ಬಿಡುಗಡೆಗೂ ಮುನ್ನ ಆದಿಪುರುಷ್ ಹವಾ; ತಿರುಪತಿಯಲ್ಲಿ ದೊಡ್ಡ ಪ್ರಿರಿಲೀಸ್ ಇವೆಂಟ್, 2ನೇ ಟ್ರೈಲರ್

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಆದಿಪುರುಷ್ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ತಿಂಗಳ 16ರಂದು ಬಿಡುಗಡೆಯಾಗಲಿದ್ದು, ಈ ಹಿಂದೆ ಟ್ರೋಲ್ ಆಗಿದ್ದ ಈ ಚಿತ್ರ ಈಗ ಕ್ರೇಜ್ ಹುಟ್ಟುಹಾಕಿದೆ.
ಹೌದು, ಮೊದಲಿಗೆ ತನ್ನ ವಿಎಫ್ಎಕ್ಸ್, ಕಲಾವಿದರ ಲುಕ್‌ನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಆದಿಪುರುಷ್ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಗೊಂಡ ನಂತರ ದೊಡ್ಡ ಮಟ್ಟದ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಅದರಲ್ಲಿಯೂ ಚಿತ್ರದ ಜೈ ಶ್ರೀ ರಾಮ್ ಹಾಗೂ ರಾಮ್ ಸೀಯಾ ರಾಮ್ ಹಾಡುಗಳು ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲೆ ಸಿನಿ ರಸಿಕರಿಗೆ ಇದ್ದ ಅಭಿಪ್ರಾಯವೇ ಬದಲಾಗಿದ್ದು, ಕೆಟ್ಟ ವಿಎಫ್ಎಕ್ಸ್ ಈ ಚಿತ್ರವನ್ನು ನೋಡುವುದು ವೇಸ್ಟ್ ಎಂದಿದ್ದವರೆಲ್ಲಾ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ.
ಹೀಗೆ ಎರಡು ಹಾಡುಗಳ ಮೂಲಕವೇ ಹವಾ ಸೃಷ್ಟಿಸಿರುವ ಆದಿಪುರುಷ್ ಇದೀಗ ಮತ್ತೊಂದು ಟ್ರೈಲರ್ ಹಾಗೂ ಪ್ರಿ ರಿಲೀಸ್ ಕಾರ್ಯಕ್ರಮ ನಡೆಸುವ ಮೂಲಕ ಕ್ರೇಜ್ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದೆ. ಹೌದು, ಇದೇ 6ನೇ ತಾರೀಖಿನಂದು ತಿರುಪತಿ ನಗರದಲ್ಲಿ ಆದಿಪುರುಷ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ಜರುಗಲಿದೆ. ಇದೇ ದಿನ ಚಿತ್ರದ ಎರಡನೇ ಟ್ರೈಲರ್ ಸಹ ಬಿಡುಗಡೆಗೊಳ್ಳಲಿದೆ.
ಈ ಎರಡು ಯೋಜನೆಗಳ ಘೋಷಣೆಯೇ ಸದ್ಯ ಟ್ರೆಂಡಿಂಗ್ ಪಟ್ಟಿ ಸೇರಿದ್ದು, ಇನ್ನು ಕಾರ್ಯಕ್ರಮ ನಡೆದ ಬಳಿಕ ಕ್ರೇಜ್ ದುಪ್ಪಟ್ಟಾಗುವುದು ಪಕ್ಕಾ. ಈ ದಿನ ಬಿಡುಗಡೆಯಾಗಲಿರುವ ಚಿತ್ರದ ಎರಡನೇ ಟ್ರೈಲರ್ 2 ನಿಮಿಷ 27 ಸೆಕೆಂಡ್ ಇರಲಿದೆ.
ದಾಖಲೆ ಬರೆದ ಹಾಡುಗಳು:
ಮೊನ್ನೆಯಷ್ಟೇ ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಆದಿಪುರುಷ್‌ನ ಎರಡನೇ ಹಾಡು ರಾಮ್ ಸಿಯಾ ರಾಮ್ ಬಿಡುಗಡೆಯಾಗಿತ್ತು. ಮೊದಲ ಹಾಡಾದ ಜೈ ಶ್ರೀರಾಮ್ ರೀತಿಯೇ ಈ ಹಾಡೂ ಸಹ ಯುಟ್ಯೂಬ್‌ನಲ್ಲಿ ಧೂಳ್ ಎಬ್ಬಿಸಿದೆ. ಮೇಲೆ ಹೇಳಿದಂತೆ ಹಾಡೊಂದು ಚಿತ್ರವೊಂದಕ್ಕೆ ಯಾವ ರೀತಿಯ ಪ್ರಚಾರ ಮಾಡಬಹುದೋ ಆ ಕೆಲಸಗಳನ್ನು ಈ ಎರಡು ಹಾಡುಗಳು ಮಾಡಿವೆ.
ರಾಮ್ ಸೀಯಾ ರಾಮ್ ಬಿಡುಗಡೆಯಾದ 24 ಗಂಟೆಗಳಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ದೇಶದಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಾಡುಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಇದೇ ಆದಿಪುರುಷ್ ಚಿತ್ರದ ಜೈ ಶ್ರೀರಾಮ್ ಹಾಡು ದೇಶದಲ್ಲಿ ಮೊದಲ 24 ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಾಡು ಎನಿಸಿಕೊಂಡಿದೆ.
ಹಾಗಿದ್ದರೆ ಸದ್ಯ ಯುಟ್ಯೂಬ್‌ನಲ್ಲಿ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಭಾರತದ ಟಾಪ್ 5 ಹಾಡುಗಳು ಯಾವುದು ಎಂಬ ಮಾಹಿತಿ ಈ ಕೆಳಕಂಡ ಪಟ್ಟಿಯಲ್ಲಿದೆ ನೋಡಿ...
1. ಜೈಶ್ರೀರಾಮ್ - 32.1 ಮಿಲಿಯನ್ ವೀಕ್ಷಣೆಗಳು
2. ರಾಮ್ ಸೀಯಾ ರಾಮ್ - 32M ವೀಕ್ಷಣೆಗಳು
3. ಪ್ಯಾರ್ ಹೋತಾ ಕಯಿ ಬಾರ್ ಹೈ - 30.69 ಮಿಲಿಯನ್
4. ಆಲಿಯಾ ರೈ ಐಲಾ - 29.7 ಮಿಲಿಯನ್
5. ಕ್ಯಾರೆಕ್ಟರ್ ಧೀಲಾ 2 - 27.1 ಮಿಲಿಯನ್
ಹೀಗೆ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಆದಿಪುರುಷ್ ಚಿತ್ರವೇ ಆಕ್ರಮಿಸಿಕೊಂಡಿದ್ದು, ಈ ಹಿಂದೆ ತನ್ನ ವಿರುದ್ಧ ಹರಿದಾಡಿದ್ದ ಟ್ರೋಲ್‌ಗಳಿಗೆಲ್ಲಾ ತಕ್ಕ ಉತ್ತರ ನೀಡಿದೆ. ಹೌದು, ಈ ಹಿಂದೆ ಇದೇ ಚಿತ್ರದ ಟೀಸರ್ ಬಿಡುಗಡೆಯಾದಾಗ ವಿಎಫ್ಎಕ್ಸ್ ಸರಿ ಇಲ್ಲ, ಆನಿಮೇಟೆಡ್ ರೀತಿ ಇದೆ ಎಂದು ನಿರ್ದೇಶಕ ಓಂ ರಾವತ್ ಅವರನ್ನು ತೆಗಳಿದ್ದವರು ಇಂದು ಪ್ರಶಂಸಿಸುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು, ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದು, ಟಿ ಸೀರಿಸ್ ಹಾಗೂ ರೆಟ್ರೊ ಫೈಲ್ಸ್ ಬ್ಯಾನರ್‌ಗಳು ಬಂಡವಾಳ ಹೂಡಿವೆ. ಚಿತ್ರ ಇದೇ ಜೂನ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











