Anushka Sharma: ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ
ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ನಟಿಯಾಗಿರುವ ಜೊತೆಗೆ ನಿರ್ಮಾಪಕಿಯೂ ಹೌದು. ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿರುವ ಅನುಷ್ಕಾ ಶರ್ಮಾ ಈ ವರೆಗೆ ಕೆಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಅನುಷ್ಕಾ ಶರ್ಮಾರ ನಿರ್ಮಾಣ ಸಂಸ್ಥೆ ಸಿನಿಮಾ ಮಾರುಕಟ್ಟೆಯಲ್ಲಿ ಯಶಸ್ವಿಯೂ ಆಗಿತ್ತು. ಆದರೆ ಅಚಾನಕ್ಕಾಗಿ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರಗೆ ಬಂದಿದ್ದಾರೆ ನಟಿ ಅನುಷ್ಕಾ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಪ್ರಕಟಿಸಿ ಕಾರಣ ತಿಳಿಸಿರುವ ಅನುಷ್ಕಾ ಶರ್ಮಾ, ''ಕಮರ್ಷಿಯಲ್ ಸಿನಿಮಾಗಳ ಸಿದ್ಧ ಮಾದರಿಯನ್ನು ಮುರಿಯಲೆಂದು ನಾನು 'ಕ್ಲೀನ್ ಸ್ಪೇಟ್ ಫಿಲಮ್ಸ್' ನಿರ್ಮಾಣ ಸಂಸ್ಥೆಯನ್ನು ಪ್ರಾರಂಭ ಮಾಡಿದೆ. ಅದಕ್ಕೆ ನನ್ನ ಸಹೋದರ ಕಮಲೇಶ್ ಶರ್ಮಾ ಸಹ ಜೊತೆಯಾದ. ನಾವು ಹಲವು ಉತ್ತಮ ಸಿನಿಮಾಗಳನ್ನು ನೀಡಿದ್ದೇವೆ. ಇದರ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಆದರೆ ಈಗ ನಾನು ಕ್ಲೀನ್ ಸ್ಲೇಟ್ ಫಿಲಮ್ಸ್‌ನ ಜವಾಭ್ದಾರಿಯಿಂದ ಕೆಳಗೆ ಇಳಿಯುತ್ತಿದ್ದೇನೆ'' ಎಂದಿದ್ದಾರೆ ಅನುಷ್ಕಾ.

''ನಾನು ಈಗ ಜವಾಬ್ದಾರಿಯುತ ತಾಯಿ ಜೊತೆಗೆ ನಟಿ ಸಹ. ಈ ಎರಡೂ ಕಾರ್ಯವನ್ನು ನಾನು ಸರಿಯಾಗಿ ಸಮತೋಲಿತವಾಗಿ ಮಾಡಬೇಕಿದೆ. ಇರುವ ಕಡಿಮೆ ಸಮಯವನ್ನು ಈ ಎರಡಕ್ಕಷ್ಟೆ ನಾನು ವಿನಿಯೋಗಿಸಲು ನಿಶ್ಚಯಿಸಿದ್ದೇನೆ. ಹಾಗಾಗಿ ನಾನು ನಿರ್ಮಾಣ ಸಂಸ್ಥೆಯಿಂದ ಹೊರಗೆ ಬಂದಿದ್ದೇನೆ. ನನಗೆ ನನ್ನ ಸಹೋದರ ಕಮಲೇಶ್ ಮೇಲೆ ಬಹಳ ಭರವಸೆ ಇದೆ. ನನ್ನ ಕನಸಿನ ಸಂಸ್ಥೆ ಒಳ್ಳೆಯ ವ್ಯಕ್ತಿಯ ಕೈಯಲ್ಲಿದೆ ಅದನ್ನು ಅವನು ಮುಂದುವರೆಸಿಕೊಂಡು ಹೋಗುತ್ತಾನೆಂಬ ವಿಶ್ವಾಸವಿದೆ'' ಎಂದಿದ್ದಾರೆ ಅನುಷ್ಕಾ ಶರ್ಮಾ.
''ಕ್ಲೀನ್ ಸ್ಲೇಟ್ ಫಿಲಮ್ಸ್' ನನ್ನ ಕನಸಾಗಿತ್ತು. ಇನ್ನು ಮುಂದೆಯೂ ನಾನು ಕ್ಲೀನ್ ಸ್ಲೇಟ್ ಫಿಲಮ್ಸ್‌ನ ಅಭಿಮಾನಿಯಾಗಿ, ಹಿತೈಶಿಯಾಗಿ ಮುಂದುವರೆಯುತ್ತೇನೆ. ಆದರೆ ನಟಿಯಾಗಿ ಮಾತ್ರವೇ ಉಳಿಯುತ್ತೀನಿ'' ಎಂದಿದ್ದಾರೆ ಅನುಷ್ಕಾ ಶರ್ಮಾ.
ಮಗು ಆಗ ಬಳಿಕ ಸಿನಿಮಾದಿಂದ ದೂರ ಉಳಿದಿದ್ದ ಅನುಷ್ಕಾ ಶರ್ಮಾ ಇದೀಗ ಮತ್ತೆ ನಟನೆಗೆ ಪಾದಾರ್ಪಣೆ ಮಾಡಿದ್ದು, ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಜೀವನ ಆಧರಿಸಿದ 'ಚಾಕಡ್ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಹೊರತಾಗಿ ತಮ್ಮ ನಿರ್ಮಾಣ ಸಂಸ್ಥೆಯಾಗಿದ್ದ 'ಕ್ಲೀನ್ ಸ್ಲೇಟ್ ಫಿಲಮ್ಸ್'ನಿಂದ 'ಮೈ' ಹಾಗೂ 'ಖಾಲಾ' ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವು ಅವರ ನಿರ್ಮಾಣದ ಕೊನೆಯ ಸಿನಿಮಾಗಳಾಗಲಿವೆ ಎನ್ನಲಾಗುತ್ತಿದೆ.
'ಎನ್‌ಎಚ್ 10', 'ಪರಿ', 'ಬುಲ್‌ಬುಲ್' ಸಿನಿಮಾಗಳನ್ನು ಅನುಷ್ಕಾ ಶರ್ಮಾ ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದಾರೆ. ಜೊತೆಗೆ 'ಪಾತಾಳ್ ಲೋಕ್' ಹೆಸರಿನ ವೆಬ್ ಸರಣಿಯನ್ನೂ ನಿರ್ಮಾಣ ಮಾಡಿದ್ದಾರೆ. ಈ ವೆಬ್ ಸರಣಿ ಸಖತ್ ಹಿಟ್ ಆಗಿತ್ತು.


Click it and Unblock the Notifications











