ಬಹುಭಾಷಾ ನಟಿಗೆ ವಂಚನೆ: ನಂಬಿ ಮೋಸ ಹೋದ 'ಕುರುಬನ ರಾಣಿ'
ಸೈಬರ್ ವಂಚಕರು ಕಳುಹಿಸಿದ ನಕಲಿ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ನಟಿ, ರಾಜಕಾರಣಿ ನಗ್ಮಾ ಕೂಡ ಇದೇ ರೀತಿ ವಂಚನೆಗೆ ಗುರಿಯಾಗಿದ್ದಾರೆ. ಆಕೆಯ ಖಾತೆಯಿಂದ ಸೈಬರ್ ವಂಚಕರು 1 ಲಕ್ಷ ರೂ. ಎಗರಿಸಿರುವುದಾಗಿ ವರದಿಯಾಗಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿ ನಗ್ಮಾ ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.
ಬ್ಯಾಂಕ್ ಖಾತೆಯ ಕೆವೈಸಿ(KYC) ಅಪ್‌ಡೇಟ್ ಮಾಡುವ ನೆಪದಲ್ಲಿ ವಂಚಕರು ಬ್ಯಾಂಕ್ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ನಟಿ ನಗ್ಮಾ ಕೂಡ ಇದೇ ರೀತಿ ತಮ್ಮ ಫೋನ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಫೆಬ್ರವರಿ 28ರಂದು ನಟಿಯ ಫೋನ್‌ಗೆ ಬ್ಯಾಂಕ್‌ನವರು ಕಳುಹಿಸಿದಂತೆ ಒಂದು ಮೆಸೇಜ್ ಬಂದಿದೆ. ಅದರಲ್ಲಿದ್ದ ಲಿಂಕ್ ಅನ್ನು ನಗ್ಮಾ ಕ್ಲಿಕ್ ಮಾಡಿದ್ದಾರೆ. ಕೂಡಲೇ ಆಕೆಗೆ ಫೋನ್‌ಗೆ ಕರೆ ಬಂದಿದೆ. ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡ ವಂಚಕರು ತಾನು ಹೇಳಿದಂತೆ ಮಾಡಿ ಕೆವೈಸಿ ಕಂಪ್ಲೀಟ್ ಮಾಡುವಂತೆ ಹೇಳಿದ್ದಾರೆ.

ನಗ್ಮಾ ಯಾವುದೇ ಅಕೌಂಟ್ ಡಿಟೈಲ್ಸ್ ಶೇರ್ ಮಾಡದ ಕಾರಣ ವಂಚಕ ತನ್ನ ಆನ್‌ಲೈನ್ ಅಕೌಂಟ್‌ಗೆ ಲಾಗಿನ್ ಆಗಿದ್ದಾನೆ. ಬೆನಿಫಿಷರಿ ಅಕೌಂಟ್ ಕ್ರಿಯೇಟ್ ಮಾಡಿ 1 ಲಕ್ಷ ರೂ. ಟ್ರಾನ್ಸ್‌ಫರ್ ಮಾಡಿಕೊಂಡಿದ್ದಾನೆ. ವಂಚಕ ಲಾಗಿನ್ ಆಗಲು ಸಾಕಷ್ಟು ಅಟೆಂಪ್ಟ್ ಮಾಡಿದ್ದು ತನ್ನ ಮೊಬೈಲ್‌ಗೆ ಸಾಕಷ್ಟು ಓಟಿಪಿಗಳು ಬಂದಿದೆ ಎಂದು ನಗ್ಮಾ ಹೇಳಿದ್ದಾರೆ. ಬರೀ 1 ಲಕ್ಷ ಮಾತ್ರ ಕಳೆದುಕೊಂಡಿದ್ದಕ್ಕೆ ಬೇಸರದಲ್ಲೂ ನಗ್ಮಾ ಖುಷಿಪಟ್ಟಿದ್ದಾರೆ. ನಗ್ಮಾ ಅಕೌಂಟ್‌ನಿಂದ ಒಂದು ನ್ಯಾಷನಲ್ ಬ್ಯಾಂಕ್‌ಗೆ 99.998 ರೂ. ಟ್ರಾನ್ಸ್‌ಫರ್ ಆಗಿದೆ. ನಟಿ ಗ್ರಾಹಕರಾಗಿರುವ ಆಗಿರುವ ಅದೇ ಬ್ಯಾಂಕಿನ 80 ಮಂದಿ ಗ್ರಾಹಕರಿಗೆ ಇದೇ ರೀತಿ ವಂಚನೆ ಮಾಡಿದ್ಧಾರೆ.
ಸೈಬರ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ ಸೈಬರ್ ಕ್ರೈಂ ಬಗ್ಗೆ ಎಚ್ಚರದಿಂದ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅನುಮಾನ ಬರುವಂತಹ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ, ಯಾವುದೇ ಬ್ಯಾಂಕ್ ಮಾಹಿತಿ, ಓಟಿಪಿಯನ್ನು ಗೊತ್ತಿಲ್ಲದವರ ಜೊತೆ ಹಂಚಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದಾರೆ. 90ರ ದಶಕದಲ್ಲಿ ನಟಿ ನಗ್ಮಾ ಬಹುಬೇಡಿಕೆಯ ನಟಿಯಾಗಿದ್ದರು. 'ಕುರುಬನ ರಾಣಿ'ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಹೃದಯವಂತ', 'ರವಿಮಾಮ' ಚಿತ್ರಗಳಲ್ಲೂ ನಟಿಸಿದ್ದರು.

9 ಭಾಷೆ ಸಿನಿಮಾಗಳಲ್ಲಿ ನಟಿ ನಗ್ಮಾ ಬಣ್ಣ ಹಚ್ಚಿದ್ದಾರೆ. ಕೊನೆ ಕೊನೆಗೆ ಭೋಜ್‌ಪುರಿ ಸಿನಿಮಾಳಲ್ಲಿ ಹೆಚ್ಚು ನಟಿಸಿದ್ದರು. ಎನ್‌ಟಿಆರ್, ಚಿರಂಜೀವಿ, ನಾಗಾರ್ಜುನ, ರಜನಿಕಾಂತ್ ಸೇರಿದಂತೆ ಘಟಾನುಘಟಿ ಕಲಾವಿದರ ಜೊತೆ ಸ್ಕ್ರೀನ್ ಶೇಕ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಗುರ್ತಿಸಿಕೊಂಡಿರುವ ನಗ್ಮಾ 2015ರಲ್ಲಿ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೂಡ ಆಗಿದ್ದರು.


Click it and Unblock the Notifications











