'ಉರಿ', 'ಧುರಂಧರ್' ಸರಣಿ ಮೂಲಕ ಸಂಚಲನ ಸೃಷ್ಟಿಸಿರೋ ಆದಿತ್ಯಧರ್ ಯಾರು? ಆತನ ಪತ್ನಿ ನಟಿಸಿದ ಕನ್ನಡ ಚಿತ್ರ ಯಾವ್ದು?
ಎಲ್ಲೆಲ್ಲೂ ಈಗ 'ಧುರಂಧರ್'-2 ಚಿತ್ರದ್ದೇ ಮಾತು. 4 ತಿಂಗಳ ಅಂತರದಲ್ಲಿ ಎರಡು ಭಾಗಗಳಾಗಿ ತೆರೆಕಂಡ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ಎರಡೂ ಸಿನಿಮಾಗಳ ಕಲೆಕ್ಷನ್ 2000 ಕೋಟಿ ರೂ. ದಾಟಿದೆ. ಕೇವಲ 4 ದಿನಗಳಲ್ಲಿ ಸೀಕ್ವೆಲ್ ಹೊಸ ದಾಖಲೆ ನಿರ್ಮಾಣ ಮಾಡಿದೆ. ಚಿತ್ರದ ನಿರ್ದೇಶಕ ಆದಿತ್ಯಧರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ.
6 ವರ್ಷಗಳ ಹಿಂದೆ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಮಾಡಿ ಆದಿತ್ಯಧರ್ ಸಂಚಲನ ಸೃಷ್ಟಿಸಿದ್ದರು. 'ಆರ್ಟಿಕಲ್ 370', 'ಧೂಮ್ ಧಾಮ್', 'ಬರಾಮುಲ್ಲಾ' ಚಿತ್ರಗಳಿಗೆ ಬರಹಗಾರರಾಗಿ ಕೂಡ ಕೆಲಸ ಮಾಡಿದ್ದರು. ನಿರ್ದೇಶಕರಾಗಿ 3 ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. 43 ವರ್ಷದ ಆದಿತ್ಯಧರ್ ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕರ ಪಟ್ಟಿ ಸೇರಿದ್ದಾರೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಕಥೆ ಮುಗಿದೇ ಹೋಯ್ತು ಎನ್ನುವ ಸಮಯದಲ್ಲಿ 'ಧುರಂಧರ್' ಸರಣಿ ಮೂಲಕ ಗೆಲುವಿನ ಟಾನಿಕ್ ಕೊಟ್ಟಿದ್ದಾರೆ. ಮಾರ್ಚ್ 12, 1983ರಲ್ಲಿ ದೆಹಲಿಯ ಕಾಶ್ಮೀರಿ ಪಂಡಿತರ ಮನೆಯಲ್ಲಿ ಜನಿಸಿದ್ದರು. ಸಂಗೀತ ರಂಗಭೂಮಿಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದ ಆದಿತ್ಯಧರ್ ಚಿತ್ರಕಥೆ ಬರೆಯುವ ಪಟ್ಟುಗಳನ್ನು ಕಲಿತರು. ಹಿರಿಯ ಸಹೋದರ ಲೋಕೇಶ್ ಧರ್, ಯುಟಿವಿ ಮೋಷನ್ ಪಿಕ್ಚರ್ಸ್ ಮತ್ತು ನಂತರ ಫಾಕ್ಸ್ ಸ್ಟಾರ್ ಸ್ಟುಡಿಯೋಗಳಲ್ಲಿ ಪ್ರಮುಖ ಸ್ಟುಡಿಯೋ ಕೆಲಸ ಮಾಡುತ್ತಿದ್ದರು. ಬಳಿಕ ಅಣ್ಣ ಲೋಕೇಶ್ ಜೊತೆ ಸೇರಿ ಬಿ62 ಸ್ಟುಡಿಯೋಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು.

2006ರಲ್ಲಿ ಮುಂಬೈ ಸೇರಿದ ಆದಿತ್ಯಧರ್ ಕೆಲ ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದರು. ನಿರ್ದೇಶಕ ಪ್ರಿಯದರ್ಶನ್ ಬಳಿ ಸಹನಿರ್ದೇಶಕರಾಗಿ 'ಆಕ್ರೋಶ್' ಮತ್ತು 'ತೇಝ್' ಚಿತ್ರಗಳಿಗೆ ದುಡಿದರು. ತಮ್ಮ ತಾಳ್ಮೆ ಹಾಗೂ ಸಂಶೋಧನೆ ಮೂಲಕ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿ ಗೆದ್ದಿದ್ದಾರೆ. 'ಉರಿ' ಚಿತ್ರ ಅದಕ್ಕೆ ಬೆಸ್ಟ್ ಎಕ್ಸಾಂಪಲ್. 'ಧುರಂಧರ್' ಸರಣಿ ಮೂಲಕ ಮತ್ತೆ ಅದೇ ಮ್ಯಾಜಿಕ್ ರಿಪೀಟ್ ಮಾಡಿದ್ದಾರೆ.
5 ವರ್ಷಗಳ ಹಿಂದೆ ನಟಿ ಯಾಮಿ ಗೌತಮ್ ಜೊತೆ ಆದಿತ್ಯಧರ್ ಮದುವೆ ನಡೆದಿತ್ತು. ಕನ್ನಡದ 'ಉಲ್ಲಾಸ ಉತ್ಸಾಹ' ಸಿನಿಮಾ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದರು. 'ಉರಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಯಾಮಿ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಶುರುವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ಸಿನಿಮಾ ಪ್ರಚಾರದ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. Humans of Bombay Show ಪಾಡ್‌ಕಾಸ್ಟ್‌ನಲ್ಲಿ ಯಾಮಿ ಗೌತಮ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು.

ಯಾಮಿ ಗೌತಮ್ ಮಾತನಾಡಿ "ಉರಿ ಸಿನಿಮಾ ಪ್ರಚಾರದ ಸಮಯದಲ್ಲಿ ನಾವು ಮಾತನಾಡಲು ಪ್ರಾರಂಭಿಸಿದಾಗ, ನಾವು ಸ್ನೇಹಿತರಾದೆವು. ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಎಲ್ಲಾ ಮಾಡಲಿಲ್ಲ. ನಾವು ಬಹುಶಃ ಯೋಚಿಸುವ ಎಲ್ಲಾ ವಿಷಯಗಳು.. ಅದು ಅತ್ಯುತ್ತಮ ವಿಷಯವಾಗಿತ್ತು ಏಕೆಂದರೆ ನಾನು ಕೂಡ ಆ ರೀತಿಯ ವ್ಯಕ್ತಿಯಲ್ಲ. ನಾವು ನಿಜವಾಗಿಯೂ ಮದುವೆಯಾಗಲು ಬಯಸುತ್ತೇವೆ ಎಂದು ನಮಗೆ ತಿಳಿದಿತ್ತು. ನಮ್ಮ ಕುಟುಂಬಗಳ ನಡುವೆ ತುಂಬಾ ಹೊಂದಾಣಿಕೆ ಇತ್ತು. ಆದಿತ್ಯ ಅತ್ಯಂತ ಗೌರವಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಅವರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದನ್ನು ನಾನು ಎಂದಿಗೂ ನೋಡಿಲ್ಲ" ಎಂದಿದ್ದರು.
2010ರಲ್ಲಿ ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರ ಕನ್ನಡಕ್ಕೆ ರೀಮೆಕ್ ಆಗಿತ್ತು. ಗಣೇಶ್ ಹೀರೊ ಆಗಿ ನಟಿಸಿದ್ದರು. ಅದೇ ಯಾಮಿ ಗೌತಮ್ ನಟಿಸಿದ ಮೊದಲ ಸಿನಿಮಾ. ಚಂಡಿಘರ್‌ನಲ್ಲಿ ಹುಟ್ಟಿ ಬೆಳೆದ ಆಕೆ ಸಿನಿಮಾಗಳಲ್ಲಿ ನಟಿಸಬೇಕು ಎಂದು ಮುಂಬೈ ಸೇರಿದ್ದರು. ಮುಂದೆ ಕೆಲ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದ್ದರು. 'ಉಲ್ಲಾಸ ಉತ್ಸಾಹ' ನಂತರ ಪಂಜಾಬಿ, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.
'ದಿ ಇಮ್ಮಾರ್ಟಲ್ ಅಶ್ವಥಾಮ' ಎಂಬ ಸಿನಿಮಾವನ್ನು ಆದಿತ್ಯಧರ್ ಹಿಂದೆ ಘೋಷಿಸಿದ್ದರು. ಬಜೆಟ್ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಆ ಸಿನಿಮಾ ನಿಂತು ಹೋಗಿತ್ತು. ಬಳಿಕ 'ಧುರಂಧರ್' ಸರಣಿ ಕೈಗೆತ್ತಿಕೊಂಡಿದ್ದರು. 3 ಗಂಟೆಗೂ ಹೆಚ್ಚು ಕಾಲಾವಧಿಯ ಕಥೆಯನ್ನು ಹೇಳಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಕ್ಸಸ್ ಕಂಡಿದ್ದಾರೆ. ಆದಿತ್ಯ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











