ಅವನ ಟಾರ್ಚರ್ ತಾಳಲಾರದೇ ಮೈಮೇಲೆ ಬಟ್ಟೆ ಇದ್ಯೋ ಇಲ್ವೋ ಗೊತ್ತಿಲ್ದೆ ಓಡಿ ಬಂದಿದ್ದೆ: ಫ್ಲೋರಾ ಸೈನಿ
'ಕೋದಂಡರಾಮ', 'ಧಿಮಾಕು' ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿರುವ ನಟಿ ಫ್ಲೋರಾ ಸೈನಿ ತನ್ನ ಬಾಯ್‌ಫ್ರೆಂಡ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆತನನ್ನು ನಂಬಿ ಹೋಗಿದ್ದಕ್ಕೆ ಕೊಂಚವೂ ಕನಿಕರ ಇಲ್ಲದೇ ಚಿತ್ರ ಹಿಂಸೆ ಕೊಟ್ಟಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೆಹಲಿಯ ಮಹ್ರೌಲಿಯ ತನ್ನ ಫ್ಲ್ಯಾಟ್‌ನಲ್ಲಿ ಆಫ್ತಾಬ್ ಪೂನಾವಾಲಾ ತನ್ನ ಪ್ರಿಯತಮೆ ಶ್ರದ್ಧಾಳ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 3 ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡಿದ್ದ. ನಂತರ ಅರಣ್ಯ ಪ್ರದೇಶದಲ್ಲಿ ಶ್ರದ್ಧಾಳ ದೇಹದ ತುಂಡುಗಳನ್ನು ಬಿಸಾಡಿದ್ದ. ಬಹುಭಾಷಾ ನಟಿ ಫ್ಲೋರಾ ಸೈನಿ ಕೂಡ ತನ್ನ ಭಾಯ್‌ಫ್ರೆಂಡ್ ಇದೇ ರೀತಿ ಚಿತ್ರಹಿಂಸೆ ಕೊಟ್ಟಿದ್ದ. ಆತನಿಂದ ಏನೆಲ್ಲಾ ಹಿಂಸೆ ಅನುಭವಿಸಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಕೆಯ ಹೇಳಿಕೆ ಈಗ ಸಖತ್ ಸದ್ದು ಮಾಡ್ತಿದೆ.
ಚಂಢೀಗರ್ ಮೂಲದ ನಟಿ ಫ್ಲೋರಾ ಸೈನಿಗೆ ಆಶಾ ಸೈನಿ ಎನ್ನುವ ಮತ್ತೊಂದು ಹೆಸರು ಇದೆ. ಮಾಡೆಲಿಂಗ್ ಫೀಲ್ಡ್‌ನಲ್ಲಿ ಗುರ್ರಿಸಿಕೊಂಡ್ಡ ಆಶಾ ಚಿತ್ರರಂಗಕ್ಕೆ ಬರೋದು ಕಷ್ಟ ಆಗಲಿಲ್ಲ. 1999ರಲ್ಲಿ 'ಪ್ರೇಮಕೋಸಂ' ತೆಲುಗು ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಮುಂದೆ ಕನ್ನಡ ಸಿನಿಮಾಗಳಲ್ಲೂ ನಟಿಸಿದರು.

ಬಹಳ ಹಿಂಸೆ ಕೊಡುತ್ತಿದ್ದ
ಶ್ರದ್ಧಾ ವಾಲ್ಕರ್ ಜೀವನದಲ್ಲಿ ನಡೆದಂತೆ ನನ್ನ ಜೀವನದಲ್ಲೂ ನಡೆದಿತ್ತು ಎಂದು ಫ್ಲೋರಾ ಸೈನಿ ಹೇಳಿಕೊಂಡಿದ್ದಾರೆ. "ತನ್ನ ಜೀವನದಲ್ಲೂ ಇದೇ ರೀತಿಯ ಘಟನೆ ನಡೆಯಿತು. ನನ್ನ ಬಾಯ್ ಫ್ರೆಂಡ್, ಮೊದಲು ನನ್ನನ್ನು ನನ್ನ ಕುಟುಂಬದಿಂದ ದೂರ ಮಾಡಿದ್ದ. ಮನೆಯಿಂದ ನಾನು ಹೊರ ಬಂದ ಕೆಲವೇ ದಿನಗಳಲ್ಲಿ ಆತನ ನಿಜ ಬಣ್ಣ ಗೊತ್ತಾಗಿತ್ತು. ನನಗೆ ಬಹಳ ಹಿಂಸೆ ಕೊಡುತ್ತಿದ್ದ. ಪ್ರತಿ ದಿನ ಕಾರಣ ಇಲ್ಲದೇ ನನಗೆ ಹೊಡೆಯುತ್ತಿದ್ದ.

ಕೊಲ್ಲುವುದಾಗಿ ಬೆದರಿಸಿದ್ದ
"ಅವನಿಗಾಗಿ ಎಲ್ಲರನ್ನು ಬಿಟ್ಟು ಹೋದರೆ ನನಗೆ ಹೊಡೆಯುತ್ತಿದ್ದ. ಹಿಂಸಿಸುತ್ತಿದ್ದ. ಮೊದಲಿಗೆ ಯಾಕೆ ಆತ ಹೀಗೆ ಹೊಡೆಯುತ್ತಿದ್ದಾನೆ ಎಂದು ಗೊತ್ತಾಗಲಿಲ್ಲ. ಆದರೂ ಆತ ಒಳ್ಳೆಯವನು ಎಂದು ನಂಬಿದ್ದೆ. ನಾನೇ ಏನಾದರೂ ತಪ್ಪು ಮಾಡಿದ್ನಾ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡಿದ್ದೆ. ಆದರೆ ಹಿಂದೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲಾದರೂ ಹೋಗಿಬಿಡುತ್ತೇನೆ ಎಂದೆ. ಹಾಗೆ ಮಾಡಿದರೆ ನನ್ನನ್ನು, ನನ್ನ ಪೋಷಕರನ್ನು ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದ"

ಅಲ್ಲಿಂದ ಓಡಿ ಬಂದುಬಿಟ್ಟಿದ್ದೆ
"ತನ್ನ ಮಾಜಿ ಪ್ರಿಯಕರ ಗೌರವ್ ದೋಷಿ ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಹಿಂಸೆ ಕೊಟ್ಟಿದ್ದ ಎಂದು ಆ ದಿನಗಳನ್ನು ಫ್ಲೋರಾ ನೆನಪಿಸಿಕೊಂಡಿದ್ದಾರೆ. ಒಂದು ದಿನ ರಾತ್ರಿ ಮನಸೋಇಚ್ಛೆ ಹೊಡೆದಿದ್ದ. ನನ್ನ ದವಡೆ ಮುರಿದು ಪೆಟ್ಟಾಗಿತ್ತು. ಅವನ ತಂದೆ ಫೋಟೊ ತೋರಿಸುತ್ತಾ ಅವರ ಮೇಲೆ ಆಣೆ ಮಾಡಿ ಹೇಳುತ್ತೀನಿ ನಿನ್ನನ್ನು ಇಂದು ಕೊಂದುಬಿಡುತ್ತೇನೆ ಎಂದ. ನನಗೆ ಫೋಟೊ ತೋರಿಸಿದ ಮೇಲೆ ಆತ ಅತ್ತ ತಿರುಗುತ್ತಿದ್ದಂತೆ ನಮ್ಮ ತಾಯಿ ಕೂಗಿದಂತೆ ಭಾಸವಾಯಿತು. ಕೂಡಲೇ ನನ್ನ ಮೈಮೇಲೆ ಬಟ್ಟೆ ಇದ್ಯೋ ಇಲ್ವೋ ಎಂದು ನೋಡದೇ ಓಡಿ ಬಂದುಬಿಟ್ಟೆ"

ಪೊಲೀಸರಿಗೆ ದೂರು ನೀಡಿದ್ದೆ
"ಅಲ್ಲಿಂದ ಓಡಿ ನಮ್ಮ ತಾಯಿಯ ಮನೆಗೆ ಬಂದುಬಿಟ್ಟೆ. ಇನ್ನೆಂದೂ ಆತನ ಬಳಿಗೆ ಹೋಗಲಿಲ್ಲ. ನಂತರ ಪೊಲೀಸರಿಗೆ ದೂರು ನೀಡಲು ಹೋಗಿದ್ದೆ. ಅವರು ನನ್ನ ಮಾತು ನಂಬಲಿಲ್ಲ. ಕೊನೆಗೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದ ಮೇಲೆ ಅದನ್ನು ದಾಖಲಿಸಿಕೊಂಡರು" ಎಂದು ಫ್ಲೋರಾ ಸೈನಿ ವಿವರಿಸಿದ್ದಾರೆ. ಫ್ಲೋರಾ ತೆಲುಗು, ಕನ್ನಡ ಜೊತೆಗೆ ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ನ 'ಬೇಡಿಯಾ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.


Click it and Unblock the Notifications











