ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲ್ಲ ಎಂದು ಸಿಬ್ಬಂದಿಯನ್ನು ವಾಪಸ್ ಕಳಿಸಿದ ನಟಿ!
ಬಾಲಿವುಡ್‌ನ ಹಿರಿಯ ನಟಿ ರೇಖಾ ಅವರ ಬಂಗಲೆ ಕಾವಲು ಸಿಬ್ಬಂದಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ. ಆಕೆ ವಾಸವಿರುವ ಸೀ ಸ್ಪ್ರಿಂಗ್ಸ್ ಬಂಗ್ಲೆ ಸೀಲ್ ಡೌನ್ ಆಗಿದೆ.
Recommended Video
ನಟಿ ರೇಖಾ ಪ್ರಸ್ತುತ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಆದರೆ ಬಿಎಂಸಿ ನಿಯಮದ ಪ್ರಕಾರ ರೇಖಾ ಅವರು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಆದರೆ ಇದಕ್ಕೆ ಒಲ್ಲೆ ಎಂದಿದ್ದಾರೆ ರೇಖಾ.
ಹೌದು, ರೇಖಾ, ತಾವು ಕೊರೊನಾ ಪರೀಕ್ಷೆಗೆ ಒಳಗಾಗುವುದಿಲ್ಲ ಎಂಬ ಹಠ ಹಿಡಿದಿದ್ದಾರೆ. ಅಷ್ಟೆ ಅಲ್ಲ ಬಿಎಂಸಿಯ ಸಿಬ್ಬಂದಿ ಬಂದಾಗ ಅವರು ಮನೆಯ ಬಾಗಿಲು ತೆರೆಯದೆ ಅಲ್ಲಿಂದಲೇ ಸಿಬ್ಬಂದಿಯನ್ನು ವಾಪಸ್ ಕಳಿಸಿದ್ದಾರೆ.

ಮ್ಯಾನೇಜರ್ ನಿಂದ ಉತ್ತರ ಕೊಡಿಸಿದ ನಟಿ
ಬಿಎಂಸಿ ಸಿಬ್ಬಂದಿ ರೇಖಾ ಅವರ ಮ್ಯಾನೇಜರ್ ಫರ್ಜಾನಾ ಬಳಿ ಈ ಬಗ್ಗೆ ವಿಚಾರಿಸಿದಾಗ, 'ರೇಖಾ ಅವರು ಸೆಕ್ಯೂರಿಟಿ ಗಾರ್ಡ್‌ನ ಸಂಪರ್ಕಕ್ಕೆ ಬಂದಿರಲಿಲ್ಲ, ರೇಖಾ ಆರೋಗ್ಯವಾಗಿದ್ದಾರೆ, ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ರೇಖಾ ಅವರು ಈಗ ಯಾರನ್ನೂ ಭೇಟಿ ಆಗುವುದಿಲ್ಲ' ಎಂಬ ಉತ್ತರ ದೊರೆತಿದೆ.

ನಿಯಮದ ಪ್ರಕಾರ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು
ಆದರೆ ಬಿಎಂಸಿ ಹೇಳಿರುವ ಪ್ರಕಾರ ರೇಖಾ ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲೇಬೇಕಂತೆ. ರೇಖಾ ನಿವಾಸದಲ್ಲಿರುವವರೆಲ್ಲಾ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು ಇದು ನಿಯಮ ಎಂದು ಹೇಳಿದ್ದಾರೆ.

ಸ್ಯಾನಿಟೈಸ್ ಮಾಡಲು ಸಹ ಬಿಡಲಿಲ್ಲ ರೇಖಾ
ರೇಖಾ ಅವರ ಮನೆಯನ್ನು ಸ್ಯಾನಿಟೈಸ್ ಮಾಡಲು ಸಿಬ್ಬಂದಿ ಹೋಗಿದ್ದರೆ ಅವರನ್ನೂ ಸಹ ಒಳಗೆ ಬಿಟ್ಟುಕೊಂಡಿಲ್ಲ ರೇಖಾ. ಬಂಗಲೆಯ ಹೊರಗೆ ಮಾತ್ರವೇ ಸ್ಯಾನಿಟೈಸ್ ಮಾಡಿ ವಾಪಸ್ ಬಂದಿದ್ದಾರೆ ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ.

ಉದ್ದೇಶಪೂರ್ವಕವಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲ ರೇಖಾ
ಜುಲೈ 11 ರಂದು ರೇಖಾ ಅವರ ಸೆಕ್ಯೂರಿಟಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿರುವ ವಿಷಯ ಗೊತ್ತಾಗಿತ್ತು. ಅಂದಿನಿಂದಲೂ ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ ರೇಖಾ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಆದರೆ ಅವರು ಉದ್ದೇಶಪುರ್ವಕವಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.


Click it and Unblock the Notifications











