2024 ರ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರನೌತ್ ಸ್ಪರ್ಧೆ ಖಚಿತ: ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧೆ
ಪ್ರತಿಭಾನ್ವಿತ ನಟಿ ಕಂಗನಾ ರನೌತ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳ ವಿಷಯಕ್ಕೆ ಸುದ್ದಿಯಾಗದೆ, ರಾಜಕೀಯ ವಿಷಯಕ್ಕೆ ಸಕತ್ ಸುದ್ದಿಯಾಗುತ್ತಿದ್ದಾರೆ. ನಟನೆಯಿಂದ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದ ನಟಿ ಈಗ ಬಿಜೆಪಿ ಪಕ್ಷದ ಬೆಂಬಲಿಗರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವರದಿಯಾಗಿದೆ.
ದೇಶದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಾಮಾನಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಎಲ್ಲಾ ಕೆಲಸಗಳಿಗೂ ಪ್ರಬಲ ಬೆಂಬಲಿಗರಾಗಿದ್ದಾರೆ. ಕಂಗನಾ ರನೌತ್ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಸ್ವಲ್ಪ ಸಮಯದಿಂದ ಉಂಟಾಗಿದ್ದ ಈ ಸುದ್ದಿಗೆ ಆಕೆಯ ತಂದೆ ಅಮರ್ದೀಪ್ ರನೌತ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.

ಚುನಾವಣೆಗೆ ಇಳಿಯಲಿದ್ದಾರೆ ಕಂಗನಾ
ನ್ಯೂಸ್ 18 ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ನಟಿ ಕಂಗನಾ ರನೌತ್ ಸ್ಪರ್ಧಿಸಲಿದ್ದಾರೆ ಎಂದು ಕಂಗನಾ ತಂದೆ ಅಮರ್ದೀಪ್ ರನೌತ್ ಖಚಿತಪಡಿಸಿದ್ದಾರೆ. ಆದರೆ, ಕಂಗನಾ ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಪಕ್ಷ ನಿರ್ಧರಿಸಿಲ್ಲ ಎಂದು ಅವರು ಒತ್ತಿ ಹೇಳಿದರು.
ಇಲ್ಲಿ ಗಮನಿಸಬೇಕಾದ ವಿಷಯವೆಮದರೇ, ಕಂಗನಾ ರನೌತ್ ಅವರು ಇತ್ತೀಚೆಗೆ ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಾದ ನಂತರ ಅವರ ಅಭಿಪ್ರಾಯಗಳು ಆರ್‌ಎಸ್‌ಎಸ್ ತತ್ವವನ್ನು ಹೋಲುತ್ತವೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಅವರು ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಬಂದಿದೆ.
ಶ್ರೀಕೃಷ್ಣ ಆಶೀರ್ವಾದವಿದ್ದರೇ ಚುನಾವಣೆಗೆ ಇಳಿಯುವೆ: ಕಂಗನಾ
ಈ ಹಿಂದೆ, ಕಂಗನಾ ರನೌತ್ ಅವರು ಗುಜರಾತ್‌ಗೆ ಭೇಟಿ ನೀಡಿದ್ದರು. ಪ್ರಸಿದ್ಧ ದ್ವಾರಕಾಧೀಶ ಮತ್ತು ಶ್ರೀ ಸೋಮನಾಥ ಜ್ಯೋತಿರ್ಲಿಂಗ ದೇಗುಲಗಳಿಗೆ ಭೇಟಿ ನೀಡಿದಾಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದರು. ಚುನಾವಣೆ ಕುರಿತು ಪ್ರಶ್ನಿಸಿದಾಗ, "ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ (ಶ್ರೀಕೃಷ್ಣ ಆಶೀರ್ವಾದ ಇದ್ದರೇ ಚುನಾವಣೆ ಎದುರಿಸುತ್ತೇನೆ)" ಎಂದು ಕಂಗನಾ ಹೇಳಿಕೆ ನೀಡಿದ್ದರು.

ಇನ್ನು, ಕಂಗನಾ ರನೌತ್ ಸಿನಿಮಾಗಳ ಬಗ್ಗೆ ಮಾತನಾಡುವುದಾದರೇ, ಕಂಗನಾ ಕೊನೆಯದಾಗಿ ಸರ್ವೇಶ್ ಮೇವಾರಾ ಅವರ ಆಕ್ಷನ್ ಥ್ರಿಲ್ಲರ್ 'ತೇಜಸ್'ನಲ್ಲಿ ಕಾಣಿಸಿಕೊಂಡಿದ್ದರು. ಇದು ಒಂದು ಬಯೋಪಿಕ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂತಹ ಕಮಾಲ್ ಮಾಡಲಿಲ್ಲ.
ಮುಂದೆ ನಟಿ ಕಂಗನಾ ದೇಶದ ತುರ್ತು ಪರಿಸ್ಥಿತಿ ಕುರಿತು ಮಾಡಿರುವ 'ಎಮರ್ಜಿನ್ಸಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಚರಿತ್ರೆಯಾಗಿದೆ. ಇದರಲ್ಲಿ ಕಂಗನಾ ರನೌತ್ ಪಿಎಂ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌಧರಿ ಮತ್ತು ಮಿಲಿಂದ್ ಸೋಮನ್ ಸಹ ನಟಿಸಿದ್ದಾರೆ. ಈ ಚಿತ್ರ 2024 ರ ಬಹು ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ.


Click it and Unblock the Notifications











