ಲೋಕಸಭೆ ಚುನಾವಣೆ: ಬಿಜೆಪಿ 7ನೇ ಪಟ್ಟಿಯಲ್ಲಿ ದರ್ಶನ್ ಜೊತೆ ನಟಿಸಿದ್ದ ನಟಿಗೂ ಸಿಕ್ತು ಟಿಕೆಟ್
ಲೋಕಸಭೆ ಚುನಾವಣೆ 2024ರ ಕಣ ರಂಗೇರುತ್ತಿದೆ. ವಿವಿಧ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಪಕ್ಷಗಳು ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.
ಒಟ್ಟು ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಲೋಕಸಭೆ ಚುನಾವಣೆ ಜೊತೆಗೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತಿದೆ. ನಿಧಾನವಾಗಿ ಪ್ರಚಾರ ಕೂಡ ಆರಂಭವಾಗಿದೆ. ಇನ್ನು ಟಿಕೆಟ್ ಸಿಕ್ಕ ಅಭ್ಯರ್ಥಿಗಳು ಹಿರಿಹಿರಿ ಹಿಗ್ಗುತ್ತಿದ್ದರೆ ಸಿಗದವರು ಬೇಸರ ಹೊರಹಾಕುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಕೆಲವೆಡೆ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಾಲಿವುಡ್ ನಟಿ ಕಂಗನಾ ರಾಣಾವತ್‌ಗೆ ಹಿಮಾಚಲ ಪ್ರದೇಶನದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗು ಕಣಕ್ಕಿಳಿಯುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ನಟಿ ಸುಮಲತಾ ಅಂಬರೀಶ್ ಟಿಕೆಟ್ ಆಕಾಂಕ್ಷಿ ಆಗಿದ್ದರೂ ನಿರಾಸೆ ಆಗಿದೆ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸುಮಲತಾ ಗೆದ್ದಿದ್ದರು. ಬಿಜೆಪಿ 7ನೇ ಪಟ್ಟಿ ಬಿಡುಗಡೆ ಮಾಡಿದ್ದು ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ನಟಿ ನವನೀತ್ ಕೌರ್ ರಾಣಾಗೆ ಟಿಕೆಟ್ ಸಿಕ್ಕಿದೆ.
ಕಳೆದ ಚುನಾವಣೆಯಲ್ಲಿ ನವನೀತ್ ಕೌರ್ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬೀಗಿದ್ದರು. ಮುಂಬೈ ಬೆಡಗಿ ನವನೀತ್ ಕೌರ್ ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಬಿಜೆಪಿ ಪಟ್ಟಿಯಲ್ಲಿ ಹೆಸರು ಇದ್ದ ಕಾರಣ ಅವರು ಬುಧವಾರ ಮಧ್ಯರಾತ್ರಿ ಪಕ್ಷದ ಶಾಲು ಧರಿಸಿದ್ದರು. ನವನೀತ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಯ ಹಿರಿಯ ಮುಖಂಡ ಬಾವನಕುಳೆ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅವರನ್ನು ಬವಾಂಕುಲೆ ಆತ್ಮೀಯವಾಗಿ ಪಕ್ಷಕ್ಕೆ ಆಹ್ವಾನಿಸಿದರು. ನವನೀತ್ ಅವರ ಪತಿ, ಶಾಸಕ ರವಿ ರಾಣಾ ಕೂಡ ಅವರೊಂದಿಗೆ ಹಾಜರಿದ್ದರು.

ಮಾಧ್ಯಮಗಖ ಜೊತೆ ಮಾತನಾಡಿದ ನವನೀತ್ ಕೌರ್ "ಕಳೆದ ಐದು ವರ್ಷಗಳಿಂದ ಎನ್‌ಡಿಎ ಬೆಂಬಲಿಗರಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಭಿವೃದ್ಧಿ ಪಥವನ್ನು ಅನುಸರಿಸುತ್ತಿದ್ದೇವೆ" ಎಂದು ಹೇಳಿದರು. ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ಅಮರಾವತಿಯನ್ನು ಒಂದಾಗಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವನೀತ್ ಕೌರ್ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ನವನೀತ್ ಕೌರ್ ಕನ್ನಡದ 'ದರ್ಶನ್' ಚಿತ್ರದಲ್ಲಿ ನಟಿಸಿದ್ದರು. ರಮೇಶ್ ಕಿಟ್ಟಿ ನಿರ್ದೇಶನದ ಈ ಚಿತ್ರ 20 ವರ್ಷಗಳ ಹಿಂದೆ ತೆರೆಕಂಡಿತ್ತು. ಕಾಲೇಜು ಸಮಯದಲ್ಲೇ ಮಾಡೆಲಿಂಗ್ ಆರಂಭಿಸಿದ ನವನೀತ್, ತೆಲುಗಿನ 'ಶೀನು ವಾಸಂತಿ ಲಕ್ಷ್ಮಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಅದೇ ವರ್ಷ ಕನ್ನಡದಲ್ಲಿ ದರ್ಶನ್ ಜೊತೆ ನಟಿಸಿದ್ದರು. ಚಿತ್ರದಲ್ಲಿ ನಾಯಕಿ ನಂದಿನಿ ಪಾತ್ರದಲ್ಲಿ ಮಿಂಚಿದ್ದರು.
ಕನ್ನಡ, ತೆಲುಗು, ಹಿಂದಿ, ತಮಿಳು, ಪಂಜಾಬಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನವನೀತ್ ಕೌರ್ ಬಣ್ಣ ಹಚ್ಚಿ ಗೆದ್ದಿದ್ದಾರೆ. 2010ರ ಬಳಿಕ ಆಕೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಆಕೆಯ ಪತಿ ರವಿ ರಾಣಾ ಕೂಡ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಬದ್ನೇರಾ ಶಾಸಕರಾಗಿದ್ದಾರೆ.


Click it and Unblock the Notifications










