''ತಿರುಚಿ ಬರೆದ ಚಿತ್ರಕಥೆಯಲ್ಲಿ ರಿಯಾ ಚಕ್ರವರ್ತಿ ಬಲಿಪಶು ಆದಳಷ್ಟೇ''
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅಪರಾಧಿಯಂತೆ ಬಿಂಬಿತವಾದ ನಟಿ ರಿಯಾ ಚಕ್ರವರ್ತಿ ಈಗ ನಿಧಾನವಾಗಿ ಎಲ್ಲದರಿಂದ ಹೊರಬರುತ್ತಿದ್ದಾರೆ. ಒಂದು ತಿಂಗಳು ಜೈಲುವಾಸ ಅನುಭವಿಸಿ ಮಾನಸಿಕವಾಗಿ ನೊಂದಿದ್ದ ನಟಿ ಈಗ ಸಹಜ ಜೀವನದ ಕಡೆ ಹೆಜ್ಜೆಯಿಟ್ಟಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮನೆಯಲ್ಲಿ ಬಂಧಿಯಾಗಿದ್ದ ರಿಯಾ, ಇತ್ತೀಚಿಗಷ್ಟೆ ಕೆಲವು ಸ್ನೇಹಿತರ ಜೊತೆ ಹೊರಗೆ ಬಂದಿದ್ದರು. ಬಾಲಿವುಡ್‌ನಲ್ಲಿ ರಿಯಾ ಅವಕಾಶಗಳನ್ನು ಕಳೆದುಕೊಂಡರು, ಇನ್ಮುಂದೆ ಸಿನಿಮಾ ಮಾಡುವುದು ಕಷ್ಟ ಎಂದೆಲ್ಲ ಚರ್ಚೆಯಾಗುತ್ತಿರುವಾಗಲೇ ಬಿಟೌನ್‌ಗೆ ಕಂಬ್ಯಾಕ್ ಮಾಡುವ ತಯಾರಿ ನಡೆಸಿದ್ದಾರೆ ಎಂಬ ವಿಚಾರವೂ ಸುದ್ದಿಯಾಗಿತ್ತು.
''ಜೈಲಿಗೆ ಹೋಗಿ ಬಂದ ನಂತರ ರಿಯಾ ಚಕ್ರವರ್ತಿಯ ಸಿನಿ ಲೈಫ್ ಮುಗಿದಿದೆ'' ಎನ್ನಲಾಗಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಹಿರಿಯ ನಟಿ ಸೋನಿ ರಜ್ದಾನ್, ರಿಯಾ ಚಕ್ರವರ್ತಿ ಪರ ಬೆಂಬಲಕ್ಕೆ ನಿಂತಿದ್ದಾರೆ.

''ರಿಯಾ ಚಕ್ರವರ್ತಿಯನ್ನು ಜೈಲಿಗೆ ಕಳುಹಿಸಿದ ವ್ಯಕ್ತಿಗಳು ಬಗ್ಗೆ ಸ್ಪಷ್ಟವಾಗಿ ತಿಳಿದಿದೆ, ಹಾಗೂ ಕೆಲವರು ತಿರುಚಿ ಬರೆದ ಚಿತ್ರಕಥೆಯಲ್ಲಿ ಆಕೆ ಬಲಿಪಶು ಆದಳಷ್ಟೇ. ರಿಯಾ ಜೊತೆ ಯಾರು ಕೆಲಸ ಮಾಡಲ್ಲ ಎಂದು ಏಕೆ ಭಾವಿಸಬೇಕು, ಅವಳು ಚೆನ್ನಾಗಿ ಅವಕಾಶ ಪಡೆಯುತ್ತಾಳೆ, ನನಗೆ ಆ ಭರವಸೆ ಇದೆ'' ಎಂದು ಸೋನಿ ತಿರುಗೇಟು ನೀಡಿದ್ದಾರೆ.
ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ರೂಮಿ ಜಾಫೇರಿ ಅವರು ರಿಯಾ ಕಂಬ್ಯಾಕ್‌ಗೆ ಬಗ್ಗೆ ಮಾಹಿತಿ ನೀಡಿದ್ದರು. ''ಇತ್ತೀಚಿಗೆ ನಾನು ರಿಯಾ ಅವರನ್ನು ಭೇಟಿ ಮಾಡಿದೆ. ಬಹಳಷ್ಟು ನೊಂದಿದ್ದಾರೆ. ತುಂಬಾ ಶಾಂತವಾಗಿ ಕಾಣಿಸಿಕೊಂಡಳು. ಅವಳ ಕೆಲವು ನಿರ್ಧಾರಗಳಿಂದ ನಾವು ಅವಳನ್ನು ದೂಷಿಸಲು ಸಾಧ್ಯವಿಲ್ಲ. 2021ಕ್ಕೆ ರಿಯಾ ಬಾಲಿವುಡ್‌ಗೆ ಕಂಬ್ಯಾಕ್ ಮಾಡ್ತಾಳೆ'' ಎಂದು ತಿಳಿಸಿದ್ದರು.


Click it and Unblock the Notifications











