ಅದ್ದೂರಿ 'ರಾಮಾಯಣ'ಕ್ಕೆ ಸೀತೆಯಾದ 'ಸಾಹೋ' ನಟಿ?
ಬಾಲಿವುಡ್ ನಲ್ಲಿ ರಾಮಾಯಣವನ್ನು ತೆರೆಮೇಲೆ ತರುವ ಪ್ರಯತ್ನ ನಡೆಯುತ್ತಿದೆ. ಸುಮಾರು 600 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ರಾಮಾಯಣ ಚಿತ್ರಕ್ಕೆ ಸಾಕಷ್ಟು ಕಲಾವಿದರ ಹೆಸರು ಕೇಳಿ ಬರುತ್ತಿದೆ. ರಾಮನಾಗಿ ಹೃತಿಕ್ ರೋಷನ್ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹೃತಿಕ್ ಗೆ ಜೋಡಿಯಾಗಿ ಸೀತೆ ಪಾತ್ರದಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಸೀತೆ ಪಾತ್ರದಲ್ಲಿ ಮಿಂಚುವುದು ದೀಪಿಕಾ ಬಹುತೇಕ ಪಕ್ಕ ಎಂದು ಹೇಳಲಾಗಿತ್ತು. ಆದ್ರೀಗ ದೀಪಿಕಾ ಬದಲಿಗೆ ನಟಿ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರಂತೆ.
ಅದ್ದೂರಿ ರಾಮಾಯಣಕ್ಕೆ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿತೀಶ್ ಮತ್ತು ಶ್ರದ್ಧಾ ಈ ಮೊದಲು ಛಿಛೋರೆ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಹಾಗಾಗಿ ಸೀತೆ ಪಾತ್ರವನ್ನು ಶ್ರದ್ಧಾ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ನಿರ್ಧರಿಸಿ ನಿತೀಶ್, ಶ್ರದ್ಧಾ ಅವರನ್ನು ಸೀತೆ ಮಾಡಲು ಮುಂದಾಗಿದ್ದಾರಂತೆ.

ಇನ್ನು ಈ ಸುದ್ದಿಗೆ ಪುಷ್ಠಿ ನೀಡುವಂತೆ, ಶ್ರದ್ಧಾ ನಿರ್ದೇಶಕ ಲವ್ ರಂಜನ್ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ರಣಬೀರ್ ಕಪೂರ್ ಜೊತೆ ತೆರೆಹಂಚಿಕೊಳ್ಳಬೇಕಿತ್ತು. ಆದರೆ ಲವ್ ರಂಜನ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರಂತೆ ಶ್ರದ್ಧಾ. ಲವ್ ರಂಜನ್ ಸಿನಿಮಾದಿಂದ ಹೊರಬರಲು ಕಾರಣ ರಾಮಾಯಣ ಸಿನಿಮಾ ಎಂದು ಹೇಳಲಾಗುತ್ತಿದೆ. ಆ ಸಿನಿಮಾ ಒಪ್ಪಿಕೊಂಡರೆ ರಾಮಾಯಣ ಸಿನಿಮಾಗೆ ಡೇಟ್ ಹೊಂದಣಿಕೆಯಾಗಲ್ಲ ಎನ್ನುವ ಕಾರಣಕ್ಕೆ ಲವ್ ರಂಜನ್ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರದ್ಧಾ ಬಳಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ಈಗಾಗಲೆ ಸ್ಟ್ರೀಟ್ ಡ್ಯಾನ್ಸರ್-3 ಚಿತ್ರೀಕರಣವನ್ನು ಮುಗಿಸಿದ್ದಾರೆ. ಜೊತೆಗೆ ಭಾಗಿ-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಹೋ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಮಿಂಚಿದ್ದಾರೆ ಶ್ರದ್ಧಾ. ಈಗ ಸೀತೆಯಾಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.


Click it and Unblock the Notifications











