ಮಗು ಬೇಕಂತ ಆ ಟ್ರೀಟ್‌ಮೆಂಟ್ ತಗೊಂಡೆ.. ಆದ್ರೆ...; ಪ್ರೀತಿ ಜಿಂಟಾ
ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಂದ್ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರಾಗಿದ್ದ ಚೆಲುವೆ ಇತ್ತೀಚೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರೀತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ.
1998ರಲ್ಲಿ 'ದಿಲ್‌ಸೇ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಪ್ರೀತಿ ಜಿಂಟಾ ಬಳಿಕ ಬಹುಬೇಡಿಕೆಯ ನಟಿಯಾಗಿ ಬೆಳೆದರು. 'ದಿಲ್ ಚಹ್ತಾ ಹೈ', 'ಕೋಯಿ ಮಿಲ್‌ಗಯಾ', 'ಕಲ್ ಹೋ ನಾ ಹೋ', 'ವೀರ್-ಝರಾ' ಹಾಗೂ 'ಕ್ರಿಶ್' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. 2018ರಲ್ಲಿ 'ಭಯ್ಯಾಜಿ ಸೂಪರ್‌ಹಿಟ್' ಎನ್ನುವ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಇದೀಗ 'ಲಾಹೋರ್' 1947 ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮಕ್ಕಳನ್ನು ಪಡೆಯಲು ಸಾಧ್ಯವಾಗದೇ, ಫಲವತ್ತತೆ ಸಮಸ್ಯೆ ಅನುಭವಿಸುವ ದಂಪತಿ ಇತ್ತೀಚೆಗೆ ಐವಿಎಫ್ ಚಿಕಿತ್ಸೆ ಮೊರೆ ಹೋಗುತ್ತಿದ್ದಾರೆ. ಕೆಲ ನಟ-ನಟಿಯರು ಕೂಡ ಮಗುವಿಗಾಗಿ ಈ ಚಿಕಿತ್ಸೆ ಪಡೆದಿದ್ದಾರೆ. ನಟಿ ಪ್ರೀತಿ ಜಿಂಟಾ ಕೂಡ IVF ಚಿಕಿತ್ಸೆ ಪಡೆದ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ತಾವು ಅನುಭವಿಸಿದ ನೋವು ಎಂಥದ್ದು ಎಂದು ವಿವರಿಸಿದ್ದಾರೆ.
"ಎಲ್ಲರಂತೆ ನನ್ನ ಜೀವನದಲ್ಲೂ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳಿವೆ. ಕೆಲವೊಮ್ಮೆ ನಿಜ ಜೀವನದಲ್ಲಿ ಸದಾ ಸಂತೋಷವಾಗಿರಲು ಕಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ಮತ್ತಷ್ಟು ನೋವಾಗುತ್ತದೆ. ನನ್ನ IVF ಚಿಕಿತ್ಸೆ ಸಮಯದಲ್ಲಿ ನನಗೂ ಇದೇ ರೀತಿ ಆಗಿತ್ತು" ಎಂದು ನಟಿ ಪ್ರೀತಿ ಜಿಂಟಾ ಹೇಳಿದ್ದಾರೆ.

"ಸದಾ ನಗುತ್ತಾ, ಆರಾಮಾಗಿ ಇರುವುದು ತುಂಬಾ ಕಷ್ಟಕರವಾಗಿತ್ತು. ಕೆಲವೊಮ್ಮೆ ನನಗೆ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳಬೇಕು, ಅಳಬೇಕು ಅಥವಾ ಮೌನವಾಗಿ ಇದ್ದುಬಿಡಬೇಕು ಎನಿಸುತ್ತಿತ್ತು. ಇದು ಎಲ್ಲಾ ಕಲಾವಿದರಿಗೂ ಆಗುವಂಥದ್ದು. ಎಂದಿದ್ದಾರೆ.
ಕೊನೆಗೆ IVF ಚಿಕಿತ್ಸೆಯಿಂದ ಮಗು ಪಡೆಯುವುದು ಸಾಧ್ಯವಾಗದೇ ಇದ್ದಾಗ ತಾವು ಸಾರೋಗಸಿ ಪದ್ಧತಿಯಲ್ಲಿ ತಾಯಿ ಆಗಿದ್ದಾಗಿಯೂ ಪ್ರೀತಿ ಜಿಂಟಾ ಹೇಳಿದ್ದಾರೆ. ತಾಯಿಯಾದ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸುವುದರ ಬಗ್ಗೆಯೂ ಆಕೆ ಮಾತನಾಡಿದ್ದಾರೆ. ನಟಿ ಪ್ರೀತಿ ಜಿಂಟಾ 2016ರಲ್ಲಿ ಅಮೇರಿಕಾ ಮೂಲದ ಜೀನ್ ಗುಡ್‌ನಫ್ ಎಂಬುವವರ ಕೈ ಹಿಡಿದಿದ್ದರು. 2021ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು.
ಕರಿಯರ್ ಮೇಲೆ ದೃಷ್ಠಿ ಇಡುವುದು ಬಹಳ ಮುಖ್ಯ. ಮಹಿಳೆಯರು ಕುಟುಂಬವನ್ನು ನೋಡಿಕೊಳ್ಳುತ್ತಾ ವೃತ್ತಿ ಜೀವನದಲ್ಲಿ ಕೂಡ ಮಿಂಚಬೇಕು. ಈಗ ನನ್ನ ಇಬ್ಬರೂ ಮಕ್ಕಳಿಗೆ 2 ವರ್ಷ ತುಂಬಿದೆ. ಹಾಗಾಗಿ ನಾನು ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡೆ. ನನ್ನ ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಯ ಹೋಗುವುದೇ ಗೊತ್ತಾಗಲ್ಲ ಎಂದಿದ್ದಾರೆ.
ನಾನು ಕ್ಲಿಕ್ಕಿಸಿದ, ಎಡಿಟ್ ಮಾಡಿದ ಫೋಟೊಗಳನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ. ಅದು ನನಗೆ ಬಹಳ ಖುಷಿ ಕೊಡುತ್ತದೆ ಎಂದು ಪ್ರೀತಿ ಜಿಂಟಾ ತಿಳಿಸಿದ್ದಾರೆ.
ರಾಜ್‌ಕುಮಾರ್ ಸಂತೋಷಿ ನಿರ್ದೇಶನದ 'ಲಾಹೋರ್ 1947' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟ ಆಮೀರ್ ಖಾನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇದು ನಾನು ನಟಿಸುತ್ತಿರುವ ಬಹಳ ಕಷ್ಟದ ಸಿನಿಮಾ ಎಂದು ಹಿಂದೆ ಪ್ರೀತಿ ಜಿಂಟಾ ಹೇಳಿದ್ದರು. ಆಕೆಯನ್ನು ಮತ್ತಷ್ಟು ಸಿನಿಮಾಗಳಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಮದುವೆ, ಮಕ್ಕಳ ಬಳಿಕ ಕೂಡ ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಪ್ರೀತಿ ಜಿಂಟಾ ಕೂಡ ಮತ್ತೆ ತೆರೆಮೇಲೆ ಮೋಡಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಮುಂದಿನ ವರ್ಷ 'ಲಾಹೋರ್ 1947' ಚಿತ್ರ ತೆರೆಗೆ ಬರಲಿದೆ.


Click it and Unblock the Notifications











