RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಸಿಡಿದೆದ್ದ ಬಾಲಿವುಡ್ ನಟಿ ಸೋನಂ
ಬಾಲಿವುಡ್ ನಟಿ ಸೋನಂ ಕಪೂರ್ ಸಿನಿಮಾ ವಿಚಾರಗಳಿಗಿಂತ ಬೇರೆ ಬೇರೆ ವಿಚಾರಗಳ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ, ಸೋನಂ ಈಗ RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಸಿಡಿದೆದ್ದಿದ್ದಾರೆ.
ಇತ್ತೀಚಿಗೆ ಅಹಮದಾಬಾದ್ ನಲ್ಲಿ RSS ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮೋಹನ್ ಭಾಗವತ್ "ಶ್ರೀಮಂತ ಮತ್ತು ವಿದ್ಯಾವಂತ ಕುಟುಂಬದಲ್ಲಿ ವಿಚ್ಛೇದನ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಯಾಕಂದರೆ ಶಿಕ್ಷಣ ಮತ್ತು ಶ್ರೀಮಂತಿಕೆ ದುರಹಂಕಾರವನ್ನು ತರುತ್ತಿದೆ. ಇದರಿಂದ ಕುಟುಂಬಗಳು ಬೇರ್ಪಡುತ್ತಿವೆ" ಎಂದು ಹೇಳಿದ್ದರು.
ಈ ಹೇಳಿಕೆ ವಿರುದ್ಧ ಸಿಟ್ಟಿಗೆದ್ದ ಸೋನಂ ಟ್ವಿಟ್ಟರ್ ನಲ್ಲಿ ಮೋಹನ್ ಭಾಗವತ್
ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೋನಂ "ಯಾವ ವಿವೇಕಿ ಈ ರೀತಿ ಮಾತನಾಡುತ್ತಾನೆ? ಹಿಂಜರಿತ ಮೂರ್ಖ ಹೇಳಿಕೆಗಳು" ಎಂದು ಹೇಳುವ ಮೂಲಕ ಮೋಹನ್ ಭಾಗವತ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋನಂ ಕಪೂರ್ ಆಗಾಗ ಟ್ವಿಟ್ಟರ್ ನಲ್ಲಿ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ರಾಜಕೀಯ ವಿಷಗಳು ಮತ್ತು ಮುಖಂಡರು ನೀಡುವ ಹೇಳಿಕೆಯ ಬಗ್ಗೆ ಅಭಿಪ್ರಾಯ ಹೊರಹಾಕುತ್ತಾರೆ.
ಸೋನಂ ಸದ್ಯ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಕೊನೆಯದಾಗಿ ಜೋಯಾ ಫ್ಯಾಕ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸುಜಯ್ ಘೋಷ್ ಚಿತ್ರದಲ್ಲಿ ಸೋನಂ ಅಂಧ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕೊರಿಯನ್ ಸಿನಿಮಾದ ರಿಮೇಕ್ ಆಗಿದೆಯಂತೆ.


Click it and Unblock the Notifications











