"ಪವನ್ ಸೊಂಟ ಮುಟ್ಟಿದ ಬಳಿಕ ಕೋಪ ಬಂತು, ಅಳು ಬರುವಂತಾಯ್ತು"; ಮೌನ ಮುರಿದ ಅಂಜಲಿ
ವೇದಿಕೆಯಲ್ಲೇ ನಟಿ ಅಂಜಲಿ ಸೊಂಟ ಮುಟ್ಟಿದ ಭೋಜ್‌ಪುರಿ ನಟ ಪವನ್ ಸಿಂಗ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪವನ್ ಸಿಂಗ್ ಹಾಗೂ ಅಂಜಲಿ ಇಬ್ಬರೂ ಭಾಗವಹಿಸಿದ್ದರು. ವೇದಿಕೆ ಏರಿ ಅಂಜಲಿ ಮಾತನಾಡುವ ವೇಳೆ ಪಕ್ಕದಲ್ಲೇ ಇದ್ದ ನಟ ಪವರ್ ಸಿಂಗ್ ಆಕೆಯ ಸೊಂಟಕ್ಕೆ ಕೈ ಹಾಕಿದ್ದರು. ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ನಟಿ ಅಂಜಲಿ ಮೌನ ಮುರಿದಿದ್ದಾರೆ.
ನಾಲ್ಕೈದು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಇನ್ನು ನಟ ಪವನ್ ಸಿಂಗ್ ಅಸಭ್ಯವಾಗಿ ಸೊಂಟ ಮುಟ್ಟಿದಾಗ ನಟಿ ತಿರುಗಿ ನೋಡಿ ನಕ್ಕಿರುವಂತೆ ಕಂಡಿತ್ತು. ಈ ಬಗ್ಗೆಯೂ ಅಂಜಲಿ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಘಟನೆ ಸಂಬಂಧ 2 ವೀಡಿಯೋ ಹಂಚಿಕೊಂಡು ಮಾತನಾಡಿದ್ದಾರೆ.
ಅಷ್ಟಕ್ಕೂ ಕಾರ್ಯಕ್ರಮದಲ್ಲಿ ಆಗಿದ್ದೇನು? ಆ ಘಟನೆಯಿಂದ ತಾವು ಒತ್ತಡಕ್ಕೆ ಒಳಗಾಗಿದ್ದು ಯಾಕೆ ಎನ್ನುವುದನ್ನು ತಿಳಿಸಿದ್ದಾರೆ.

"ಕಳೆದ ಎರಡು ದಿನಗಳಿಂದ ನಾನು ತುಂಬಾ ಗೊಂದಲಕ್ಕೀಡಾಗಿದ್ದೇನೆ. ಲಕ್ನೋ ಘಟನೆಯ ಬಗ್ಗೆ ನಾನು ಯಾಕೆ ಮಾತನಾಡಲಿಲ್ಲ, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಅಲ್ಲೇ ಪವನ್ ಸಿಂಗ್ ಕೆನ್ನೆಗೆ ಬಾರಿಸಲಿಲ್ಲ ಕೇಳಿ ಸಾಕಷ್ಟು ಜನ ಮೆಸೇಜ್ ಮಾಡುತ್ತಿದ್ದಾರೆ. ಪವನ್ ಸೊಂಟ ಮುಟ್ಟಿದ್ದಾಗ ನಾನು ನಗುತ್ತಿದ್ದೆ, ಅದನ್ನು ಎಂಜಾಯ್ ಮಾಡ್ತಿದ್ದೆ ಅಂತೆಲ್ಲಾ ಕೆಲವರು ಮೀಮ್ಸ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಆ ರೀತಿ ಸ್ಪರ್ಶಿಸುವುದನ್ನು ನಾನು ಸಂತೋಷಪಡುತ್ತೇನೆ ಅಥವಾ ಎಂಜಾಯ್ ಮಾಡ್ತೀನಿ ಅಂತ ನಿಮಗೂ ಅನ್ನಿಸುತ್ತಾ?" ಎಂದು ಅಂಜಲಿ ಪ್ರಶ್ನಿಸಿದ್ದಾರೆ.
"ನನ್ನ ಸೊಂಟದಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಪವನ್ ಹೇಳುತ್ತಿದ್ದರು. ಅದು ನನ್ನ ಹೊಸ ಸೀರೆ. ಬ್ಲೌಸ್‌ನ ಟ್ಯಾಗ್ ಇರಬಹುದು ಎಂದುಕೊಂಡಿದ್ದೆ. ಹಾಗಾಗಿ ಪವನ್ ಮಾತಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದೆ ತಿರುಗಿ ಮಾತನಾಡಲು ಮುಂದಾದೆ. ಏನೋ ಸಿಕ್ಕಿಕೊಂಡಿದೆ ಎಂದು ಮತ್ತೆ ಹೇಳಿದಂತಾಯಿತು. ಆದ್ದರಿಂದ ಬಹುಶಃ ಏನೋ ನಿಜವಾಗಿಯೂ ಸಿಲುಕಿಕೊಂಡಿದೆ ಎಂದು ನಾನು ಭಾವಿಸಿದ್ದೆ. ನಂತರ, ನನ್ನ ತಂಡದ ಸದಸ್ಯರನ್ನು ಏನಾದರೂ ಸಿಲುಕಿಕೊಂಡಿದೆಯೇ ಎಂದು ನಾನು ಕೇಳಿದಾಗ, ಏನೂ ಇಲ್ಲ ಅಂದ್ರು. ಆಗ ನನಗೆ ಬೇಸರವಾಯಿತು, ಕೋಪ ಬಂತು. ಅಳಬೇಕು ಅನಿಸಿತು. ಆದರೆ ಅಲ್ಲಿದ್ದವರೆಲ್ಲಾ ಪವನ್ ಅಭಿಮಾನಿಗಳು ಹಾಗಾಗಿ ಏನು ಮಾಡಬೇಕೆಂದು ತೋಚಲಿಲ್ಲ" ಎಂದು ಅಂಜಲಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿ ಚರ್ಚೆ ಶುರುಆವಗುತ್ತಿದ್ದಂತೆ ಪವನ್ ಸಿಂಗ್ ತಂಡವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ ಎಂದು ಅಂಜಲಿ ತಿಳಿಸಿದ್ದಾರೆ. ಆದರೆ ಆತನ ಪಿಆರ್ ಟೀಂ ಬಹಳ ಸ್ಟ್ರಾಂಗ್ ಎಂದು ಕೆಲವರು ಹೇಳಿದ್ರು ಅದಕ್ಕೆ ಸುಮ್ಮನಾದೆ ಎಂದಿದ್ದಾರೆ. "ಯಾವುದೇ ಹುಡುಗಿಯ ಅನುಮತಿಯಿಲ್ಲದೆ ಅವಳನ್ನು ಆ ರೀತಿ ಮುಟ್ಟುವುದನ್ನು ನಾನು ಒಪ್ಪುವುದಿಲ್ಲ. ಅದು ತುಂಬಾ ತಪ್ಪು" ಎಂದಿದ್ದಾರೆ.
ಮಾತು ಮುಂದುವರೆಸಿರುವ ನಟಿ ಅಂಜಲಿ ರಾಘವ್ "ಹರಿಯಾಣದಲ್ಲಿ ಇಂತಹ ಘಟನೆ ನಡೆದಿದ್ದರೆ ನಾನು ಪ್ರತಿಕ್ರಿಯಿಸುವ ಅಗತ್ಯವೂ ಇರಲಿಲ್ಲ. ಅಲ್ಲಿನ ಜನರೇ ಉತ್ತರ ಕೊಡುತ್ತಿದ್ದರು. ನಾನು ಇನ್ನು ಮುಂದೆ ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಲ್ಲ. ಈಗ ನಾನು ಸಂತೋಷವಾಗಿದ್ದೀನಿ ಅಷ್ಟೇ ಸಾಕು" ಎಂದು ವಿವರಿಸಿದ್ದಾರೆ.
ಭೋಜ್‌ಪುರಿ ಸಿನಿಮಾಗಳಲ್ಲಿ ನಟನಾಗಿ ಗಾಯಕನಾಗಿ ಪವನ್ ಸಿಂಗ್ ಗುರ್ತಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಇನ್ನು ಅಂಜಲಿ ಸೊಂಟ ಮುಟ್ಟಿದ ಪವನ್ ನಡೆಯನ್ನು ತಮಿಳು ನಟಿ ಕಸ್ತೂರಿ ಕೂಡ ಟೀಕಿಸಿದ್ದರು. ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು.


Click it and Unblock the Notifications











