'ದಿ ಕೇರಳ ಸ್ಟೋರಿ' ನಂತರ 'ಬಸ್ತರ್: ದಿ ನಕ್ಸಲ್ ಸ್ಟೋರಿ' ಹೇಳಲು ಹೊರಟ ನಟಿ ಅದಾ ಶರ್ಮಾ
ಬಹುಭಾಷಾ ನಟಿ ಅದಾ ಶರ್ಮಾ ನಿರ್ದೇಶಕ ಸುದೀಪ್ತೋ ಸೇನ್ ಅವರ 'ದಿ ಕೇರಳ ಸ್ಟೋರಿ' ಸಿನಿಮಾದಿಂದ ಖ್ಯಾತಿ ಗಳಿಸಿದ್ದಾರೆ. ಸಿನಿಮಾ ಹಲವು ವಿವಾದಗಳಿಗೆ ಒಳಾಗಿದ್ದರೂ ಕೂಡ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ವರ್ಷ ದೊಡ್ಡ ಸಕ್ಸಸ್ ಕಂಡ ಸಿನಿಮಾಗಳ ಪಟ್ಟಿಯಲ್ಲಿ ದಿ ಕೇರಳ ಸ್ಟೋರಿ ಕೂಡ ಸೇರಿಕೊಂಡಿದೆ.
ಸಿನಿಮಾ ಯಶಸ್ಸಿನಲ್ಲಿರುವ ನಟಿ ಅದಾ ಶರ್ಮಾ ಈಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇರಳ ಸ್ಟೋರಿ ಹೇಳಿದ್ದ ಅವರು ಈಗ ನಕ್ಸಲ್ ಸ್ಟೋರಿ ಹೇಳಲು ಹೊರಟಿದ್ದಾರೆ. ದಿ ಕೇರಳ ಸ್ಟೋರಿ ಚಿತ್ರತಂಡವೇ 'ಬಸ್ತರ್: ದಿ ನಕ್ಸಲ್ ಸ್ಟೋರಿ' ಸಿನಿಮಾವನ್ನು ನಿರ್ಮಿಸಲಿದ್ದು, ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಮೊದಲ ದಿನದ ಶೂಟಿಂಗ್‌ನ ಕೆಲವು ಫೋಟೋಗಳನ್ನು ಅದಾ ಶರ್ಮಾ ಹಂಚಿಕೊಂಡಿದ್ದಾರೆ.

ನಕ್ಸಲ್ ಸ್ಟೋರಿ ಹೇಳಲಿದೆ ದಿ ಕೇರಳ ಸ್ಟೋರಿ ಚಿತ್ರತಂಡ!
'ಬಸ್ತರ್: ದಿ ನಕ್ಸಲ್ ಸ್ಟೋರಿ' ಚಿತ್ರದ ಮಹೂರ್ತ ಸಮಾರಂಭ ಮತ್ತು ಮೊದಲ ದಿನದ ಚಿತ್ರೀಕರಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ನಿರ್ದೇಶಕರು ನೀಡಿರುವ ಕಟ್ಟುನಿಟ್ಟಿನ ಸೂಚನೆಯನ್ನು ತಿಳಿಸಿದ್ದಾರೆ. 'ದಿ ಕೇರಳ ಸ್ಟೋರಿ'ಯ ವಿಪುಲ್ ಅಮೃತ್‌ಲಾಲ್ ಶಾ ಮತ್ತು ಸುದೀಪ್ತೋ ಸೇನ್ ಅವರು ಅದಾ ಶರ್ಮಾ ಅವರೊಂದಿಗೆ 'ಬಸ್ತರ್: ದಿ ನಕ್ಸಲ್ ಸ್ಟೋರಿ' ಹೇಳಲಿದ್ದಾರೆ.
ಚಿತ್ರೀಕರಣ ಪ್ರಾರಂಭವಾಗಿದ್ದು, ಅದಾ ಶರ್ಮಾ ಸಿನಿಮಾದ ತನ್ನ ಮೊದಲ ಸಂಭಾಷಣೆಯನ್ನು ಹೇಳಿದ್ದಾರೆ. ನಟಿ ಹಂಚಿಕೊಂಡಿರುವ ಅನೇಕ ಫೋಟೋಗಳಲ್ಲಿ, ಅವರು ಮಿಲಿಟರಿ ಪ್ಯಾಂಟ್, ಕಪ್ಪು ಕಮಾಂಡೋ ಟಿ-ಶರ್ಟ್ ಮತ್ತು ಕಮಾಂಡೋ ತರಹ ತಲೆಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಇನ್ನು, ನಟಿ ಈ ಸಿನಿಮಾದಲ್ಲಿ ನೀರಜಾ ಮಾಧವನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಫೋಟೋಗಳನ್ನು ಪೋಸ್ಟ್ ಮಾಡಿದ ಅದಾ ಶರ್ಮಾ, "'ದಿ ಕೇರಳ ಸ್ಟೋರಿ' ಕ್ರಿಯೇಟರ್ಸ್ ಮತ್ತು ತಂಡದಿಂದ ಬಸ್ತರ್ - ದಿ ನಕ್ಸಲ್ ಸ್ಟೋರಿ ಸಿನಿಮಾ... ಕೇರಳ ಸ್ಟೋರಿಯಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನನ್ನ ಅಭಿನಯಕ್ಕಾಗಿ ನೀವು ನೀಡಿದ ಪ್ರೀತಿಗೆ ಧನ್ಯವಾದಗಳು. ಇದೇ ಪ್ರೀತಿಯನ್ನು ನೀವು ಬಸ್ತರ್‌ನಲ್ಲಿನ ನೀರಜಾ ಮಾಧವನ್‌ಗೆ ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಸ್ತರ್: ದಿ ನಕ್ಸಲ್ ಸ್ಟೋರಿ ಸಿನಿಮಾ
ವಿಪುಲ್ ಅಮೃತ್‌ಲಾಲ್ ಶಾ ಮತ್ತು ಆಶಿನ್ ಎ ಶಾ ನಿರ್ಮಾಣ ಮಾಡುತ್ತಿರುವ 'ಬಸ್ತರ್: ದಿ ನಕ್ಸಲ್ ಸ್ಟೋರಿ' ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಅದಾ ಶರ್ಮಾ ನಾಯಕಿಯಾಗಲಿದ್ದಾರೆ. ಲಾಸ್ಟ್ ಮಾಂಕ್ ಮಾಧ್ಯಮದ ಸಹಯೋಗದೊಂದಿಗೆ ಸನ್‌ಶೈನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಚಿತ್ರವು ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ.


Click it and Unblock the Notifications











