ರಿಪ್ಡ್ ಜೀನ್ಸ್ ಚರ್ಚೆ: ಯುವಕರು ಭಿಕ್ಷುಕರಂತೆ ಕಾಣುತ್ತಿದ್ದಾರೆ ಎಂದ ಕಂಗನಾ
ಟ್ವಿಟ್ಟರ್ ತುಂಬಾ 'ರಿಪ್ಡ್ ಜೀನ್ಸ್'ನದ್ದೇ ಬಿಸಿ-ಬಿಸಿ ಚರ್ಚೆ. ಹೊಸ ವಿಷಯವೊಂದು ಚರ್ಚೆ ಆಗುತ್ತಿದ್ದು ಅಲ್ಲಿ ನಟಿ ಕಂಗನಾ ತನ್ನ ಅಭಿಪ್ರಾಯ ದಾಖಲಿಸಲಿಲ್ಲವೆಂದರೆ ಆದೀತೆ?
ಉತ್ತರಾಖಂಡ್ ಬಿಜೆಪಿ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಅವರಿಗೆ ಮಹಿಳೆಯರು 'ರಿಪ್ಡ್ ಜೀನ್ಸ್' (ಹರಿದ ಡಿಸೈನ್‌ನ ಜೀನ್ಸ್ ಪ್ಯಾಂಟ್) ತೊಡುವುದು ಇಷ್ಟವಾಗದೆ, 'ರಿಪ್ಡ್ ಜೀನ್ಸ್ ತೊಡುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡಬಲ್ಲರು' ಎಂದು ಅಸಹನೆ ಹೊರಹಾಕಿದ್ದಾರೆ.
ಉತ್ತರಾಖಂಡ್ ಸಿಎಂ ಹೇಳಿಕೆಯನ್ನು ಹಲವರು ಖಂಡಿಸಿದ್ದಾರೆ. ಉತ್ತರಾಖಂಡ್ ಸಿಎಂ ಬಾಯಿಂದ ಬಂದ ಹೇಳಿಕೆಯೆಂಬ ಕಾರಣಕ್ಕೆ ಪಕ್ಷವೊಂದರ ಕೃಪಾಪೋಷಿತ ಕೆಲವು ಪೇಜ್‌ಗಳು ಹೇಳಿಕೆಗೆ ಬೆಂಬಲವನ್ನೂ ವ್ಯಕ್ತಪಡಿಸುತ್ತಿವೆ. ರಾಜಕೀಯ ಪ್ರೇರಿತ ವಿರೋಧವೂ ವ್ಯಕ್ತವಾಗುತ್ತಿದೆ.

ಚರ್ಚೆಯ ಮಧ್ಯೆ ಬಂದಿರುವ ನಟಿ ಕಂಗನಾ, ರಿಪ್ಡ್ ಜೀನ್ಸ್ ಚರ್ಚೆಯನ್ನು ನೆವವಾಗಿಟ್ಟುಕೊಂಡು, ತಮ್ಮ ಅಂದವನ್ನು ತಾವು ಹೊಗಳಿಕೊಂಡಿರುವುದಲ್ಲದೆ, 'ರಿಪ್ಡ್ ಜೀನ್ಸ್ ತೊಡುವ ದೇಶದ ಬಹುಪಾಲು ಯುವ ಜನರು ಭಿಕ್ಷಕುರಂತೆ ಕಾಣುತ್ತಾರೆ' ಎಂದು ಟ್ವಿಟ್ಟರ್‌ನಲ್ಲಿ ಮಾತು ಬಿಸಾಡಿದ್ದಾರೆ.
'ನೀವು ರಿಪ್ಡ್ ಜೀನ್ಸ್ ಧರಿಸುವುದಾದರೆ ನನ್ನಂತೆ ಕೂಲ್ ಆಗಿ ಕಾಣಿಸುತ್ತೀರೋ ಇಲ್ಲವೋ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಹಾಗಿದ್ದರೆ ಮಾತ್ರ ರಿಪ್ಡ್ ಜೀನ್ಸ್ ಚೆನ್ನಾಗಿ ಕಾಣುತ್ತದೆ. ಇಲ್ಲವಾದರೆ ಮನೆಯಿಂದ ಹೊರದೂಡಲ್ಪಟ್ಟ, ಅಪ್ಪನಿಂದ ತಿಂಗಳ ಹಣ ಪಡೆಯದ ಭಿಕ್ಷುಕರಂತೆ ಕಾಣುತ್ತೀರಿ. ದೇಶದ ಹೆಚ್ಚಿನ ಪಾಲು ಯುವಕರು ಈಗ ಹೀಗೆಯೇ ಕಾಣುತ್ತಿದ್ದಾರೆ' ಇದು ಕಂಗನಾ ಮಾಡಿರುವ ಟ್ವೀಟ್‌ನ ಭಾವಾರ್ಥ.
ಈ ಟ್ವೀಟ್‌ನ ಜೊತೆಗೆ ತಾವು ರಿಪ್ಡ್ ಜೀನ್ಸ್ ಧರಿಸಿರುವ ಕೆಲವು ಚಿತ್ರಗಳನ್ನು ಕಂಗನಾ ರನೌತ್ ಹಂಚಿಕೊಂಡಿದ್ದಾರೆ.
ಮಾಮೂಲಿಯಂತೆ ಕಂಗನಾರ ಈ ಟ್ವೀಟ್‌ಗೂ ಪರ-ವಿರೋಧ ಕಮೆಂಟ್‌ಗಳು ಬಂದಿವೆ. ಇತರೆ ಕೆಲವು ವಿಷಯಗಳಲ್ಲಿ ಕಂಗನಾ ರನ್ನು ಬೆಂಬಲಿಸಿದ್ದ ಕೆಲವರೂ ಸಹ ಕಂಗನಾ ರಿಪ್ಡ್ ಜೀನ್ಸ್ ತೊಟ್ಟಿರುವುದನ್ನು ವಿರೋಧಿಸಿದ್ದಾರೆ. ಕಮೆಂಟ್‌ಗಳಲ್ಲಿ 'ನಾವು ನಿಮ್ಮ ಯೋಚನೆಗಳನ್ನು ಬೆಂಬಲಿಸುತ್ತೇವೆ. ಆದರೆ ನಿಮ್ಮ ಈ ಉಡುಪು ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











