ ಕಷ್ಟದ ಸಂದರ್ಭದಲ್ಲಿಯೂ ಆಕೆಯ ಅಭಯ ಯಾವತ್ತೂ ನನ್ನ ಮೇಲೆ ಇದೆ. ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಐದಾರು ವರ್ಷಗಳ ಕಾಲ ಸಿನಿಮಾದಿಂದ ದೂರ ಇದ್ದೆ. ಇದೀಗ ಸಿನಿಮಾದತ್ತ ಮತ್ತೆ ಮುಖ ಮಾಡಿದ್ದೇನೆ. ಆದರೂ ಶ್ರೀದೇವಿಯ ಅನುಗ್ರಹದಿಂದ ಈಗಲೂ ಬಾಲಿವುಡ್‌ನಲ್ಲಿ ನನ್ನ ಬಗ್ಗೆ ಇರುವ ಕ್ರೇಜ್ ಹಿಂದಿನ ರೀತಿಯೇ ಇದೆ" ಎಂದು ತನ್ನ ಆರಾಧ್ಯ ದೈವ ಬಪ್ಪನಾಡು ದುರ್ಗಾಪರಮೇಶ್ವರಿ ಯ ಶಕ್ತಿಯನ್ನು ಕೊಂಡಾಡಿದ್ದಾರೆ ಸುನೀಲ್ ಶೆಟ್ಟಿ.

ತುಳುನಾಡಿನ ಪ್ರೋತ್ಸಾಹ ನೆನೆದ ನಟ!
"ಮುಂಬೈ ನಲ್ಲಿ ಸ್ಟಾರ್ ನಟನಾದರೂ ಹುಟ್ಟೂರಿನ ಜನರ ಪ್ರೀತಿಯ ಬಗ್ಗೆ ಮಾತನಾಡಿದ ಸುನೀಲ್ ಶೆಟ್ಟಿ, ನಾನು ಆ್ಯಕ್ಷನ್ ಹೀರೋ ಆದರೂ ತುಳುನಾಡಿನವರ ಪ್ರೋತ್ಸಾಹ ನನ್ನ ಮೊದಲ ಸಿನಿಮಾದಿಂದಲೇ ದೊರಕಿದೆ. ಇದೇ ಪ್ರೋತ್ಸಾಹ ಅಹನ್ ಶೆಟ್ಟಿ ಮೇಲೆಯೂ ಇರಲಿ ಎಂದು ಆಶಿಸುತ್ತೇನೆ" ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

ಮೊದಲ ಚಿತ್ರದ ಬಗ್ಗೆ ಖುಷಿ ಹಂಚಿಕೊಂಡ ಅಹನ್ ಅಹನ್ ಶೆಟ್ಟಿ!
ಸುದ್ದಿಗೋಷ್ಠಿಯಲ್ಲಿ ಸುನೀಲ್ ಶೆಟ್ಟಿ ಪುತ್ರ ಅಹನ್ ಶೆಟ್ಟಿ ಮಾತನಾಡಿ "ನನ್ನ ಪಾತ್ರ ಉತ್ತಮವಾಗಿ ಮೂಡಿ ಬಂದಿದೆ. ನಿಜವಾಗಿಯೂ ಇಂತಹ ಪಾತ್ರವನ್ನು ನೀಡಿರುವ ನಿರ್ಮಾಪಕ ಸಾಜಿದ್, ನಿರ್ದೇಶಕ ಮಿಲನ್ ಲುಥ್ರಿಯಾ ಹಾಗೂ ಸಿನಿಮಾ ನಾಯಕಿ ತಾರಾ ಸುತಾರಿಯಾ, ಸೌರಭ್ ಶುಕ್ಲಾ, ಕುಮುದ್ ಮಿಶ್ರಾ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ" ಎಂದು ಹೇಳಿದ್ದಾರೆ..
ಒಟ್ಟಿನಲ್ಲಿ ಕರಾವಳಿ ಮೂಲದ ಐಶ್ವರ್ಯಾ ರೈ, ಶಿಲ್ಪಾಶೆಟ್ಟಿ, ಸುನೀಲ್ ಶೆಟ್ಟಿ, ರೋಹಿತ್ ಶೆಟ್ಟಿ, ಶಿರೀಷ್ ಕುಂದರ್, ಚೀತಾ ಯಜ್ಞೇಶ್ ಶೆಟ್ಟಿ ಮತ್ತಿತರರು ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಬಿ ಟೌನ್ ಅಂಗಳಕ್ಕೆ ಕರಾವಳಿಯ ಮತ್ತೊಂದು ಕುಡಿ ಕಾಲಿಟ್ಟಿದೆ. ಸುನಿಲ್ ಶೆಟ್ಟಿ ಪುತ್ರ ಅಹನ್ ಶೆಟ್ಟಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ. ಈಗಾಗಲೇ ಅಹನ್ ಶೆಟ್ಟಿ ಸಹೋದರಿ ಆಥಿಯಾ ಶೆಟ್ಟಿ ಬಾಲಿವುಡ್‌ನಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದೀಗ ಅಹನ್ ಶೆಟ್ಟಿ ತಮ್ಮ ಚೊಚ್ಚಲ ಸಿನಿಮಾ 'ತಡಪ್' ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಡಿಸೆಂಬರ್ 3ರಂದು ತೆರೆಗೆ ಬರಲಿದೆ.


Click it and Unblock the Notifications











