ವಿಕ್ಕಿ-ಕತ್ರಿನಾ ಮದುವೆ ಬಗ್ಗೆ ಹೀಗಾ ಹೇಳೋದು ಕಂಗನಾ!
ವಿಕ್ಕಿ ಕೌಶಲ್, ಕತ್ರಿನಾ ಕೈಫ್ ವಿವಾಹ ಬಾಲಿವುಡ್‌ನ ದೊಡ್ಡ ಸುದ್ದಿಯಾಗಿದೆ. ಇವರಿಬ್ಬರ ಮದುವೆ ಸುದ್ದಿ ಮುಂದೆ ಇತರ ಸುದ್ದಿಗಳು ಮಂಕಾಗಿವೆ.
ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಈ ಜೋಡಿ ವಿವಾಹವಾಗುತ್ತಿದ್ದು ಎಲ್ಲಿ ನೋಡಿದರೂ ಇವರ ಮದುವೆಯದ್ದೇ ಸುದ್ದಿ. ಈಗಾಗಲೇ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಈ ಜೋಡಿಯ ವಿವಾಹದಲ್ಲಿ ಪಾಲ್ಗೊಳ್ಳಲೆಂದು ರಾಜಸ್ಥಾನಕ್ಕೆ ಆಗಮಿಸಿದ್ದಾರೆ. ಮದುವೆ ಸಹ ಪ್ರಾರಂಭವಾಗಿದೆ.
ಈ ನಡುವೆ ಬಾಲಿವುಡ್‌ನಲ್ಲಿ ಮಾತ್ರವಲ್ಲ ದೇಶದಲ್ಲಿ ಏನೇ ಮುಖ್ಯ ಘಟನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ, ಏನಾದರೊಂದು ವಿವಾದ ಹುಟ್ಟುಹಾಕುವ ಪ್ರತಿಭಾನ್ವಿತ ನಟಿ ಕಂಗನಾ ರನೌತ್ ಈ ತಾರಾ ಜೋಡಿಯ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿಕ್ಕಿ ಕೌಶಲ್, ಕತ್ರಿನಾ ಹೆಸರು ಹೇಳದೆ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿರುವ ಕಂಗನಾ, ಕತ್ರಿನಾರನ್ನು ಹೊಗಳಿ, ವಿಕ್ಕಿಯನ್ನು 'ವಿಫಲ ನಟ' ಎಂದು ಪರೋಕ್ಷವಾಗಿ ಮೂದಲಿಸಿದಂತೆ ತೋರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
''ಯಶಸ್ವಿ ಹಾಗೂ ಹಣವಂತ ಪುರುಷರು ತಮಗಿಂತಲೂ ಬಹಳ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ಮದುವೆ ಆಗುತ್ತಿದ್ದ ಕತೆಗಳನ್ನು ನಾವು ಚಿಕ್ಕವರಿದ್ದಾಗ ಕೇಳುತ್ತಿದ್ದೆವು. ಆದರೆ ಮಹಿಳೆಯರಿಗೆ, ತನ್ನ ಪತಿಗಿಂತಲೂ ಹೆಚ್ಚು ಯಶಸ್ವಿಯಾಗುವ ಅವಕಾಶಗಳೇ ಇರಲಿಲ್ಲ. ತನಗಿಂತ ಕಿರಿಯ ಪುರುಷರನ್ನು ಮದುವೆ ಆಗುವುದಿರಲಿ, ಒಂದು ನಿಗದಿತ ವಯಸ್ಸು ತಲುಪಿದ ಮೇಲೆ ಮದುವೆ ಆಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ'' ಎಂದಿದ್ದಾರೆ ಕಂಗನಾ.
''ಅಂಥಹುದರಲ್ಲಿ ಯಶಸ್ವಿ, ಸಿರಿವಂತ ಬಾಲಿವುಡ್‌ನ ಮಹಿಳೆಯರು ತಮಗಿಂತ ಕಿರಿಯ ನಟನನ್ನು ವಿವಾಹವಾಗುತ್ತಿರುವುದು ನೋಡಲು ಖುಷಿಯಾಗುತ್ತದೆ. ಇವರು ಲಿಂಗ ಭೇದವನ್ನು ಒಡೆದು ಹಾಕುತ್ತಿದ್ದಾರೆ. ಲಿಂಗ ಭೇದವನ್ನು ತೊಡೆದು ಹಾಕುತ್ತಿರುವ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಅಭಿನಂದನೆಗಳು'' ಎಂದಿದ್ದಾರೆ ನಟಿ ಕಂಗನಾ.
ಕಂಗನಾ ರನೌತ್ ಮದುವೆ ಬಗ್ಗೆಯೂ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಿರುತ್ತವೆ. ಕೆಲ ವರ್ಷಗಳ ಹಿಂದೆ ಅವರು ನಟ ಹೃತಿಕ್ ರೋಷನ್ ಜೊತೆ ಸಂಬಂಧದಲ್ಲಿದ್ದರು. ಆದರೆ, ಆ ಸಂಬಂಧ ಮುರಿದು ಬಿದ್ದಿದ್ದು ಮಾತ್ರವೇ ಅಲ್ಲದೆ ನ್ಯಾಯಾಲಯದ ಮೆಟ್ಟಿಲು ಸಹ ಏರಿತು. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿರುವ ಕಂಗನಾ, ''ಇನ್ನೈದು ವರ್ಷಗಳಲ್ಲಿ ನನಗೆ ಮದುವೆ ಆಗಿ ಮಕ್ಕಳು ಸಹ ಆಗಿರುತ್ತವೆ'' ಎಂದಿದ್ದಾರೆ. ''ನಾನೀಗ ಒಂದು ಸಂತೋಶದಾಯಕ ಸಂಬಂಧದಲ್ಲಿದ್ದೇನೆ. ನನ್ನ ಜೊತೆಗಾರ ನನ್ನನ್ನು ಬೆಂಬಲಿಸುವವನು, ನನ್ನಂತೆ ಆಲೋಚಿಸುವವನೂ ಆಗಿದ್ದಾನೆ'' ಎಂದಿದ್ದರು.
ನಟಿ ಕಂಗನಾ ಇತ್ತೀಚೆಗೆ ತನ್ನ ಸಿನಿಮಾಗಳಿಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರಿಗೆ ಹೋಲಿಸಿ ಕಂಗನಾ ರನೌತ್ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದರು. ಕಂಗನಾ ವಿರುದ್ಧ ದೇಶದ ಹಲವು ಕಡೆಗಳಲ್ಲಿ ದೂರುಗಳು ದಾಖಲಾಗಿವೆ. ಕಂಗನಾಗೆ ಬೆದರಿಕೆ ಕರೆಗಳು ಸಹ ಬಂದಿದ್ದವು.
ಕಂಗನಾ ರನೌತ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಸಿಖ್ ಪ್ರತಿಭಟನಾಕಾರರು ಕ್ಷಮೆಗೆ ಒತ್ತಾಯಿಸಿದ್ದರು. ಪ್ರತಿಭಟನಾಕಾರರು ತಮ್ಮ ಕಾರು ತಡೆದ ವಿಡಿಯೋವನ್ನು ಪ್ರಕಟಿಸಿದ್ದ ನಟಿ ಕಂಗನಾ, ''ಇದು ನನ್ನನ್ನು ಕೊಲ್ಲುವ ಯತ್ನ'' ಎಂದಿದ್ದರು. ಪೊಲೀಸರು, ನನ್ನ ಭದ್ರತಾ ಸಿಬ್ಬಂದಿ ಇಲ್ಲದೇ ಇದ್ದಿದ್ದರೆ ನನ್ನ ಸಾಮೂಹಿಕ ಹತ್ಯೆ ಆಗುತ್ತಿತ್ತು, ಎಂಥಹಾ ಭಾರತದಲ್ಲಿ ನಾವು ಬದುಕುತ್ತಿದ್ದೇವೆ'' ಎಂದು ಕಂಗನಾ ಹೇಳಿದ್ದರು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಕಂಗನಾ ಕಾರನ್ನು ಮುಂದೆ ಬಿಡಲಾಯಿತು.


Click it and Unblock the Notifications











