"2 ಗಂಟೆ ಪ್ರಯಾಣ 20 ನಿಮಿಷ.. 10 ವರ್ಷಗಳಲ್ಲಿ ಏನೆಲ್ಲಾ ಬದಲಾಗಿದೆ.. ಅಭಿವೃದ್ಧಿಗೆ ಮತ ನೀಡಿ": ರಶ್ಮಿಕಾ ಮಂದಣ್ಣ
ದೇಶದಲ್ಲಿ ಲೋಕಸಭೆ ಚುನಾವಣೆ ಇನ್ನು ಮುಗಿದಿಲ್ಲ. ಹಲವು ಹಂತಗಳಲ್ಲಿ ಮತದಾನ ನಡೆಯುತ್ತಿದೆ. 5ನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಸೆಲೆಬ್ರೆಟಿಗಳು ಕೂಡ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಎಲ್ಲಾ ಗೊತ್ತಿದ್ದು ವೋಟ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಮತದಾನ ಎಲ್ಲರ ಹಕ್ಕು. ಒಳ್ಳೆ ಸರ್ಕಾರ, ಒಳ್ಳೆ ಆಡಳಿತ ಬಯಸುವವರು ತಪ್ಪದೇ ಮತದಾನ ಮಾಡಬೇಕು. ತಮ್ಮ ಹಕ್ಕು ಚಲಾಯಿಸಬೇಕು. ಕೆಲವರು ವಿದೇಶದಿಂದ ಬಂದು ವೋಟ್ ಮಾಡಿದ್ದಾರೆ. ಇನ್ನು ಕೆಲವರು ವಿಮಾನ ಪ್ರಯಾಣ ರದ್ದು ಪಡಿಸಿ ವೋಟ್ ಮಾಡಿ ಹೋಗಿದ್ದಾರೆ. ಆದರೆ ಇಲ್ಲೇ ಇರುವವರು ಮತ ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ಮತದಾರರಲ್ಲಿ 80ರಿಂದ 90ರಷ್ಟು ಮತದಾನ ಸಹ ನಡೆಯುತ್ತಿಲ್ಲ. ಕೆಲ ಕ್ಷೇತ್ರಗಳಲ್ಲಿ 50ರಷ್ಟು ಮತಗಳು ಬೀಳುತ್ತಿವೆ.

ನಟಿ ರಶ್ಮಿಕಾ ಮಂದಣ್ಣ ಈ ಬಾರಿ ಮತದಾನ ಮಾಡಲಿಲ್ಲ ಎಂದು ಹೇಳಲಾಗಿತ್ತು. ಕೊಡಗಿನ ವೀರಾಜಪೇಟೆಯ ರಶ್ಮಿಕಾ ಮಂದಣ್ಣ ಅಲ್ಲೇ ಮತದಾನ ಮಾಡಬೇಕಿತ್ತು. ಆದರೆ ಆಕೆ ಈ ಬಾರಿ ಬಂದು ಮತದಾನ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಸದ್ಯ ಹೈದರಾಬಾದ್ ಹಾಗೂ ಮುಂಬೈನಲ್ಲಿ ಆಕೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಲ್ಲಿಗೆ ಮತವನ್ನು ಬದಲಿಸಿಕೊಂಡಿರುವ ಬಗ್ಗೆಯೂ ಯಾವುದೇ ಸುಳಿವು ಇಲ್ಲ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕೂಡ ಮತದಾನ ಮಾಡಿದಂತೆ ಕಾಣುತ್ತಿಲ್ಲ.
ಈ ಬಾರಿಯ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನದ ಹೊಸ್ತಿಲಲ್ಲಿ ನಟಿ ರಶ್ಮಿಕಾ ಮಂದಣ್ಣ ಅಭಿವೃದ್ದಿಗೆ ಮತ ನೀಡಿ ಎಂದು ಹೇಳಿದ್ದಾರೆ. ಮುಂಬೈ ಅಟಲ್ ಸೇತುವೆ ಮಾರ್ಗಮಧ್ಯೆ ಪ್ರಯಾಣಿಸುತ್ತ ರಶ್ಮಿಕಾ ಎಎನ್‌ಐ ಸುದ್ದಿ ವಾಹಿನಿ ಜೊತೆ ಮಾತನಾಡಿದ್ದಾರೆ.

"ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು. ಹಾಗೆ, ನೀವು ಅದನ್ನು ನಂಬುವುದಿಲ್ಲ! ಈ ರೀತಿಯ ಏನಾದರೂ ಸಾಧ್ಯ ಎಂದು ಯಾರು ಭಾವಿಸಿದ್ದರು. ಈಗ ನವಿ ಮುಂಬೈಯಿಂದ ಮುಂಬೈಗೆ, ಗೋವಾದಿಂದ ಮುಂಬೈವರೆಗೆ ಹಾಗೂ ಬೆಂಗಳೂರುನಿಂದ ಮುಂಬೈವರೆಗೆ ಎಲ್ಲಾ ಪ್ರಯಾಣಗಳನ್ನು ತುಂಬಾ ಸುಲಭವಾಗಿ ಮಾಡಲಾಗಿದೆ. ಅದೂ ಕೂಡ ಅದ್ಭುತ ಮೂಲಸೌಕರ್ಯದೊಂದಿಗೆ ಇದು ನನಗೆ ಹೆಮ್ಮೆ ತರುತ್ತದೆ" ಎಂದು ರಶ್ಮಿಕಾ ಹೇಳಿದ್ದಾರೆ.
"ಈಗ ಭಾರತ ಯಾವುದಕ್ಕೂ ನೋ ಎನ್ನುವುದಿಲ್ಲ. ಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಅಭಿವೃದ್ಧಿ ಗಮನಿಸಿದರೆ ಇನ್ನು ತಡೆಯಲು ಸಾಧ್ಯವಿಲ್ಲ. ಮೂಲಸೌಕರ್ಯಗಳನ್ನು ನೋಡಿ, ರಸ್ತೆ ಯೋಜನೆ ಎಲ್ಲವೂ ಕೇವಲ ಅದ್ಭುತವಾಗಿದೆ. ಈಗ ಇದು ನಮ್ಮ ಸಮಯ ಎಂದು ನಾನು ಭಾವಿಸುತ್ತೇನೆ. ಏಳು ವರ್ಷಗಳಲ್ಲಿ 20 ಕಿ.ಮೀ ಸೇತುವೆ ನಿರ್ಮಾಣವಾಗಿದೆ. ಚೆನ್ನಾಗಿಯೂ ಇದೆ. ಇದನ್ನು ನೋಡಿ ನನಗೆ ಮಾತೇ ಬರುತ್ತಿಲ್ಲ" ಎಂದು ರಶ್ಮಿಕಾ ಕಣ್ಣರಳಿಸಿದ್ದಾರೆ.
"ಯುವ ಪೀಳಿಗೆ - ಯುವ ಭಾರತ - ಅಂತಹ ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಅತ್ಯಂತ ಬುದ್ಧಿವಂತ ದೇಶ, ನಾನು ಹೇಳಲು ನಾನು ಬಯಸುತ್ತೇನೆ. ಯುವ ಭಾರತೀಯರು ಮತ ಚಲಾಯಿಸಬೇಕು. ಅವರು ಈಗ ತುಂಬಾ ಜವಾಬ್ದಾರರಾಗಿರುತ್ತಾರೆ ಮತ್ತು ನೀವು ಏನು ಹೇಳಿದರೂ ಅವರು ಪ್ರಭಾವಿತರಾಗುತ್ತಿದ್ದಾರೆ. ಜನರು ನಿಜವಾಗಿಯೂ ನೋಡುತ್ತಿದ್ದಾರೆ, ಜನರು ತುಂಬಾ ಜವಾಬ್ದಾರಿಯುತರಾಗಿದ್ದಾರೆ. ಅದರ ಬಗ್ಗೆ ತುಂಬಾ ಸ್ಮಾರ್ಟ್ ಆಗಿದ್ದಾರೆ. ಅವರು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ರಶ್ಮಿಕಾ ಹೇಳಿದ್ದಾರೆ.
ರಶ್ಮಿಕಾ ಹೇಳಿಕೆಗೆ ಕೆಲವರು ಮೇಡಂ ಫಸ್ಟ್ ನೀವು ವೋಟ್ ಹಾಕಿದ್ರಾ ಹೇಳಿ? ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ರಶ್ಮಿಕಾ ಸದ್ಯ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆ ನಟಿಸೋ ಬಗ್ಗೆಯೂ ಸುಳಿವು ನೀಡಿದ್ದಾರೆ. 'ಪುಷ್ಪ'-2, 'ಕುಬೇರ', 'ರೈನ್‌ಬೋ', 'ಗರ್ಲ್ ಫ್ರೆಂಡ್' ಚಿತ್ರಗಳು ಆಕೆಯ ಕೈಯಲ್ಲಿವೆ.


Click it and Unblock the Notifications











