ಮುಂದುವರೆದ ಆದಿಪುರುಷ್ ಅಬ್ಬರ; ಕರ್ನಾಟಕದಲ್ಲಿ 2ನೇ ದಿನವೂ ದಾಖಲೆಯ ಕಲೆಕ್ಷನ್!
ಮೊನ್ನೆ ( ಜೂನ್ 16 ) ಶುಕ್ರವಾರ ವಿಶ್ವದಾದ್ಯಂತ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ರಾಮಾಯಣ ಕಥೆ ಆಧಾರಿತ ಚಿತ್ರವೆಂಬ ಕಾರಣಕ್ಕೆ ಆದಿಪುರುಷ್ ಚಿತ್ರ ಸಿನಿ ರಸಿಕರಲ್ಲಿ ಈ ಹಿಂದಿನಿಂದಲೂ ಚರ್ಚೆಯನ್ನು ಹುಟ್ಟುಹಾಕುತ್ತಲೇ ಇತ್ತು.
ಮೊದಲಿಗೆ ಟೀಸರ್ ಮೂಲಕ ಕೆಟ್ಟ ವಿಎಫ್ಎಕ್ಸ್ ಕಾರಣದಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿರೋಧ ಹಾಗೂ ಟೀಕೆಗಳನ್ನು ಪಡೆದುಕೊಂಡು ಟ್ರೋಲ್‌ಗೆ ಒಳಗಾಗಿದ್ದ ಆದಿಪುರುಷ್ ಬಳಿಕ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿನಿ ರಸಿಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಇನ್ನು ಚಿತ್ರ ಬಿಡುಗಡೆಯಾದ ಬಳಿಕ ಈ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದೇ ಹೇಳಬಹುದು. ಹೌದು, ಚಿತ್ರ ಬಿಡುಗಡೆಯಾದ ದಿನದ ಮೊದಲ ಪ್ರದರ್ಶನ ಮುಕ್ತಾಯವಾದ ಕೂಡಲೇ ಚಿತ್ರದ ಕುರಿತು ನೆಗೆಟಿವ್ ವಿಮರ್ಶೆಗಳು ಬರಲಾರಂಭಿಸಿದವು.
ಕೆಲವರು ಚಿತ್ರ ಪರವಾಗಿಲ್ಲ, ಚೆನ್ನಾಗಿದೆ, ಒಮ್ಮೆ ನೋಡಬಹುದು ಎಂದು ಹೇಳಿದರೆ, ಇನ್ನೂ ಕೆಲವರು ಚಿತ್ರ ಕೆಟ್ಟದಾಗಿದೆ, ರಾಮಾಯಣವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಹೀಗೆ ಒಂದೆಡೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ನೂರು ಕೋಟಿ ಗಳಿಕೆ ಮಾಡುವ ಮೂಲಕ ಟ್ರೋಲಿಗರಿಗೆ ಉತ್ತರ ನೀಡಿದೆ.
ಹೌದು, ಚಿತ್ರ ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ಗಳಿಸಿತು. ಚಿತ್ರತಂಡ ಅಧಿಕೃತವಾಗಿ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಈ ಕಲೆಕ್ಷನ್ ವರದಿಯನ್ನು ಹಂಚಿಕೊಂಡಿತು. ಇದೀಗ ಎರಡನೇ ದಿನದ ಕಲೆಕ್ಷನ್ ವರದಿಯನ್ನೂ ಸಹ ಚಿತ್ರತಂಡ ಹಂಚಿಕೊಂಡಿದೆ. ಆದಿಪುರುಷ್ ನಿರ್ಮಾಪಕರು ಚಿತ್ರ ಎರಡನೇ ದಿನದ 100 ಕೋಟಿ ಗಳಿಸಿದ್ದು, ಮೊದಲೆರಡು ದಿನಗಳಲ್ಲಿ 240 ಕೋಟಿ ಗಳಿಸಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದೆ.
ಇದು ವಿಶ್ವದಾದ್ಯಂತ ಚಿತ್ರ ಎರಡು ದಿನಗಳಲ್ಲಿ ಮಾಡಿರುವ ಕಲೆಕ್ಷನ್ ಆಗಿದ್ದು ಕರ್ನಾಟಕದಲ್ಲಿ ಮೊದಲ ದಿನ 8.17 ಕೋಟಿ ಗಳಿಸಿದೆ ಹಾಗೂ ಎರಡನೇ ದಿನ 6.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಎರಡು ದಿನಗಳಲ್ಲಿ 14.32 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಇನ್ನು ಕರ್ನಾಟಕದಲ್ಲಿ ಆದಿಪುರುಷ್ ಪಡೆದುಕೊಂಡಿದ್ದ ಪ್ರದರ್ಶನಗಳು ಹಾಗೂ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಕಂಡು ಈ ವರ್ಷ ರಾಜ್ಯದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆ ಬರೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆದಿಪುರುಷ್ ಈ ದಾಖಲೆ ಮಾಡುವಲ್ಲಿ ವಿಫಲವಾಗಿದ್ದು 12.85 ಕೋಟಿ ಗಳಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ.
2023ರಲ್ಲಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..
1. ಕ್ರಾಂತಿ - 12.85 ಕೋಟಿ ರೂಪಾಯಿ ಗ್ರಾಸ್
2. ಆದಿಪುರುಷ್ - 8.17 ಕೋಟಿ ರೂಪಾಯಿ ಗ್ರಾಸ್
3. ಕಬ್ಜ - 8 ಕೋಟಿ ರೂಪಾಯಿ ಗ್ರಾಸ್
4. ಪಠಾಣ್ - 6.50 ಕೋಟಿ ರೂಪಾಯಿ ಗ್ರಾಸ್
5. ವಾರಿಸು - 5.65 ಕೋಟಿ ರೂಪಾಯಿ ಗ್ರಾಸ್


Click it and Unblock the Notifications











