ಮೋದಿ, ರಜನಿಕಾಂತ್, ಅಕ್ಷಯ್ ಬಳಿಕ ಬೇರ್ ಗ್ರಿಲ್ ಜೊತೆ 'ಇನ್ ಟು ದಿ ವೈಲ್ಡ್'ನಲ್ಲಿ ವಿಕ್ಕಿ ಕೌಶಲ್
ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಬೇರ್ ಗ್ರಿಲ್ ಅವರ ಇನ್ ಟು ದಿ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ತಮಿಳು ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದರು. ಈ ಸ್ಟಾರ್ ಗಳ ಸಾಲಿಗೆ ಈಗ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟ ವಿಕ್ಕಿ ಕೌಶಲ್ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗಷ್ಟೆ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಜಯ್ ದೇವಗನ್ ಈಗಾಗಲೇ ಮಾಲ್ಡೀವ್ಸ್ ತಲುಪಿದ್ದು, ಕಾರ್ಯಕ್ರಮದ ಚಿತ್ರೀಕರಣದಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಬ್ರಿಟನ್ ನ ಸಾಹಸಿ ಬೇರ್ ಗ್ರಿಲ್ ನಡೆಸಿಕೊಡುವ ವಿಶ್ವ ಪ್ರಸಿದ್ಧ ಇನ್ ಟು ವೈಲ್ಡ್ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್ ಭಾಗವಹಿಸುತ್ತಿರುವುದು ವಿಕ್ಕಿ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಈ ಕಾರ್ಯಕ್ರಮ ಮಾಲ್ಡೀವ್ಸ್ ನಲ್ಲಿ ಚಿತ್ರೀಕರಣ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಈ ಕಾರ್ಯಕ್ರಮದ ಚಿತ್ರೀಕರಣ ನಡೆಯಲಿದ್ದು, ವಿಕ್ಕಿ ಕೌಶಲ್ ಮಾಲ್ಡೀವ್ಸ್ ಪಯಣ ಬೆಳೆಸಲಿದ್ದಾರೆ ಎನ್ನಲಾಗುತ್ತಿದೆ.

ಫಿಟ್ನೆಸ್ ಉತ್ಸಾಹಿ ವಿಕ್ಕಿ ಕೌಶಲ್ ಅವರನ್ನು ಇನ್ ಟು ದಿ ವೈಲ್ಡ್ ನಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಅಂದಹಾಗೆ ವಿಕ್ಕಿ ಕೌಶಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 9 ವರ್ಷಗಳು ಕಳೆದಿವೆ. 2012ರಲ್ಲಿ ವಿಕ್ಕಿ ಕೌಶಲ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಗ್ಯಾಂಗ್ಸ್ ಆಫ್ ವಾಸೇಪುರ್ ನಲ್ಲಿ ಸಹಾಯಕ ನಿರ್ದೇಶಕರಾಗಿ ವಿಕ್ಕಿ ವೃತ್ತಿ ಜೀವನ ಪ್ರಾರಂಭ ಮಾಡಿದ್ದರು. ಅದೇ ವರ್ಷ ವಿಕ್ಕಿ ತೆರೆಮೇಲೆ ಮಿಂಚಿದ್ದರು.
ಬಳಿಕ ವಿಕ್ಕಿ ಕೌಶಲ್ ಅಭಿನಯದ ಮಸಾನ್ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಚಿತ್ರದಲ್ಲಿ ವಿಕ್ಕಿ ನಾಯಕನಾಗಿ ಮಿಂಚಿದ್ದರು. ರಿಚಾ ಚಡ್ಡಾ. ಶ್ವೇತಾ ತ್ರಿಪಾಠಿ, ಪಂಕಜ್ ತ್ರಿಪಾಠಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ವಿಮರ್ಶಾತ್ಮಕವಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಳಿಕ ವಿಕ್ಕಿ, ರಾಜಿ, ಸಂಜು, ಲಸ್ಟ್ ಸ್ಟೋರಿಸ್, ಮನ್ಮಾರ್ಜಿಯಾನ್, ಉರಿ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. ಉರಿ ಸಿನಿಮಾ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಈ ಸಿನಿಮಾದ ಅತ್ಯುತ್ತಮ ನಟನೆಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ಗೆದ್ದರು.
ಸದ್ಯ ವಿಕ್ಕಿ ಕೌಶಲ್ ಮೇಘನಾ ಗುಲ್ಜರ್ ಅವರ ಸಾರಥ್ಯದಲ್ಲಿ ಬರುತ್ತಿರುವ ಬಯೋಪಿಕ್, ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸರ್ದಾರ್ ಉಧಮ್ ಸಿಂಗ್ ಬಯೋಪಿಕ್ ನಲ್ಲೂ ನಟಿಸುತ್ತಿದ್ದಾರೆ. ಮಿ.ಲೆಲೆ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ನಡುವೆ ವಿಕ್ಕಿ ಮದುವೆ ವಿಚಾರ ಕೂಡ ಸದ್ದು ಮಾಡುತ್ತಿದೆ. ವಿಕ್ಕಿ ಕೌಶಲ್ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಜೊತೆ ಹಸೆಮಣೆ ಏಲಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ವರ್ಷದ ಕೊನೆಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











