ವಿಶ್ವ ಸುಂದರಿ ಪ್ರಿಯಾಂಕಗೆ ಮೊದಲು ಅವಕಾಶ ಕೊಟ್ಟಿದ್ದು ಬಾಲಿವುಡ್ ಅಲ್ಲ ; ಚಿತ್ರದ ನಾಯಕ ಯಾರು ಗೊತ್ತಾ..?
ಬಿ ಟೌನಿನಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ಕಪಲ್ಸುಗಳು ಪೈಕಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪ್ರಮುಖರಾದವರು. ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ವೈರಲ್ ಆಗುತ್ತಲೇ ಇವೆ. ಕೆಲವು ಫೊಟೋಗಳಿಗೆ ಜಯಕಾರ ಮೊಳಗಿದರೆ ಮತ್ತೂ ಕೆಲವು ಫೋಟೋಗಳು ಟ್ರೋಲಿಗೂ ಒಳಗಾಗುತ್ತದೆ.
ಆದರೂ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಪ್ರಿಯಾಂಕ ಚೋಪ್ರಾ ಎಷ್ಟೇ ಎತ್ತರಕ್ಕೆ ಬೆಳೆದರು, ತಾವು ನಡೆದು ಬಂದ ಹಾದಿಯನ್ನ ಮರೆತಿಲ್ಲ ಅನ್ನುವುದು ಸದ್ಯದ ಸಮಾಧಾನದ ಸಂಗತಿ. ಇದಕ್ಕೆ ಸಾಕ್ಷಿ ಅನ್ನುವಂತೆ ಪ್ರಿಯಾಂಕ ಚೋಪ್ರಾ 22 ವರ್ಷಗಳ ಹಿಂದಿನ ದಿನವನ್ನ ನೆನಪು ಮಾಡಿಕೊಂಡಿದ್ದಾರೆ. ಫೋಟೋವೊಂದನ್ನ ಹಂಚಿಕೊಂಡಿದ್ದಾರೆ

ಹೌದು, ಅಸಲಿಗೆ ಪ್ರಿಯಾಂಕ ಚೋಪ್ರಾ.. ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಹಿಂದಿ ಚಿತ್ರರಂಗದ ಮೂಲಕ ಅನ್ನುವ ಭ್ರಮೆ ಅನೇಕರಲ್ಲಿದೆ. ಆದರೆ ವಾಸ್ತವದಲ್ಲಿ ಪ್ರಿಯಾಂಕ ಚೋಪ್ರಾ ಅವರ ಬಣ್ಣ ಬಣ್ಣದ ಕನಸಿಗೆ ಮೊದಲು ರಂಗು ತುಂಬಿದ್ದು ಹಿಂದಿ ಚಿತ್ರರಂಗವಲ್ಲ ಬದಲಿಗೆ ದಕ್ಷಿಣ ಚಿತ್ರರಂಗ ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.
ಹೌದು, ಅದು 2000ನೇ ಇಸ್ವಿ. ಪ್ರಿಯಾಂಕ ಚೋಪ್ರಾ ಆಗಷ್ಟೇ ಮಿಸ್ ವರ್ಲ್ಡ್' ವಿಪಟ್ಟವನ್ನ ಅಲಂಕರಿಸಿದ್ದರು. ಬಣ್ಣದ ಮೋಹಕ್ಕೆ ಸಿಲುಕಿ ಅವಕಾಶವನ್ನ ಎದುರು ನೋಡುತ್ತಿದ್ದರು. ಇದೇ ಸಮಯಕ್ಕೆ ಪ್ರಿಯಾಂಕಗೆ ಸಿಕ್ಕಿದ ಸಿನಿಮಾ ತಮಿಳನ್. ಮಜಿತ್ ನಿರ್ದೇಶನದಲ್ಲಿ ಬಂದ ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಇಳಯ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಂಡಿದ್ದರು ಅನ್ನುವುದು ವಿಶೇಷ

ಈ ಚಿತ್ರದ ಫಲಿತಾಂಶ ಏನಾಯಿತು ಅನ್ನುವುದು ಬೇರೆ ವಿಚಾರವಾದರೂ, ಪ್ರಿಯಾಂಕ ಇವತ್ತು ಹಾಲಿವುಡ್ ತಲುಪಿದರೂ ಕೂಡ ತನ್ನ ಮೊದಲನೇ ಸಿನಿಮಾ ಹಾಗೂ ಅವರ ಬೇರನ್ನ ಮರೆತಿಲ್ಲ. ಇದಕ್ಕೆ ಕೈಗನ್ನಡಿ ಅನ್ನುವಂತೆ ತಮಿಳನ್ ತೆರೆಗೆ ಬಂದು 22 ವರ್ಷವಾದ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಮೊದಲ ಕನಸು ನನಸಾದ ಘಳಿಗೆಯನ್ನ ಹಂಚಿಕೊಂಡಿದ್ದಾರೆ.
ಪ್ರಿಯಾಂಕ ಚೋಪ್ರಾ ಅವರ ಜ್ಞಾಪಕ ಶಕ್ತಿ ಹಾಗೂ ಕೃತಜ್ಞತಾಭಾವ ಸದ್ಯಕ್ಕೆ ಅನೇಕರ ಹೃದಯವನ್ನ ಗೆಲ್ಲುತ್ತಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ನಡೆದು ಬಂದ ಹಾದಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭ ಅಲ್ಲ ಅಂತಹದ್ದರಲ್ಲಿ ಪ್ರಿಯಾಂಕ ನೆನಪು ಇಟ್ಟುಕೊಂಡಿದ್ದಾರೆ ಅಂದರೆ ಅದು ಅವರ ಸರಳತೆ ಹಾಗೂ ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಲಿವುಡ್ ಅಂಗಳಕ್ಕೆ ತಲುಪಿದರೂ ಅವಕಾಶ ಕೊಟ್ಟ ಮೊದಲನೇ ಸಂಸ್ಥೆ ಹಾಗೂ ಆ ಚಿತ್ರವನ್ನ ನೆನಪು ಮಾಡಿಕೊಂಡ ಪ್ರಿಯಾಂಕ ನಿಜಕ್ಕೂ ಗ್ರೇಟ್ ಎಂದು ಇವರ ಅಭಿಮಾನಿಗಳು ಹೆಮ್ಮೆಯಿಂದ ಎದೆ ತಟ್ಟಿ ಕೊಳ್ಳುತ್ತಿದ್ದಾರೆ


Click it and Unblock the Notifications











