ಚಿತ್ರೀಕರಣ ವೇಳೆ ಗೂಂಡಾಗಳಿಂದ ಬಾಲಿವುಡ್ ನಟಿಯ ಮೇಲೆ ಹಲ್ಲೆ
ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಐದು ಜನ ಗೂಂಡಾಗಳು ಬಾಲಿವುಡ್ ನಟಿ ಮಹೀ ಗಿಲ್ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಏಕ್ತಾ ಕಪೂರ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದ 'ಫಿಕ್ಸರ್' ಎನ್ನುವ ವೆಬ್ ಸರಣಿ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಮುಂಬೈನ ಫ್ಯಾಕ್ಟರಿ ಒಂದರಲ್ಲಿ 'ಫಿಕ್ಸರ್' ವೆಬ್ ಸರಣಿ ಚಿತ್ರೀಕರಣ ಮಾಡಲಾಗುತ್ತಿತ್ತು.
ನಿನ್ನ(ಜೂನ್ 20) ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ನಾಲ್ಕು ಜನ ಗೂಂಡಾಗಳು ದಿಢೀರನೆ ಚಿತ್ರೀಕರಣ ಸ್ಪಾಟ್ ಗೆ ನುಗ್ಗಿ ಸಿಕ್ಕ ಸಿಕ್ಕವರಿಗೆಲ್ಲ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಂಠಪೂರ್ತಿ ಕುಡಿದು ಬಂದಿದ್ದ ಕಿಡಿಗೇಡಿಗಳು ಕೋಲು, ಕಬ್ಬಿಣದ ಸರಳು ಸೇರಿದಂತೆ ಕೈಯಿಗೆ ಏನು ಸಿಕ್ಕಿದೆಯೊ ಎಲ್ಲವನ್ನು ತೆಗೆದುಕೊಂಡು ನಟಿ ಮಹೀ ಗಿಲ್ ಮತ್ತು ತಂಡದ ತಂತ್ರಜ್ಞರು, ಕಲಾವಿದರು ಮತ್ತು ನಿರ್ಮಾಪಕರಿಗೆ ಸರಿಯಾಗಿ ಹೊಡೆದು ಗಾಯ ಮಾಡಿದ್ದಾರೆ.
ಈ ಬಗ್ಗೆ ಇಡೀ ತಂಡ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಟಿ ಮಹೀ ಗಿಲ್ ಕಾರಿನ ಬಳಿ ಓಡಿ ಹೋದರು ಅವರನ್ನು ಎಳೆದು ಪ್ರಾಣಿಗಳ ರೀತಿ ಹೊಡೆದಿದ್ದಾರೆ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಚಿತ್ರೀಕರಣಕ್ಕೂ ಮೊದಲೆ ಫ್ಯಾಕ್ಟರಿ ಮಾಲಿಕರ ಬಳಿ ಅನುಮತಿ ಪಡೆದು ಹಣ ನೀಡಿಯೇ ಚಿತ್ರೀಕರಣ ಪ್ರಾರಂಭಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇನ್ನು ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗೂಂಡಗಳನ್ನು ಅರೆಸ್ಟ್ ಮಾಡದೆ, ಫ್ಯಾಕ್ಟರಿಯ ಬಾಗಿಲನ್ನು ಮುಚ್ಚಿ, 'ಫಿಕ್ಸರ್' ತಂಡದವರ ಜೊತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ.
ಈ ಸಂಬಂಧ ಈಗ ದೂರು ದಾಖಲಾಗಿದ್ದು ಮೂವರನ್ನು ಬಂಧಿಸಿದ್ದಾರೆ. ಇನ್ನು ಇಬ್ಬರಿಗಾಗಿ ಹುುಕಾಟ ನಡೆಯುತ್ತಿದೆಯಂತೆ. ಐಪಿಸಿ ಸೆಕ್ಷನ್ 326 ಮತ್ತು 34ರ ಅಡಿ ಪ್ರಕರಣ ದಾಖಲಾಗಿದ್ದು. ಆರೋಪಿಗಳನ್ನು ಇಂದು(ಜೂನ್ 20) ಕೋರ್ಟ್ ಗೆ ಹಾಜರುಪಡಿಸಲಾಗಿದೆ.


Click it and Unblock the Notifications











