'ಕೈ' ಬಿಟ್ಟು ಶಿವಸೇನಾ ಕೈ ಹಿಡಿದ ನಟಿ ಊರ್ಮಿಳಾ ಮತೋಡ್ಕರ್
ನಟಿ ಊರ್ಮಿಳಾ ಮತೋಡ್ಕರ್ ನಿರೀಕ್ಷೆಯಂತೆಯೇ ಶಿವಸೇನಾ ಪಕ್ಷ ಸೇರಿಕೊಂಡಿದ್ದಾರೆ. ಇಂದು (ಡಿಸೆಂಬರ್ 01) ರಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ಅವರು ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನಟಿ ಊರ್ಮಿಳಾ ಮತೋಡ್ಕರ್ ಅವರು 'ನಾನು ಶಿವಸೇನಾ ಪಕ್ಷ ಸೇರುತ್ತಿಲ್ಲ' ಎಂದಿದ್ದರು. ಆದರೆ ಹೀಗೆ ಹೇಳಿದ ಕೆಲವೇ ದಿನದಲ್ಲಿ ಅವರು ಪಕ್ಷ ಸೇರ್ಪಡೆಗೊಂಡಿದ್ದಾರೆ.
ಊರ್ಮಿಳಾ ಮತೋಡ್ಕರ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದರು. ನಂತರ ಪಕ್ಷದ ಆಂತರಿಕ ಕಲಹ ಕಾರಣ ನೀಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು ಊರ್ಮಿಳಾ.

ಕೆಲವು ದಿನಗಳ ಹಿಂದೆ, ನಟಿ ಊರ್ಮಿಳಾ ಅವರನ್ನು ಶಿವಸೇನಾ ಪಕ್ಷವು ಎಂಎಲ್‌ಸಿ ಮಾಡಲಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಅದರ ಬೆನ್ನಲ್ಲೇ ಊರ್ಮಿಳಾ ಮತೋಡ್ಕರ್ ಶಿವಸೇನಾ ಪಕ್ಷ ಸೇರಿಕೊಂಡಿದ್ದಾರೆ. ಅಲ್ಲಿಗೆ ಊರ್ಮಿಳಾ ಎಂಎಲ್‌ಸಿ ಆಗುವುದು ಖಚಿತ ಎನ್ನಲಾಗುತ್ತಿದೆ.

ನಟಿ ಊರ್ಮಿಳಾ ಮತೋಡ್ಕರ್ ಇತ್ತೀಚೆಗೆ ಕಂಗನಾ ಜೊತೆ ಟ್ವಿಟ್ಟರ್ ಜಗಳವಾಡಿ ಸುದ್ದಿಗೆ ಬಂದಿದ್ದರು. ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಗೆ ಹೋಲಿಸಿದ್ದ ಕಂಗನಾ ವಿರುದ್ಧ ಊರ್ಮಿಳಾ ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದ್ದರು. ಇದಕ್ಕೆ ಪ್ರತಿಯಾಗಿ, ಊರ್ಮಿಳಾರನ್ನು 'ಸಾಫ್ಟ್ ಪಾರ್ನ್ ನಟಿ' ಎಂದು ಕರೆದಿದ್ದರು ಕಂಗನಾ.


Click it and Unblock the Notifications











