5 ದಿನಕ್ಕೆ 'ದಿ ಕೇರಳ ಸ್ಟೋರಿ' ಅರ್ಧ ಶತಕ: ಸೋಮವಾರಕ್ಕಿಂತ ಮಂಗಳವಾರ ಹೆಚ್ಚು ಗಳಿಕೆ
ಕೆಲವೆಡೆ ಬ್ಯಾನ್ ಬಿಸಿಯ ನಡುವೆಯೂ ವಿವಾದಾತ್ಮಕ 'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಗಳಿಕೆ ಹೆಚ್ಚಿಸಿಕೊಂಡು ಮುಂದೆ ಸಾಗಿದೆ. ಸೋಮವಾರ, ಮಂಗಳವಾರ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ ಪ್ರದರ್ಶನ ನಿಲ್ಲಿಸಿದರೆ ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ.
ಅದಾ ಶರ್ಮಾ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ಈ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸುದೀಪ್ತೊ ಸೇನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೇರಳದ ಯುವತಿಯರು ಬಲವಂತವಾಗಿ ಮತಾಂತರಗೊಂಡು ಇಸ್ಲಾಮಿಕ್ ಉಗ್ರ ಸಂಘಟನೆ ಸೇರಿದ್ದಾರೆ ಎನ್ನಲಾದ ವಿಚಾರವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದೇ ಕಾರಣಕ್ಕೆ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಸುಳ್ಳು ವಿಚಾರನ್ನು ಸೇರಿಸಿ ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿದ್ದರು. ಹಾಗಾಗಿ ಸಿನಿಮಾ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಿನಿಮಾ ಬಿಡುಗಡೆ ಮಾಡದಂತೆ ಆಗ್ರಹಿಸಿದ್ದವು. ಆದರೆ ಕೋರ್ಟ್ ಸಿನಿಮಾ ಬಿಡುಗಡೆ ತಡೆಯಲು ಸಾಧ್ಯವಿಲ್ಲ ಎಂದಿತ್ತು. ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಶುಕ್ರವಾರಕ್ಕಿಂತ ಶನಿವಾರ, ಭಾನುವಾರ ಸಿನಿಮಾ ಕಲೆಕ್ಷನ್ ಚೆನ್ನಾಗಿತ್ತು. ವಾರದ ದಿನವಾದ ಸೋಮವಾರ, ಮಂಗಳವಾರವೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಸದ್ಯ 5 ದಿನಕ್ಕೆ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಬಗ್ಗೆ ಬಾಲಿವುಡ್ ಬಾಕ್ಸಾಫೀಸ್ ಪಂಡಿತ ತರಣ್ ಆದರ್ಶ್ ಟ್ವೀಟ್ ಮಾಡಿದ್ಧಾರೆ.
5 ದಿನಕ್ಕೆ ಅರ್ಧ ಶತಕ
'ದಿ ಕೇರಳ ಸ್ಟೋರಿ' ಸಿನಿಮಾ ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಹಾಗೂ ಮಂಗಳವಾರ 11.14 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿದೆ. ಒಟ್ಟಾರೆ ಭಾರತದಲ್ಲಿ ಮೊದಲ 5 ದಿನಕ್ಕೆ ಸಿನಿಮಾ ಒಟ್ಟು 56.86 ಕೋಟಿ ರೂ. ಗಳಿಕೆ ಕಂಡು ದಾಖಲೆ ಸೃಷ್ಟಿಸಿದೆ. ಯಾವುದೇ ಸ್ಟಾರ್ ನಟರು ಇಲ್ಲದೇ ಇರುವ ಸಿನಿಮಾ ಈ ಪಾಟಿ ಸದ್ದು ಮಾಡುತ್ತಿರುವುದು ವಿಶೇಷ.

ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನ ಇಲ್ಲ
ನೀರಸ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ಹಿನ್ನೆಲೆ ನೆಪವೊಡ್ಡಿ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ. ಈ ಬಗ್ಗೆ ತಮಿಳುನಾಡು ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷ ತಿರುಪ್ಪೂರ್ ಸುಬ್ರಮಣ್ಯ ಮಾತನಾಡಿ "ಪಿವಿಆರ್‌ನಂತಹ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಪ್ರದರ್ಶಿಸುವ ಥಿಯೇಟರ್‌ಗಳು ಮಾತ್ರ 'ದಿ ಕೇರಳ ಸ್ಟೋರಿ' ಪ್ರದರ್ಶನಕ್ಕೆ ಮುಂದಾಗಿದ್ದವು. ಉಳಿದಂತೆ ಸ್ಥಳಿಯ ಥಿಯೇಟರ್‌ನವರು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿರಲಿಲ್ಲ. ಸ್ಟಾರ್‌ಗಳು ಚಿತ್ರದಲ್ಲಿ ಇಲ್ಲದೇ ಇರುವುದೇ ಇಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿರಾಸಕ್ತಿ ತೋರಲು ಕಾರಣ" ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್
ಇನ್ನು ಪಶ್ಚಿಮ ಬಂಗಾಳ ಸರ್ಕಾರ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ನಿಷೇಧಿಸಿದೆ. ರಾಜ್ಯದಲ್ಲಿ ದ್ವೇಷ ಹಾಗೂ ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ಶಾಂತಿಯನ್ನು ಕಾಪಾಡುವ ಸಲುವಾಗಿ ಸರ್ಕಾರವು ಕೇರಳ ಸ್ಟೋರಿ ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
2 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ರದ್ದಾಗಿದ್ದರೆ ಮತ್ತೊಂದು ಕಡೆ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಒಟ್ನಲ್ಲಿ ನಿಧಾನವಾಗಿ ದಿ ಕಾಶ್ಮೀರ್ ಫೈಲ್ಸ್ ರೀತಿಯಲ್ಲೇ 'ದಿ ಕೇರಳ ಸ್ಟೋರಿ' ಕೂಡ ಸದ್ದು ಮಾಡ್ತಿದೆ.


Click it and Unblock the Notifications











