ಊಸರವಳ್ಳಿ ರೀತಿ ಬಣ್ಣ ಬದಲಿಸಿದ 'ಆದಿಪುರುಷ್' ಸಂಭಾಷಣೆಕಾರನಿಗೆ ಜೀವ ಬೆದರಿಕೆ ಪತ್ರ: ಪೊಲೀಸರ ಭದ್ರತೆ
ಕಳೆದ ವಾರ ಬಿಡುಗಡೆಯಾದ 'ಆದಿಪುರುಷ್' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರಭಾಸ್ ತಾಕತ್ತು ಏನು ಅನ್ನೋದು ಬಾಕ್ಸಾಫೀಸ್‌ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಆದರೆ ಸಿನಿಮಾ ನಾನಾ ಕಾರಣಕ್ಕೆ ವಿವಾದ ಸೃಷ್ಟಿಸಿದೆ. ಚಿತ್ರತಂಡದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅದರಲ್ಲೂ ಚಿತ್ರದ ಸಂಭಾಷಣೆಕಾರ ಹೇಳಿಕೆ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರವನ್ನು 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ತೆರೆಗೆ ತರಲಾಗಿದೆ. ಆದರೆ ಕಲಾವಿದರ ವೇಷಭೂಷಣ, ಡೈಲಾಗ್ಸ್ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಟೀಸರ್ ರಿಲೀಸ್ ಸಮಯದಲ್ಲೇ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಎಲ್ಲವನ್ನು ಸರಿಪಡಿಸಿದ್ದೇವೆ ಎಂದು ಹೇಳಿ 6 ತಿಂಗಳು ತಡವಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗಿದೆ. ಆದರೆ ಸಿನಿಮಾ ಮಾತ್ರ ಮತ್ತದೇ ಕಾರಣಕ್ಕೆ ವಿವಾದ ಹುಟ್ಟು ಹಾಕಿದೆ. ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೇಳಿಬರ್ತಿದೆ.

ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದ್ದರೆ ಸೈಫ್ ಅಲಿಖಾನ್ ರಾವಣದ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಆದರೆ ಸೈಫ್ ಲುಕ್, ಕಾಸ್ಟ್ಯೂಮ್ಸ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಲಂಕಾದಹನ ಸನ್ನಿವೇಶದಲ್ಲಿ ಹನುಮಂತ ಹೇಳುವ ಟಪೋರಿ ಡೈಲಾಗ್ಸ್ ಕೂಡ ಸರಿಯಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ಬ್ರಾಹ್ಮಣನಾದ ರಾವಣ ಬಾವಲಿಗೆ ಮಾಂಸದ ತುಂಡುಗಳನ್ನು ತಿನ್ನಿಸುವ ಸನ್ನಿವೇಶದ ಬಗ್ಗೆ ಕೂಡ ಕೆಲವರು ಚಕಾರ ಎತ್ತಿದ್ದಾರೆ.

ಸಂಭಾಷಣೆಕಾರ ಮನೋಜ್‌ಗೆ ಜೀವ ಬೆದರಿಕೆ
ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ. ಪ್ರಭಾಸ್, ಓಂ ರಾವುತ್ ಎಲ್ಲರೂ ಮೌನಕ್ಕೆ ಜಾರಿದ್ದಾರೆ. ಆದರೆ ಚಿತ್ರದ ಹಿಂದಿ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಮಾತ್ರ ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವೇನು ತಪ್ಪೇ ಮಾಡಿಲ್ಲ, ನಾವು ಇದು ರಾಮಾಯಣ ಸಿನಿಮಾ ಅಂತ ಹೇಳಲಿಲ್ಲ ಎಂದು ಹೊಸ ವರಸೆ ಶುರು ಮಾಡಿದ್ದಾರೆ. ಇದೇ ಕಾರಣಕ್ಕೆ ಮನೋಜ್‌ಗೆ ಜೀವ ಬೆದರಿಕೆ ಕರೆ ಬಂದಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರ ಬಳಿ ಭದ್ರತೆ ಕೇಳಿದ್ದಾರೆ. ಪೊಲೀಸರು ಕೂಡ ಭದ್ರತೆ ಒದಗಿಸಿದ್ದಾರೆ.
ಡೈಲಾಗ್ಸ್ ಬದಲಾವಣೆಗೆ ಒಪ್ಪಿಗೆ
'ಆದಿಪುರುಷ್' ಸಿನಿಮಾ ಡೈಲಾಗ್ಸ್ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಆದರೆ ಡೈಲಾಗ್‌ಗಳನ್ನು ಸರಿಪಡಿಸಲಾಗುತ್ತದೆ. ನಾನು ತಪ್ಪು ಸಂಭಾಷಣೆ ಏನು ಬರೆದಿಲ್ಲ. ಆದರೂ ಪ್ರೇಕ್ಷಕರಿಗೆ ಅದು ಇಷ್ಟವಾಗುತ್ತಿಲ್ಲ. ನನ್ನ ಆಪ್ತರೇ ಈ ವಿಚಾರದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಹಾಗಾಗಿ ನಾವು ಡೈಲಾಗ್ಸ್ ಬದಲಿಸುತ್ತೇವೆ ಎಂದು ಮನೋಜ್ ಟ್ವೀಟ್ ಮಾಡಿದ್ದರು. ಇನ್ನೊಂದು ವಾರದಲ್ಲಿ ಹೊಸ ಡೈಲಾಗ್ಸ್ ಜೊತೆ ಪ್ರೇಕ್ಷಕರು ಸಿನಿಮಾ ನೋಡಬಹುದು ಎಂದಿದ್ದರು.
ಮನೋಜ್ ಈಗ ಹೇಳಿದ್ದೇನು?
ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ್ದ ಮನೋಜ್ " ನಾನು ಈ ಹಿಂದೆ ಕೂಡ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನಾವು ರಾಮಾಯಣ ಸಿನಿಮಾ ಮಾಡಿಲ್ಲ. ನಾವು ರಾಮಾಯಣದಿಂದ ತುಂಬಾ ಸ್ಫೂರ್ತಿ ಪಡೆದಿದ್ದೇವೆ. ನಾವು ಹಾಕಿರುವ ಡಿಸ್ಕ್ಲೈಮರ್ನಲ್ಲೂ ಅದನ್ನೇ ಹೇಳಿದ್ದೇವೆ. ಮಾರ್ಕೆಟಿಂಗ್ ಸ್ಟ್ರಾಟರ್ಜಿ ಸಮಯದಲ್ಲೂ 'ಆದಿಪುರುಷ್' ರಾಮಾಯಣ ಎನ್ನಲಿಲ್ಲ. ನಾವು ಆರಂಭದಿಂದಲೂ ಹೇಳುತ್ತಿರುವುದು ಒಂದೇ ರಾಮಾಯಣದಿಂದ ಪ್ರೇರಣೆಗೊಂಡಿದ್ದೇವೆ." ಎಂದಿದ್ದರು.
8 ತಿಂಗಳ ಹಿಂದಿನ ಹೇಳಿಕೆ ವೈರಲ್
ಈಗ ನಾವು ರಾಮಾಯಣ ಆಧರಿಸಿ 'ಆದಿಪುರುಷ್' ಸಿನಿಮಾ ಮಾಡಿಲ್ಲ ಎಂದು ಹೇಳುತ್ತಿರುವ ಇದೇ ಮನೋಜ್ ಮುಂತಾಶಿರ್ 8 ತಿಂಗಳ ಹಿಂದೆ ಬೇರೆ ರೀತಿ ಮಾತನಾಡಿದ್ದರು. ನಾವು ರಾಮಾಯಣವನ್ನು ಆಧರಿಸಿಯೇ ಈ ಸಿನಿಮಾ ಮಾಡಿರೋದು ಎಂದು ಹೇಳಿದ್ದರು. ಪಕ್ಕದಲ್ಲಿ ಕುಳಿತಿದ್ದ ನಿರ್ದೇಶಕ ಓಂ ರಾವುತ್ ಹೌದು ಎಂದು ತಲೆ ಆಡಿಸಿದ್ದರು. ಆದರೆ ಈಗ ಊಸರವಳ್ಳಿ ರೀತಿ ಬಣ್ಣ ಬದಲಿಸಿ ಮಾತನಾಡಿರುವುದು ಕೆಲವರ ಕೋಪಕ್ಕೆ ಕಾರಣವಾಗಿದೆ.


Click it and Unblock the Notifications











