₹1000 ಕೋಟಿಗೆ ತಮ್ಮ 'ಧರ್ಮ' ಸಂಸ್ಥೆಯ ಅರ್ಧ ಪಾಲು ಮಾರಿದ ಕರಣ್ ಜೋಹರ್...!
ಎಲ್ಲಿಂದಲೋ ಬಂದ ಪೀಡೆ ಕೊರೊನಾ ವೈರಸ್ಸು. ಅದರಿಂದ ಬಚಾವಾಗಲು ಮಾಡಲಾದ ಲಾಕ್ ಡೌನು ಆ ನಂತರದ ಸೈಡ್ ಎಫೆಕ್ಟು ಯಾರು ಯಾವತ್ತು ಮರೆಯಲಾರರು. ಅನೇಕ ಜನರ ಬದುಕನ್ನು ಕಿತ್ತುಕೊಂಡ ಈ ಕೊರೊನಾ ಕಾಲ ಘಟ್ಟದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೊತೆಗೂಡಿ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿತ್ತು. ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. ಭಾರತದಲ್ಲಿ ತಯಾರಾದ ಕೋವಿಶೀಲ್ಡ್ ಸುರಕ್ಷಿತ ಮತ್ತು ಪರಿಣಾಮಕಾರಿಯೆಂದು ಖುದ್ದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಹೇಳಿದ್ದರೂ ಆ ನಂತರ ಈ ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಚರ್ಚೆಯಾಯ್ತು. ಆ ಚರ್ಚೆ ಈಗಲೂ ನಡೆಯುತ್ತಿದೆ.
ಇಂತಹ ಕೋವಿಶೀಲ್ಡ್‌ನ ತಯಾರಿಸಿದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯ ನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಈಗ ಮನರಂಜನೆಯ ಜಗತ್ತಿಗೆ ಬಂದಿದ್ದಾರೆ. ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಪಾಲುದಾರರಾಗಿದ್ದಾರೆ. ಸಂಸ್ಥೆಯಲ್ಲಿ 50% ಪಾಲು ಪಡೆದು ಒಂದು ಸಾವಿರ ಕೋಟಿ ಹೂಡಲು ಮುಂದಾಗಿದ್ದಾರೆ. ಕರಣ್ ಜೋಹರ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಹೌದು, ಅಸಲಿಗೆ ಧರ್ಮ ಪ್ರೊಡಕ್ಷನ್ ಸಂಸ್ಥೆಯನ್ನು ಕರಣ್ ಜೋಹರ್ ಅವರಿಂದ ಮುಖೇಶ್ ಅಂಬಾನಿ ಖರೀದಿಸಲಿದ್ದಾರೆ ಎನ್ನುವ ಮಾತು ಹಿಂದೆ ಕೇಳಿ ಬಂದಿತ್ತು. ಇದಕ್ಕೂ ಮುನ್ನ ಸಾರೆಗಾಮ ಸಂಸ್ಥೆಯ ಜೊತೆ ಕರಣ್ ಜೋಹರ್ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಮುಖೇಶ್ ಅಂಬಾನಿ ಅವರ ಜೀಯೋ ಮತ್ತು ಸಾರೆಗಾಮ ಸಂಸ್ಥೆಗೆ ಸೆಡ್ಡು ಹೊಡೆದು ಆಧಾರ ಪೂನಾವಾಲಾ ಧರ್ಮ ಪ್ರೊಡಕ್ಷನ್‌ನಲ್ಲಿ ಪಾಲುದಾರರಾಗಿದ್ದಾರೆ.
ಇನ್ನೂ ಆಧಾರ ಪೂನಾವಾಲಾ ಒಂದು ಸಾವಿರ ಕೋಟಿ ಹಣ ಹೂಡಲು ಸಿದ್ಧರಾದ ಹಿನ್ನೆಲೆ ಕರಣ್ ಜೋಹರ್ ತಮ್ಮ ಖುರ್ಚಿಯನ್ನು ಆಧಾರ್ ಪೂನಾವಾಲಾಗೆ ಬಿಟ್ಟು ಕೊಟ್ಟಿಲ್ಲ. ಬದಲಿಗೆ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷರಾಗಿಯೇ ಮುಂದುವರೆಯಲಿದ್ದಾರೆ. ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಅಪೂರ್ವ ಮೆಹ್ತಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ಈ ಒಪ್ಪಂದದ ಕುರಿತು ಮಾತನಾಡಿರುವ ಕರಣ್ ಜೋಹರ್ ಸ್ನೇಹಿತ ಆಧಾರ್ ಪೂನಾವಾಲಾ ಧರ್ಮ ಜೋತೆ ಕೈ ಜೋಡಿಸಿರುವುದರಿಂದ ನಮ್ಮ ಧರ್ಮ ಪ್ರೊಡಕ್ಷನ್ಸ್ ಶಕ್ತಿ ಇನ್ನೂ ಹೆಚ್ಚಾಗಿದೆ ಎಂದಿದ್ದಾರೆ. ಚಿತ್ರಪರಂಪರೆಯನ್ನು ನಾವು ಇಬ್ಬರು ಸೇರಿ ಮುಂದುವರೆಸಲಿದ್ದೇವೆ, ಧರ್ಮ ಸಂಸ್ಥೆಯನ್ನು ಇನ್ನೂ ಎತ್ತರೆತ್ತರಕ್ಕೆ ಕರೆದೊಯ್ಯುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಸ್ನೇಹಿತ ಕರಣ್ ಜೋಹರ್ ಅವರ ಅದ್ಭುತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್‌ನಲ್ಲಿ ಹಣ ಹೂಡಲು ಸಂತೋಷವಾಗುತ್ತಿದೆ ಎಂದಿರುವ ಆಧಾರ್ ಪೂನಾವಾಲಾ ಮುಂದಿನ ದಿನಗಳಲ್ಲಿ ಹತ್ತು ಹಲವು ಬೆರಗುಗೊಳಿಸುವಂತಹ ಚಿತ್ರಗಳನ್ನು ನೀವು ನಿರೀಕ್ಷೆ ಮಾಡಬಹುದು ಎಂದಿದ್ದಾರೆ.
ಸದ್ಯಕ್ಕೆ ಬಾಲಿವುಡ್‌ನಲ್ಲಿ ಈ ಒಪ್ಪಂದ ತೀವೃ ಕುತೂಹಲ ಮೂಡಿಸಿದೆ. ಕರಣ್ ಜೋಹರ್ ಮತ್ತು ಆಧಾರ್ ಪೂನಾವಾಲಾ ಮುಂಬರುವ ದಿನಗಳಲ್ಲಿ ಯಾವೆಲ್ಲ ಮ್ಯಾಜಿಕ್ ಮಾಡ್ತಾರೆ ಎನ್ನುವ ಪ್ರಶ್ನೆ ಅನೇಕರಲ್ಲಿ ಈಗ ಮನೆ ಮಾಡಿದೆ. ಇಬ್ಬರ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಮೊದಲ ಸಿನಿಮಾ ಯಾವುದು ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











