'ಓಂ' ಸಿನಿಮಾದ ಫಸ್ಟ್ ಲುಕ್ ರಿಲೀಸ್; ಬಂದೂಕು ಹಿಡಿದು ಬಂದ ಆದಿತ್ಯ ರಾಯ್ ಕಪೂರ್
'ಓಂ' ಸಿನಿಮಾ ಎಂದಾಕ್ಷಣ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಕಣ್ಣ ಮುಂದೆ ಬರುತ್ತಾರೆ. ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದ ಸಿನಿಮಾ ಓಂ. ಚಿತ್ರದಲ್ಲಿ ಶಿವಣ್ಣನ ಅರ್ಭಟಕ್ಕೆ ಇಡೀ ಕನ್ನಡ ಸಿನಿಮಾರಂಗ ದಂಗಾಗಿತ್ತು. ಇದೀಗ ಓಂ ಸಿನಿಮಾ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಹಾಗಂತ ಇದು ಸ್ಯಾಂಡಲ್ ವುಡ್ ಓಂ ಸಿನಿಮಾವಲ್ಲ.
ಹಿಂದಿಯಲ್ಲಿ ಓಂ ಎನ್ನುವ ಹೊಸ ಸಿನಿಮಾ ಸೆಟ್ಟೇರಿದ್ದು, ಆದಿತ್ಯ ರಾಯ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿದ್ದೆ ಗೆಡಿಸಿದೆ. ಪೋಸ್ಟರ್ ನಲ್ಲಿ ಆದಿತ್ಯ ಬಂದೂಕು ಹಿಡಿದು ರಗಡ್ ಅ್ಯಂಡ್ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ಸುಶಾಂತ್ ಸಿಂಗ್ ಸಿನಿಮಾದ ನಾಯಕಿ ಸಂಜನಾ ಸಂಘಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಲ್ ಬೆಚಾರ ಸಿನಿಮಾ ಮೂಲಕ ಅಭಿಮಾನಿಗಳ ಗಮನಸೆಳೆದಿದ್ದ ಸಂಜನಾ ಇದೀಗ ಓಂ ಸಿನಿಮಾ ಮೂಲಕ ಎರಡನೇ ಬಾರಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಓಂ ಅಹ್ಮದ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಚಿತ್ರದ ಮೇಲೆ ನಿರೀಕ್ಷೆ ಸಾಕಷ್ಟಿದೆ. ಆಕ್ಷನ್ ಮತ್ತು ಲವ್ ಎರಡೂ ಅಂಶವಿರುವ ಓಂನಲ್ಲಿ ಸಂಜನಾ ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಓಂ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಸಾಕಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಬಾಲಿವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಓಂ ಮುಂದಿನ ವರ್ಷ ಸಮ್ಮರ್ ಗೆ ರಿಲೀಸ್ ಆಗುತ್ತಿದೆ.


Click it and Unblock the Notifications











