ಕೇವಲ 48ರ ಹರೆಯದಲ್ಲಿ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದ ಖ್ಯಾತ ನಟ..!
ಇವತ್ತು ಇದ್ದಂಗೆ ನಾಳೆ ಇರಲ್ಲ. . ಈಗಿದ್ದಂಗೆ, ಇನ್ನೆರಡು ಸೆಕೆಂಡ್ ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ವಿಕಾಸ್ ಸೇಥಿ ಅವರ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ.
ಹೌದು, ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ.. ಕಹೀ ಥೋ ಹೋಗಾ.. ಸಸುರಾಲ್ ಸೀಮರ್ ಕಾ.. ಕಸೌತಿ ಜಿಂದಗಿ ಕೀ.. ಹೀಗೆ ಒಂದಾದ ಮೇಲೊಂದು ಧಾರಾವಾಹಿಗಳ ಮೂಲಕ ಉತ್ತರ ಭಾರತದಲ್ಲಿ ಜನ ಮನ ಗೆದ್ದು, ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದ ವಿಕಾಸ್ ಸೇಥಿ ಕೇವಲ 48 ಪ್ರಾಯದಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾರೆ. ಹೃದಯಾಘಾತದಿಂದ ಇಂದು ಬೆಳ್ಳಿಗ್ಗೆ ಆರು ಘಂಟೆಗೆ ನಿಧನರಾಗಿದ್ದಾರೆ.

ತಮ್ಮ ಫ್ಯಾಮಿಲಿ ಸಮಾರಂಭದಲ್ಲಿ ಭಾಗಿಯಾಗಲು ವಿಕಾಸ್ ಸೇಥಿ ಅವರಿಗೆ, ನಾಸಿಕ್ ತಲುಪಿದ ನಂತರ ವಾಂತಿಯಾಗಲು ಶುರುವಾಗಿತ್ತು. ಇದನ್ನು ಕಡೆಗಣಿಸಿದ ವಿಕಾಸ್ ಆಸ್ಪತ್ರೆಗೆ ತೆರಳಲು ಹಿಂಜರಿದರು. ಹೀಗಾಗಿಯೇ ಮರು ದಿನ ವಿಕಾಸ್ ಸೇಥಿ ಅವರ ಪತ್ನಿ ಜಾನ್ವಿ, ವೈದ್ಯರನ್ನು ಮರು ದಿನ ಮನೆಗೆ ಬರುವಂತೆ ಕೇಳಿಕೊಂಡಿದ್ದರು. ಅದರಂತೆ ಮರು ದಿನ ವಿಕಾಸ್ ಅವರನ್ನು ಬೆಳ್ಳಗ್ಗೆ ನಿದ್ರೆಯಿಂದ ಎದ್ದೇಳಿಸಲು ಜಾನ್ವಿ ತೆರಳಿದಾಗ ಅವರಿಗೆ ಆಘಾತ ಕಾದಿತ್ತು. ಹೃದಯಾಘಾತದಿಂದ ವಿಕಾಸ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇನ್ನೂ 48 ವರ್ಷದ ವಿಕಾಸ್ ಸೇಥಿ ಅವರಿಗೆ ಎರಡು ಅವಳಿ ಜವಳಿ ಮಕ್ಕಳಿದ್ದು, ವಿಕಾಸ್ ಅವರ ಅಕಾಲಿನ ನಿಧನದಿಂದ ಶಾಕ್‌ಗೊಳಗಾದ ಹಿಂದಿ ಕಿರುತೆರೆ ಉದ್ಯಮ ವಿಕಾಸ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದೆ. ಸಂತಾಪವನ್ನೂ ಸೂಚಿಸಿದೆ. ಗೌರಿ ಗಣೇಶ್ ಹಬ್ಬದ ಸಂಭ್ರಮದಲ್ಲಿದ್ದ ಹಿಂದಿ ಕಿರುತೆರೆ ವಲಯದಲ್ಲಿ ಸೂತಕದ ಛಾಯೆ ಆವರಿಸಿದೆ. ಇನ್ನೂ ವಿಕಾಸ್ ಕೇವಲ ಕಿರುತೆರೆಯಲ್ಲಿ ಮಾತ್ರ ಹೆಸರುವಾಸಿಯಾಗಿರಲಿಲ್ಲ. ಹಿರಿತೆರೆಯಲ್ಲಿ ಕೂಡ ವಿಕಾಸ್ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. ಕರಣ್ ಜೋಹರ್ ನಿರ್ದೇಶನದ ಕಭಿ ಖುಷಿ ಕಭಿ ಘಮ್ ಚಿತ್ರದಲ್ಲಿ ಕರೀನಾ ಕಪೂರ್ ಸ್ನೇಹಿತನ ಪಾತ್ರವನ್ನು ಕೂಡ ವಿಕಾಸ್ ನಿರ್ವಹಿಸಿದ್ದರು. ಅಜಯ್ ದೇವಗನ್ ಮತ್ತು ಅಕ್ಷಯ್ ಖನ್ನಾ ಅಭಿನಯದ ದಿವಾನಾಪನ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. 2019ರಲ್ಲಿ ಬಂದ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ಧರಮ್ ಪಾತ್ರವನ್ನು ಕೂಡ ನಿರ್ವಹಿಸಿದ್ದರು.

ಅಂದ್ಹಾಗೇ ಕಿರುತೆರೆ ಮತ್ತು ಹಿರಿತೆರೆ ಎರಡರಿಂದ ಕೂಡ ಅಂತರವನ್ನು ಕೆಲ ದಿನಗಳಿಂದ ಕಾಪಾಡಿಕೊಂಡಿದ್ದ ವಿಕಾಸ್ ಸೇಥಿ, ಕೆಲ ದಿನಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು ಎಂಬ ಸುದ್ದಿ ಪಕ್ಕದ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ವಿಕಾಸ್ ಸೇಥಿ ಅವರಲ್ಲಿ ದೈಹಿಕವಾಗಿ ಅನೇಕ ಬದಲಾವಣೆ ಕಂಡು ಬಂದಿದ್ದವು. ಎಷ್ಟರ ಮಟ್ಟಿಗೆ ಅಂದರೆ ಒಂದು ಕಾಲದಲ್ಲಿ ಆ ಕಾಲದ ನಾಯಕರಿಗೆ ಪೈಪೋಟಿ ನೀಡುವಂತೆ ಸಪೂರವಾಗಿದ್ದ, ಸುಂದರವಾಗಿದ್ದ ವಿಕಾಸ್ ಗುರುತು ಸಿಗಲಾಗದಷ್ಟು ಇತ್ತೀಚೆಗೆ ಬದಲಾಗಿದ್ದರು.


Click it and Unblock the Notifications











