"ನಾನು ಇನ್ನು ಸಿಂಗಲ್.. ರೆಡಿ ಟು ಮಿಂಗಲ್.. ಒಳ್ಳೆ ಹುಡುಗನನ್ನು ಹುಡುಕಿ ಕೊಡಿ": ಪರಿಣಿತಿ ಚೋಪ್ರಾ
ಬಾಲಿವುಡ್‌ನಲ್ಲಿ ಮದುವೆ ಸಡಗರ ಜೋರಾಗಿದೆ. ಕಳೆದ ಕೆಲ ದಿನಗಳಿಂದ ಸಾಲು ಸಾಲಾಗಿ ನಟ- ನಟಿಯರು ಹಸೆಮಣೆ ಏರುತ್ತಿದ್ದಾರೆ. ಈ ವರ್ಷ ಕೂಡ ಅಥಿಯಾ ಶೆಟ್ಟಿ ಹಾಗೂ ಕೆ. ಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅದ್ವಾನಿ ಕೂಡ ಪ್ರೀತಿಸಿ ಮದುವೆ ಆಗಿದ್ದಾರೆ. ಇದೀಗ ನಟಿ ಪರಿಣಿತಿ ಚೋಪ್ರಾ ಮದುವೆ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಮೊದಲು ಹುಡುಗ ಸಿಗಬೇಕು. ಬೇಗ ಒಬ್ಬ ಹುಡುಗನನ್ನು ಹುಡುಕಿ ಕೊಡಿ ಎಂದಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ನಟಿ ಪರಿಣಿತಿ ಚೋಪ್ರಾ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದು ಬಿಟ್ಟರು. ಚೋಪ್ರಾ ಕುಟುಂಬದ ಕುಡಿಗೆ ದೊಡ್ಡ ಅವಕಾಶಗಳು ಸಿಗಲೇ ಇಲ್ಲ. ಸದಾ ವರ್ಕೌಟ್, ಫೋಟೊಶೂಟ್, ಸಿನಿಮಾ ಅಂತ ಬ್ಯುಸಿ ಇದ್ದ ಚೆಲುವೆ ವಿವಾಹ ಬಂಧನಕ್ಕೆ ಮನಸ್ಸು ಮಾಡಿದ್ದಾರೆ. ಅಕ್ಕ ಪ್ರಿಯಾಂಕ ಕೂಡ ಮದುವೆ ಆಗಿ ಸಾರೋಗಸಿ ವಿಧಾನದಲ್ಲಿ ಹೆಣ್ಣು ಮಗು ಪಡೆದಿದ್ದಾರೆ. ಇತ್ತ ಸ್ನೇಹಿತರೆಲ್ಲಾ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಾನು ಮದುವೆ ಆಗಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ಪರಿಣಿತಿ ಚೋಪ್ರಾ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. "ನಾನು ಇನ್ನು ಸಿಂಗಲ್ ಆಗಿ ಇದ್ದೀನಿ. ಬೇಗ ಮಿಂಗಲ್ ಆಗಬೇಕು. ಸದ್ಯ ಚಿತ್ರರಂಗದಲ್ಲಿ ನಡೆಯುತ್ತಿರುವ ಮದುವೆಗಳು, ಆ ಫೋಟೊಗಳನ್ನು ನೋಡುತ್ತಿದ್ದರೆ ನನಗೂ ಮದುವೆ ಆಗುವ ಮನಸ್ಸಾಗಿದೆ. ಮದುವೆ, ಮಕ್ಕಳು ಬೇಕು ಎಂದು ಪರಿಣಿತಿ ಚೋಪ್ರಾ ಹೇಳಿದ್ದಾರೆ. "ಯಾರಾದ್ರೂ ಒಳ್ಳೆ ಹುಡುಗ ಇದ್ದರೆ ಹೇಳಿ, ನೋಡೋಣ ಮಾತಾಡೋಣ" ಎಂದು ತಮಾಷೆ ಮಾಡಿದ್ದಾರೆ.
ಸದ್ಯ ನಾನು ಯಾರೊಟ್ಟಿಗೂ ಡೇಟಿಂಗ್ ಮಾಡುತ್ತಿಲ್ಲ. ನನ್ನ ಸ್ನೇಹಿತರೆಲ್ಲಾ ಮದುವೆ ಆಗುವುದು ನೋಡುತ್ತಿದ್ದರೆ ನನಗೂ ಮದುವೆ ಆಗಬೇಕು ಎನಿಸುತ್ತಿದೆ. ಅವರೆಲ್ಲಾ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಖಂಡಿತ ಮದುವೆ ಮುಂದಿನ ಅಧ್ಯಾಯ. ನಾನು ನನ್ನ ಹುಡುಗನನ್ನು ನೋಡಿದಾಗ, ಆತನೊಟ್ಟಿಗೆ ಪ್ರೀತಿಲಿ ಬಿದ್ದಾಗ ಮದುವೆ ಆಗುತ್ತೇನೆ" ಎಂದು ಪರಿಣಿತಿ ಚೋಪ್ರಾ ಹೇಳಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಪರಿಣಿತಿ ಅಕ್ಕನ ಮಗಳನ್ನು ಭೇಟಿ ಮಾಡುವ ಅವಕಾಶ ಸಿಕ್ತಾ? ಎನ್ನುವ ಪ್ರಶ್ನೆಗೆ ಕಂಡಿತ ಭೇಟಿ ಆಗಿದ್ದೆ ಎಂದಿದ್ದಾರೆ.
"ನಾನು ನಮ್ಮ ಮನೆಯ ಮುದ್ದು ಬಂಗಾರಿಯನ್ನು ಭೇಟಿ ಆಗಿದ್ದೆ. ಈ ಜನರೇಷನ್‌ನಲ್ಲಿ ಚೋಪ್ರಾ ಫ್ಯಾಮಿಲಿಯ ಮೊದಲ ಮಗು ಅವಳು. ಅಂದು ಮೊದಲ ಬಾರಿಗೆ ಆಕೆಯನ್ನು ಪರಿಚಯಿಸಿದ ದಿನ ಬಹಳ ಕ್ಯೂಟ್ ಆಗಿ ಇದ್ದಳು. ಆಕೆ ನಮ್ಮ ಮನೆಯ ಸುಂದರವಾದ ಅದ್ಭುತ" ಎಂದು ಪರಿಣಿತಿ ಚೋಪ್ರಾ ತಿಳಿಸಿದ್ದಾರೆ. 'ಲೇಡಿಸ್ ವರ್ಸಸ್ ರಿಕ್ಕಿಬೇಹ್ಲ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಪರಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆದರೆ ಬಹುತೇಕ ಸಿನಿಮಾಗಳಲ್ಲಿ ಗ್ಲಾಮರ್ ಡಾಲ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ 'ಉನ್ಚೈ' ಸಿನಿಮಾದಲ್ಲಿ ಕೊನೆಯ ಬಾರಿಗೆ ಪರಿಣಿತಿ ಚೋಪ್ರಾ ನಟಿಸಿದ್ದರು. ಸದ್ಯ 'ಕ್ಯಾಪ್ಸ್ಯುಲ್ ಗಿಲ್' ಹಾಗೂ 'ಚಮ್ಕಿಲಾ' ಎನ್ನುವ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ. ಹರ್ಯಾಣದ ಪಂಜಾಬಿ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದ ಪರಿ, ಸೋದರ ಸಂಬಂಧಿ ಪ್ರಿಯಾಂಕ ಚೋಪ್ರಾ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದಿದ್ದರು. ಇನ್ನು ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲೂ ಚೆಲುವೆ ಮಿಂಚಿದ್ದಾರೆ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಈ ಬಿಂದಾಸ್ ಬೆಡಗಿಗೆ ಸಿಗಲೇ ಇಲ್ಲ.


Click it and Unblock the Notifications











