ಕರ್ನಾಟಕದಲ್ಲಿ ಆದಿಪುರುಷ್ ಅಡ್ವಾನ್ಸ್ ಬುಕಿಂಗ್ ಓಪನ್; ಟಿಕೆಟ್ ದರ ದುಬಾರಿ, ಕನ್ನಡಕ್ಕಿಲ್ಲ ಶೋಸ್!
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಆದಿಪುರುಷ್ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ಶುಕ್ರವಾರ ( ಜೂನ್ 16 ) ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದು, ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದು, ಮೊದಲಿಗೆ ಭಾರೀ ಟೀಕೆಗೆ ಗುರಿಯಾಗಿದ್ದ ಚಿತ್ರ ಇದೀಗ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಸದ್ಯ ಚಿತ್ರದ ಬಿಡುಗಡೆಗೆ ಇನ್ನು ಐದಾರು ದಿನ ಬಾಕಿ ಉಳಿದಿದ್ದು, ಈಗಲೇ ಚಿತ್ರತಂಡ ದೇಶದಾದ್ಯಂತ ಅಡ್ವಾನ್ಸ್ ಬುಕಿಂಗ್ ಅನ್ನು ಆರಂಭಿಸಿದೆ. ಇಂದು ( ಜೂನ್ 11 ) ಚಿತ್ರದ ಮುಂಗಡ ಬುಕಿಂಗ್ ತೆರೆಯಲ್ಪಟ್ಟಿದ್ದು, ಕರ್ನಾಟಕದಲ್ಲಿಯೂ ಸಹ ಬುಕಿಂಗ್ ಶುರುವಾಗಿದೆ.
ಕಾರ್ತಿಕ್ ಗೌಡ ಒಡೆತನದ ಕೆಆರ್‌ಜಿ ಸ್ಟುಡಿಯೊಸ್ ಆದಿಪುರುಷ್ ಚಿತ್ರದ ಕರ್ನಾಟಕ ವಿತರಣಾ ಹಕ್ಕನ್ನು ಖರೀದಿಸಿದ್ದು, ರಾಜ್ಯಾದ್ಯಂತ ಚಿತ್ರವನ್ನು ವಿತರಿಸಲಿದೆ. ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ತುಮಕೂರು ಸೇರಿದಂತೆ ಹಲವು ನಗರಗಳಲ್ಲಿ ಮುಂಗಡ ಬುಕಿಂಗ್ ತೆರೆಯಲಾಗಿದೆ.
ಬೆಂಗಳೂರಿನ ಗೋಲ್ಡ್ ಕ್ಲಾಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರದ ಟಿಕೆಟ್ ದರ 800ರಿಂದ 1250ರೂಪಾಯಿಗಳವರೆಗೆ ಇದ್ದು, ಸಾಮಾನ್ಯ ಕ್ಲಬ್ ಕ್ಲಾಸ್ ಮಲ್ಟಿಪ್ಲೆಕ್ಸ್‌ನಲ್ಲಿ 180ರಿಂದ 266ರೂಗಳವರೆಗೆ ಇದೆ. ಇನ್ನು ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಚಿತ್ರಮಂದಿರದಲ್ಲಿಯೂ ಸಹ ಬುಕಿಂಗ್ ಆರಂಭವಾಗಿದ್ದು, ಈ ಸಿಂಗಲ್ ಸ್ಕ್ರೀನ್‌ನಲ್ಲಿ 195 ರೂಪಾಯಿಗಳಿಗೆ ಟಿಕೆಟ್ ಮಾರಾಟ ನಡೆಯುತ್ತಿದೆ. ಉಳಿದ ಸಿಂಗಲ್ ಸ್ಕ್ರೀನ್‌ಗಳ ಬುಕಿಂಗ್ ಆರಂಭವಾಗಿದೆ. ಸಾಮಾನ್ಯ ಚಿತ್ರಗಳಿಗೆ ಹೋಲಿಸಿದರೆ ಟಿಕೆಟ್ ದರ ತುಸು ಅಧಿಕವಾಗಿದ್ದು, ಆದರೂ ಸಹ ಸಿನಿ ರಸಿಕರು ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿಸಿದ್ದಾರೆ.
ಕೆಲ ಪ್ರದರ್ಶನಗಳು ಅಡ್ವಾನ್ಸ್ ಬುಕಿಂಗ್ ಆರಂಭವಾದ ಕೂಡಲೇ ಫಾಸ್ಟ್ ಫಿಲ್ಲಿಂಗ್ ಆಗುತ್ತಿದ್ದು, ಚಿತ್ರ ದೊಡ್ಡ ಓಪನಿಂಗ್ ಪಡೆದುಕೊಳ್ಳುವುದು ಖಚಿತ. ಅತ್ತ ಮೈಸೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಹ ಚಿತ್ರದ ಮುಂಗಡ ಬುಕಿಂಗ್ ಆರಂಭಗೊಂಡಿದ್ದು ಕ್ಲಬ್ ಕ್ಲಾಸ್ ಟಿಕೆಟ್ ದರ 145 ರಿಂದ 210 ರೂಪಾಯಿಗಳವರೆಗೆ ಇದೆ.
ಇನ್ನು ಕರ್ನಾಟಕದಲ್ಲಿ ಬುಕಿಂಗ್ ಶುರುವಾಗಿರುವ ಎಲ್ಲಾ ಕಡೆಯೂ ಕೇವಲ ಹಿಂದಿ ಹಾಗೂ ತೆಲುಗು ಅವತರಣಿಕೆಗೆ ಮಾತ್ರ ಬುಕಿಂಗ್ ತೆರೆಯಲಾಗಿದ್ದು, ಮಧ್ಯಾಹ್ನ ಎರಡು ಗಂಟೆಯ ಸಮಯಕ್ಕೆ ಕನ್ನಡ ಅವತರಣಿಕೆಗೆ ಒಂದೇ ಒಂದು ಪ್ರದರ್ಶನದ ಬುಕಿಂಗ್ ಅನ್ನೂ ಸಹ ತೆರೆದಿಲ್ಲ. ಈ ಸಮಯಕ್ಕೆ ಬೆಂಗಳೂರಿನಲ್ಲಿಯೇ ತೆಲುಗಿಗೆ ನೂರಕ್ಕೂ ಹೆಚ್ಚು ಪ್ರದರ್ಶನಗಳು ಹಾಗೂ ಹಿಂದಿಗೆ ಇಪ್ಪತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಬುಕಿಂಗ್ ಆರಂಭಿಸಲಾಗಿದೆ.
ಹೀಗೆ ಕರ್ನಾಟಕದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿ ಹಾಗೂ ತೆಲುಗು ಡಬಿಂಗ್‌ಗೆ ಶೋ ನೀಡಿರುವುದು ಸಾಮಾನ್ಯವಾಗಿ ಕನ್ನಡ ಸಿನಿ ರಸಿಕರ ಹಾಗೂ ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಕನ್ನಡಕ್ಕೆ ಹೆಚ್ಚು ಶೋಗಳನ್ನು ನೀಡಿ ಎಂಬ ಬೇಡಿಕೆ ಇಡಲಾಗಿತ್ತು. ಆದರೂ ಸಹ ಸರಿಯಾದ ಶೋಗಳನ್ನು ಕನ್ನಡಕ್ಕೆ ನೀಡದೆಯೇ ಇರುವುದು ಸದ್ಯ ಕನ್ನಡಿಗರಲ್ಲಿ ಬೇಸರ ಮೂಡಿಸಿದೆ. ಮುಂದಿನ ಸಮಯದಲ್ಲಿ ಕನ್ನಡದ ಶೋಗಳ ಬುಕಿಂಗ್ ಸಹ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಎಷ್ಟು ಪ್ರದರ್ಶನಗಳು ಕನ್ನಡಕ್ಕೆ ಸಿಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











