Meera Chopra : ಯಶ್ ಅನ್ನು ಹೊಗಳಿದ ಮೀರಾ ಚೋಪ್ರಾ, ಜೂ ಎನ್‌ಟಿಆರ್ ಅಭಿಮಾನಿಗಳಿಂದ ಟ್ರೋಲ್!
ದಕ್ಷಿಣ ಭಾರತ ಚಿತ್ರರಂಗ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ತನ್ನದೇ ಆದ ಪ್ರತ್ಯೇಕ ಗುರುತು ಸಂಪಾದಿಸಿದೆ. ಸಿ ಗ್ರೇಡ್ ಮಸಾಲೆ ಸಿನಿಮಾಗಳಿಗೆ ಸೀಮಿತ ಎಂದು ಕಾಲದಲ್ಲಿ ಬಾಲಿವುಡ್‌ನಿಂದ ಮೂದಲಿಕೆಗೆ ಒಳಗಾಗಿದ್ದ ದಕ್ಷಿಣ ಭಾರತ ಚಿತ್ರರಂಗ ಇಂದು ಬಾಲಿವುಡ್ ಅನ್ನು ಇಡಿಯಾಗಿ ಹುರಿದು ಮುಕ್ಕುವಂತೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ದಕ್ಷಿಣ ಭಾರತ ಚಿತ್ರರಂಗದ ಈ ಅದ್ಭುತ ಯಶಸ್ಸು ಹಲವು ಬಾಲಿವುಡ್ಡಿಗರಲ್ಲಿ ಅಭದ್ರತೆ ಮೂಡಿಸಿದೆ. ಆದರೆ ಕೆಲವು ದಕ್ಷಿಣ ಭಾರತ ಚಿತ್ರರಂಗದ ಈ ಅದ್ಭುತ ಪ್ರಗತಿಯನ್ನು, ಶ್ರಮವನ್ನು, ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಆದರೂ ಬಾಲಿವುಡ್ಡಿಗರಿಗೆ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಎಷ್ಟು ಅವಗಣನೆ ಇದೆ, ಮಾಹಿತಿ ಕೊರತೆ ಇದೆ ಎಂಬುದು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತದೆ.
ಇತ್ತೀಚಿಗೆ ಜನಪ್ರಿಯ ಬಾಲಿವುಡ್ ನಟಿ ಮೀರಾ ಚೋಪ್ರಾ ದಕ್ಷಿಣ ಭಾರತ ಚಿತ್ರರಂಗವನ್ನು, ದಕ್ಷಿಣ ಭಾರತ ಚಿತ್ರರಂಗದ ನಾಯಕ ನಟರನ್ನು ಹೊಗಳಿದ್ದಾರೆ. ಕನ್ನಡದ ನಟ ಯಶ್ ಸೇರಿದಂತೆ ಹಲವರನ್ನು ನಟಿ ಹೊಗಳಿದ್ದಾರೆ. ಆದರೂ ಸಹ ದಕ್ಷಿಣ ಭಾರತದ ಕೆಲವು ಸ್ಟಾರ್ ನಟರ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದ್ದಾರೆ.

''ದಕ್ಷಿಣದ ಸ್ಟಾರ್ ನಟರು ಇಡೀಯ ಭಾರತದಲ್ಲಿ ಗುರುತು ಸಂಪಾದಿಸುತ್ತಿರುವುದು ಖುಷಿ ತಂದಿದೆ. ಅವರಿಂದ ಎಲ್ಲರೂ ಕಲಿಯಬೇಕಾದುದು ಸಾಕಷ್ಟಿದೆ. ಪ್ರತಿಭೆ, ಮಾನವೀಯತೆ ಹಾಗೂ ಸಿನಿಮಾದ ಬಗ್ಗೆ ಅವರಿಗಿರುವ ಬದ್ಧತೆ, ಪ್ರೀತಿಯನ್ನು ಇತರೆ ಉದ್ಯಮಗಳವರು ಕಲಿಯಬೇಕು'' ಎಂದಿದ್ದಾರೆ. ಜೊತೆಗೆ ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್ ಹಾಗೂ ಯಶ್ ಹೆಸರನ್ನು ಮೀರಾ ಚೋಪ್ರಾ ಉಲ್ಲೇಖಿಸಿದ್ದಾರೆ. ಇದೊಂದು ಒಳ್ಳೆಯ ಟ್ವೀಟ್ ಆದರೂ ತೆಲುಗು ಚಿತ್ರರಂಗದ ಕೆಲವು ಅಭಿಮಾನಿಗಳು ಮೀರಾ ಚೋಪ್ರಾ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಟ್ ಆದ ಕಾರಣ ಅಲ್ಲು ಅರ್ಜುನ್ ಹೆಸರನ್ನು, ಬಾಹುಬಲಿ ಕಾರಣಕ್ಕೆ ಪ್ರಭಾಸ್ ಹೆಸರನ್ನು ಹಾಗೂ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಬರುತ್ತಿರುವ ಕಾರಣ ಯಶ್ ಹೆಸರನ್ನು ಮೀರಾ ಚೋಪ್ರಾ ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ. 'RRR' ಸಿನಿಮಾ ಅತಿ ದೊಡ್ಡ ಹಿಟ್ ಆದ ಕಾರಣ ರಾಮ್ ಚರಣ್ ಹೆಸರನ್ನು ತಮ್ಮ ಟ್ವೀಟ್‌ನಲ್ಲಿ ಸೇರಿಸಿರುವ ಈ ನಟಿ ಅದೇ ಸಿನಿಮಾದಲ್ಲಿ ನಟಿಸಿರುವ ನಟ ಜೂ ಎನ್‌ಟಿಆರ್ ಹೆಸರನ್ನು ಟ್ವೀಟ್‌ನಿಂದ ಕೈ ಬಿಟ್ಟಿದ್ದಾರೆ. ಇದು ಜೂ ಎನ್‌ಟಿಆರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೀರಾ ಚೋಪ್ರಾ ಟ್ವೀಟ್‌ಗೆ ದೀಪಿಕಾ ಪಡುಕೋಣೆಯ ಸಂದರ್ಶನವೊಂದರ ತುಣನ್ನು ಪ್ರತಿಕ್ರಿಯೆಯಾಗಿ ಜೂ ಎನ್‌ಟಿಆರ್ ಅಭಿಮಾನಿಗಳು ಹಾಕಿದ್ದಾರೆ. ವಿಡಿಯೋದಲ್ಲಿ ದೀಪಿಕಾ ಪಡುಕೋಣೆ, ''ನನಗೆ ಜೂ ಎನ್‌ಟಿಆರ್ ಜೊತೆ ಹಾಗೂ ಅಲ್ಲು ಅರ್ಜುನ್ ಜೊತೆ ನಟಿಸುವ ಆಸೆಯಿದೆ. ಅದರಲ್ಲೂ ನಾನು ಜೂ ಎನ್‌ಟಿಆರ್ ಅವರ ದೊಡ್ಡ ಅಭಿಮಾನಿ ಆಗಿಬಿಟ್ಟಿದ್ದೇನೆ. ಅವರದ್ದು ಅದ್ಭುತವಾದ ವ್ಯಕ್ತಿತ್ವ ಹಾಗೂ ನಟನೆ. ಅವರ ಅಭಿಮಾನಿ ನಾನು'' ಎಂದಿದ್ದಾರೆ ದೀಪಿಕಾ ಪಡುಕೋಣೆ.
ಟ್ವೀಟ್ ಮಾಡಿರುವ ಮೀರಾ ಚೋಪ್ರಾ, ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾರ ಸಹೋದರಿ. ಹುಟ್ಟಿದ್ದು ಉತ್ತರ ಭಾರತದಲ್ಲಿ ಆದರೂ ತಮಿಳು, ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ನಟಿಸಿದ್ದಾರೆ ಈ ನಟಿ. ಕನ್ನಡದ 'ಅರ್ಜುನ್' ಸಿನಿಮಾದಲ್ಲಿಯೂ ಮೀರಾ ಚೋಪ್ರಾ ನಟಿಸಿದ್ದಾರೆ.


Click it and Unblock the Notifications











