ಬಾಲಿವುಡ್ ನಟಿ ಐಶ್ವರ್ಯ ರೈ ಕಾರಿಗೆ ಗುದ್ದಿದ ಬಸ್
ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ. ಸಿನಿಮಾ ತಾರೆಯರು ಕೂಡ ರಸ್ತೆ ಅಪಘಾತಗಳಲ್ಲಿ ಗಾಯಗೊಂಡಿರುವುದು, ಜೀವವನ್ನೇ ಕಳೆದುಕೊಂಡಿರುವುದು ಇದೆ. ಇದೀಗ ಬಾಲಿವುಡ್ ನಟಿ ಐಶ್ವರ್ಯ ರೈಗೆ ಕಾರಿಗೆ ಮುಂಬೈನ ಲೋಕಲ್ ಬಸ್ ಡಿಕ್ಕಿ ಹೊಡೆದಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲಿ ನಟಿ ಐಶ್ವರ್ಯ ರೈ ಕಾರಿಗೆ ಕೆಂಪು ಬಣ್ಣದ ಬಸ್ ಹಿಂದಿನಿಂದ ಬಂದು ಗುದ್ದಿರುವುದನ್ನು ನೋಡಬಹುದು. ಕೂಡಲೇ ಒಂದಷ್ಟು ಜನ ಅಲ್ಲಿ ಜಮಾಯಿಸಿದ್ದಾರೆ. ಆಕೆಯ ಅಂಗರಕ್ಷಕರು ಕೆಳಗೆ ಇಳಿದು ಬಂದು ನೋಡಿದ್ದಾರೆ. ಆದರೆ ಕಾರಿಗೆ ಯಾವುದೇ ಹಾನಿ ಆಗಿಲ್ಲ. ಬಸ್ ಡ್ರೈವರ್ ಜೊತೆ ಆಕೆಯ ಅಂಗರಕ್ಷಕರು ಮಾತುಕತೆ ನಡೆಸಿದ್ದು ಕೆಲ ಸಮಯದ ಬಳಿಕ ಕಾರ್ ಅಲ್ಲಿಂದ ಹೊರಟಿದೆ.

ಟೊಯೋಟಾ ವೆಲ್‌ಫೈರ್ ಕಾರಿನ ಒಳಗೆ ನಟಿ ಐಶ್ವರ್ಯಾ ರೈ ಇದ್ರಾ? ಅಥವಾ ಆಕೆಯ ಕುಟುಂಬ ಸದಸ್ಯರು ಯಾರಾದರೂ ಇದ್ರಾ? ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಅಭಿಮಾನಿಗಳಂತೂ ಈ ವಿಚಾರ ಕೇಳಿ ಶಾಕ್ ಆಗಿದ್ದಾರೆ. ನೆಚ್ಚಿನ ನಟಿ ಹಾಗೂ ಅವರ ಕುಟುಂಬದ ಸದಸ್ಯರ ಕ್ಷೇಮದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಐಶ್ವರ್ಯ ರೈ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ.
ಐಶ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳವುದನ್ನು ಕಮ್ಮಿ ಮಾಡಿದ್ದಾರೆ. ಕೊನೆಯದಾಗಿ ಫಿಲ್ಮ್ ಮೇಕರ್ ಅಶುತೋಷ್ ಗೌವಾರಿಕರ್ ಮಗನ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಪತಿ ಅಭಿಷೇಕ್ ಜೊತೆ ಆಕೆ ಕೊನಾರ್ಕ್ ಗೌವಾರಿಕರ್ ಮದುವೆಗೆ ಬಂದಿದ್ದರು. ಈ ಮೂಲಕ ಡಿವೋರ್ಸ್ ವದಂತಿಗೆ ದಂಪತಿ ತೆರೆ ಎಳೆದಿದ್ದರು.
ಕೊನೆಯದಾಗಿ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳಲ್ಲಿ ಐಶ್ ಬಣ್ಣ ಹಚ್ಚಿದ್ದರು. ಮಣಿರತ್ನಂ ನಿರ್ದೇಶನದ ಈ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ಮಿಂಚಿದ್ದರು. 1994ರಲ್ಲಿ ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದ ಐಶ್ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಕನ್ನಡ ಫಿಲ್ಮ್ ಮೇಕರ್ಸ್ ಕೂಡ ಆಕೆಯನ್ನು ಸ್ಯಾಂಡಲ್‌ವುಡ್‌ಗೆ ಕರೆತರುವ ಪ್ರಯತ್ನ ಮಾಡಿದ್ದರು. ಆದರೆ ಯಾರು ಸಕ್ಸಸ್ ಆಗಲಿಲ್ಲ.
ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಐಶ್ವರ್ಯ ರೈ ತಮಿಳಿನ 'ಇರುವರ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. 'ಔರ್ ಪ್ಯಾರ್ ಹೋ ಗಯಾ' ಆಕೆಯ ಚೊಚ್ಚಲ ಬಾಲಿವುಡ್ ಸಿನಿಮಾ. ಮುಂದೆ ಒಂದೊಂದೇ ಸಿನಿಮಾದಲ್ಲಿ ನಟಿಸುತ್ತಾ ನಟನೆಯ ಪಟ್ಟುಗಳನ್ನು ಕಲಿಯುತ್ತಾ ಹೋದರು. ಶಾರುಕ್ ಖಾನ್ ಜೊತೆ ನಟಿಸಿದ 'ದೇವದಾಸ್' ಚಿತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. 'ಹಮ್ ದಿಲ್ ದೇ ಚುಕೇ ಸನಮ್', 'ಜೋದಾ ಅಕ್ಬರ್', 'ಗುರು', 'ಧೂಮ್-2', 'ಥಾಲ್' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದರು.
ಪದ್ಮಶ್ರೀ, ಫಿಲ್ಮ್‌ಫೇರ್, ಐಫಾ, ಜೀ ಸಿನಿ ಅವಾರ್ಡ್ಸ್ ಸೇರಿ ಸಾಕಷ್ಟು ಪ್ರಶಸ್ತಿ ಗೌರವಗಳು ಐಶ್ವರ್ಯ ರೈ ಅವರಿಗೆ ಲಭಿಸಿದೆ. ಮತ್ತೆ ಆಕೆಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಮದುವೆ ಬಳಿಕ ಐಶ್ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದರು. ಇತ್ತೀಚಿಗೆ ಅದು ಮತ್ತಷ್ಟು ಕಮ್ಮಿ ಆಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ರ್ಯಾಂಪ್ ಏರಿ ಹೆಜ್ಜೆ ಹಾಕುತ್ತಾರೆ.


Click it and Unblock the Notifications











