ದೇಶ ವಿದೇಶದಲ್ಲಿ 'ದಿ ಕೇರಳ ಸ್ಟೋರಿ' ಅಬ್ಬರ: ಮತ್ತೊಂದು ಮೈಲಿಗಲ್ಲಿನ ಹೊಸ್ತಿಲಲ್ಲಿ ವಿವಾದಾತ್ಮಕ ಸಿನಿಮಾ
ಅದಾ ಶರ್ಮಾ ನಟನೆಯ 'ದಿ ಕೇರಳ ಸ್ಟೋರಿ' ಸಿನಿಮಾ ಆರ್ಭಟ ಮುಂದುವರೆದಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಹೆಚ್ಚುತ್ತಲೇ ಸಾಗಿದೆ. ಸುದೀಪ್ತೋ ಸೇನ್ ನಿರ್ದೇಶನದ ಈ ವಿವಾದಾತ್ಮಕ ಸಿನಿಮಾ ಯಶಸ್ವಿ ಓಟ ಮುಂದುವರೆಸಿದೆ. ಎರಡನೇ ವೀಕೆಂಡ್‌ನಲ್ಲಿ ಮತ್ತಷ್ಟು ದಾಖಲೆ ಬರೆಯುವ ಸುಳಿವು ಸಿಗುತ್ತಿದೆ. ಕೆಲವರ ವಿರೋಧದ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಮತಾಂತರ ಮಾಡಿ ಭಯೋತ್ಪಾದನೆ ಚಟುವಟಿಕೆಗೆ ದೂಡಲಾಗುತ್ತಿದೆ ಎನ್ನಲಾಗುತ್ತಿರುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಆದರೆ ಇದೆಲ್ಲಾ ಕಟ್ಟು ಕಥೆ ಅನ್ನುವುದು ಕೆಲವರ ಆರೋಪ. ಇದೇ ಕಾರಣಕ್ಕೆ ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು 'ದಿ ಕೇರಳ ಸ್ಟೋರಿ' ಸಿನಿಮಾ ರಿಲೀಸ್ ಮಾಡದಂತೆ ಆಗ್ರಹಿಸಿದ್ದವು. ಆದರೆ ಕೋರ್ಟ್ ಸಿನಿಮಾ ರಿಲೀಸ್ ತಡೆ ನೀಡಲು ನಿರಾಕರಿಸಿತ್ತು. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಥಿಯೇಟರ್‌ಗಳಲ್ಲಿ ಗಟ್ಟಿಯಾಗುತ್ತಾ ಹೋಯಿತು.

8 ದಿನಕ್ಕೆ ಸಿನಿಮಾ 93.37 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಇಂದೇ 100 ಕೋಟಿ ರೂ. ಕ್ಲಬ್ ಸೇರಲಿದೆ. ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ 100 ಕೋಟಿ ರೂ. ಕ್ಲಬ್ ಸೇರಲು ತಿಣುಕಾಡುತ್ತಿವೆ. ಅಂತಹ ಸಮಯದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಸಂಚಲನ ಸೃಷ್ಟಿಸಿದೆ. 2ನೇ ಶುಕ್ರವಾರ ಸಿನಿಮಾ 12.23 ಕೋಟಿ ರೂ. ಗಳಿಸಿ ಎಲ್ಲರ ಹುಬ್ಬೇರಿಸಿದೆ. ವೀಕೆಂಡ್ ಆಗಿರುವುದರಿಂದ ಇಂದು 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವುದು ಪಕ್ಕಾ ಎನ್ನಲಾಗ್ತಿದೆ.
2 ರಾಜ್ಯಗಳಲ್ಲಿ ಪ್ರದರ್ಶನ ಇಲ್ಲ
ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿತ್ತು. ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದ ಶಾಂತಿ, ಸುವ್ಯವಸ್ಥೆ ಕಾರಣವೊಡ್ಡಿ ಸಿನಿಮಾ ನಿಷೇಧಿಸಿತ್ತು. ಇನ್ನು ತಮಿಳುನಾಡಿನಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ ಎಂದು ಹೇಳಿ ಸ್ವಯಂ ಪ್ರೇರಿತರಾಗಿ ಥಿಯೇಟರ್ ಮಾಲೀಕರು ಸಿನಿಮಾ ಪ್ರದರ್ಶನ ನಿಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಎರಡು ರಾಜ್ಯಗಳಿಗೆ ನೋಟಿಸ್ ನೀಡಿದೆ. ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿರುವಾಗ ನೀವು ಯಾಕೆ ನಿಷೇಧಿಸಿದ್ದೀರಾ ಎಂದು ಕೇಳಿದೆ.

3 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ
ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಹರ್ಯಾಣದಲ್ಲಿ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇಂತಹ ಸಿನಿಮಾಗಳನ್ನು ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಆಯಾ ರಾಜ್ಯದ ಸರ್ಕಾರಗಳು ಈ ನಿರ್ಧಾರಕ್ಕೆ ಬಂದಿವೆ. ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಕ್ಕೆ ಚಿತ್ರತಂಡ ಸಿಎಂ ಆದಿತ್ಯನಾಥ್ ಭೇಟಿ ಮಾಡಿ ಧನ್ಯವಾದ ತಿಳಿಸಿತ್ತು. ಈ ವೇಳೆ ಚಿತ್ರತಂಡದ ಶ್ರಮಕ್ಕೆ ಸಿಎಂ ಮೆಚ್ಚುಗೆ ಸೂಚಿಸಿದ್ದರು.
ವಿದೇಶಗಳಲ್ಲೂ ಸಿನಿಮಾ ಆರ್ಭಟ
ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಸ್ಟ್ರೇಲಿಯಾದಲ್ಲಿ 2 ದಿನಗಳ ಹಿಂದೆ ಬಿಡುಗಡೆಯಾದ ಸಿನಿಮಾ 44 ಲಕ್ಷ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ಪ್ರಪಂಚದ 40 ದೇಶಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ ಎಂದು ಕೂಡ ತಿಳಿಸಿದ್ದಾರೆ. ಈಗಾಗಲೇ 60 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಿರುವುದಾಗಿ ಮಾಹಿತಿ ನೀಡಿದೆ.
ಈಗಾಗಲೇ ಜೀ 5 ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದ್ದು ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರುವ ಸುಳಿವು ಸಿಗುತ್ತಿದೆ. ಇನ್ನು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ನೋಡುತ್ತಿದ್ದರೆ ಅನಾಯಾಸವಾಗಿ 250 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.


Click it and Unblock the Notifications