ದೀಪಾವಳಿ ಧಮಾಕ ; '2574' ದಿನಗಳ ಹಿಂದಿನ ದಾಖಲೆ ಧೂಳಿಪಟ...!
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಬಾಲಿವುಡ್ ಕೆಲ ವರ್ಷಗಳಿಂದ ಕಳೆಗುಂದಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಮುಂದೆ ಮಂಡಿಯೂರಿತ್ತು. ಆದರೆ.. ಕಳೆದ ವರ್ಷ ಬಾಲಿವುಡ್ ಮೈಕೊಡವಿ ಎದ್ದು ನಿಂತಿತ್ತು. ಹತ್ ಹತ್ರ ₹13,000 ಕೋಟಿ ಹಿಂದಿ ಚಿತ್ರರಂಗದ ಖಜಾನೆ ಸೇರಿತ್ತು. ಈ ಮೂಲಕ ಹೊಸದೊಂದು ಮೈಲಿಗಲ್ಲನ್ನು ಬಾಲಿವುಡ್ ತಲುಪಿತ್ತು.
ಆದರೆ ಈ ವರ್ಷ ಕಳೆದ ವರ್ಷದಂತೆ ಬಾಲಿವುಡ್‌ನಲ್ಲಿ ಹಣದ ಹೊಳೆ ಹರಿಯುತ್ತಿಲ್ಲ. ಹಾಗಂಥ ನಿರಾಸೆಯಾಗುವಂತೆ ಕೂಡ ಇಲ್ಲ. ಯಾಕೆಂದರೆ.. ಅಲ್ಲೊಂದು.. ಇಲ್ಲೊಂದು.. ಸಿನಿಮಾಗಳು ಬಾಲಿವುಡ್‌ಗೆ ಚೈತನ್ಯವನ್ನು ತುಂಬುತ್ತಿವೆ. ನಿರೀಕ್ಷೆಯನ್ನು ಮೀರಿ ಹಣ ಗಳಿಸುತ್ತಿವೆ. ಈ ಕಾರಣಕ್ಕೆ ಚೂರು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಹಿಂದಿ ಚಿತ್ರರಂಗ, ದೀಪಾವಳಿಯಂದು ಲಕ್ಷ್ಮಿ ಕೃಪೆಗೆ ಪಾತ್ರವಾಗಿದೆ. 2574ದಿನದ ನಂತರ ಬಾಲಿವುಡ್‌ನಲ್ಲಿ ಹೊಚ್ಚ ಹೊಸ ಇತಿಹಾಸ ನಿರ್ಮಾಣವಾಗಿದೆ.

ಹೌದು, ಈ ದೀಪಾವಳಿ ಹಬ್ಬದ ಪ್ರಯುಕ್ತ ಬಾಲಿವುಡ್‌ನಲ್ಲಿ ಈ ಬಾರಿ ಎರಡು ದೊಡ್ಡ ಚಿತ್ರಗಳು ತೆರೆಗೆ ಬಂದಿವೆ. ಆ ಪೈಕಿ ಅಜಯ್ ದೇವಗನ್ ಅಭಿನಯದ ಸಿಂಗಂ ಅಗೇನ್ ಒಂದಾದರೆ, ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭುಲಯ್ಯ 3 ಮತ್ತೊಂದು. ಇನ್ನೂ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ. ಸಿಂಗಂ ಅಗೇನ್ ಮತ್ತು ಭೂಲ್ ಭುಲಯ್ಯ 3 ಒಟ್ಟಿಗೆ ಬಿಡುಗಡೆಯಾಗುವ ಸಮಯದಲ್ಲಿ ಬಾಲಿವುಡ್‌ನಲ್ಲಿ ಅನೇಕರಿಗೆ ಈ ಚಿಂತೆ ಕಾಡಿದ್ದು ಸುಳ್ಳಲ್ಲ. ಎರಡರಲ್ಲಿ ಒಂದು ಚಿತ್ರ ಸೋಲುತ್ತೆ ಎಂಬ ಭವಿಷ್ಯವಾಣಿ ಕೇಳಿ ಬಂದಿದ್ದು ಕೂಡ ಸುಳ್ಳಲ್ಲ.
ಆದರೆ. ಎಲ್ಲ ಲೆಕ್ಕಾಚಾರವನ್ನು ಈ ಎರಡು ಸಿನಿಮಾಗಳು ತಲೆಕೆಳಗಾಗಿಸಿವೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೇಟೆಯನ್ನಾಡುತ್ತಿವೆ. ಬಾಕ್ಸಾಫೀಸ್‌ನಲ್ಲಿ ನೂರಲ್ಲ ಬದಲಿಗೆ ಎರಡು ಸಿನಿಮಾಗಳು ಇನ್ನೂರು ಕೋಟಿಯನ್ನು ಕೊಳ್ಳೆ ಹೊಡೆದಿವೆ. ಈ ಮೂಲಕ 2574 ದಿನಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಕೂಡ ಈ ಎರಡು ಚಿತ್ರಗಳು ಸೇರಿ ಮುರಿದಿವೆ. ಹೌದು, ನಿಮಗೆ ಗೊತ್ತಿರಲಿ.. 2017ರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇದೇ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಕಾಂಬಿನೇಷನ್‌ನಲ್ಲಿ ಗೋಲ್‌ಮಾಲ್ ಅಗೇನ್ ಚಿತ್ರ ತೆರೆಗೆ ಬಂದಿತ್ತು. ಅವತ್ತು ಈ ಚಿತ್ರದ ಎದುರು ಅಮೀರ್ ಖಾನ್ ಸಿಕ್ರೇಟ್ ಸೂಪರ್ ಸ್ಟಾರ್‌ನನ್ನು ಕಣಕ್ಕಿಳಿಸಿದ್ದರು.
ಗೋಲ್‌ಮಾಲ್ ಅಗೇನ್ ಮತ್ತು ಸಿಕ್ರೇಟ್ ಸೂಪರ್ ಸ್ಟಾರ್ ಎರಡು ದೊಡ್ಡ ಚಿತ್ರಗಳಾದ ಹಿನ್ನೆಲೆ ಈ ಸಮರ ಕೂತುಹಲ ಕೆರಳಿಸಿತ್ತು. ಅದ್ರಂತೆ ಗೋಲ್ ಮಾಲ್ ಅಗೇನ್ ಬಾಕ್ಸಾಫೀಸ್‌ನಲ್ಲಿ ₹205.72 ಕೋಟಿಯನ್ನು ಗಳಿಸಿದ್ದರೆ ಅಮೀರ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿಕ್ರೇಟ್ ಸೂಪರ್ ಸ್ಟಾರ್ ₹62 ಕೋಟಿಗೆ ತನ್ನ ಆಟವನ್ನು ಮುಗಿಸಿತ್ತು.ಇವೆರಡು ಚಿತ್ರಗಳಿಂದ {ಗೋಲ್‌ಮಾಲ್ ಅಗೇನ್ ₹275.72 + ಸಿಕ್ರೇಟ್ ಸೂಪರ್ ಸ್ಟಾರ್ ₹62 =₹267.72 ಕೋಟಿ }ಬಾಲಿವುಡ್ ಖಾತೆಗೆ ₹267.72 ಕೋಟಿ ಜಮೆಯಾಗಿತ್ತು. ಈ ಮೂಲಕ ದಾಖಲೆ ನಿರ್ಮಾಣವಾಗಿತ್ತು.
ಇದಕ್ಕೂ ಮುನ್ನ 2012ರಲ್ಲಿ ಅಜಯ್ ದೇವಗನ್ ಅಭಿನಯದ ಸನ್ ಆಫ್ ಸರ್ದಾರ್ ಮತ್ತು ಶಾರುಖ್ ಖಾನ್ ಅಭಿನಯದ ಜಬ್ ಥಕ್ ಹೈ ಜಾನ್ ಚಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದಾಗ ಇದೇ ತರಹದ ದಾಖಲೆ ನಿರ್ಮಾಣವಾಗಿತ್ತು.ಆಗ ಸನ್ ಆಫ್ ಸರ್ದಾರ್ ₹105.13 ಕೋಟಿಯನ್ನು ಗಳಿಸಿದ್ದರೆ, ಜಬ್ ಥಕ್ ಹೈ ಜಾನ್ ₹120.65 ಕೋಟಿಯನ್ನು ಗಳಿಸಿತ್ತು.ಎರಡು ಚಿತ್ರಗಳ ಒಟ್ಟು ಗಳಿಕೆ ₹225,78 ಕೋಟಿ ಗಡಿ ತಲುಪಿತ್ತು. {ಸನ್ ಆಫ್ ಸರ್ದಾರ್ ₹105,13 + ಜಬ್ ಥಕ್ ಹೈ ಜಾನ್ ₹120,65=₹225,78 ಕೋಟಿ }
ಇನ್ನೂ ಅಜಯ್ ದೇವಗನ್ ನಿರ್ದೇಶಿಸಿ ಅಭಿನಯಿಸಿದ ಶಿವಾಯ್ ಮತ್ತು ರಣ್ಭೀರ್ ಕಪೂರ್, ಐಶ್ವರ್ಯ ರೈ ಅಭಿನಯದ ಏ ದಿಲ್ ಹೈ ಮುಷ್ಕೀಲ್ ಚಿತ್ರ ತೆರೆಗೆ ಬಂದಾಗ ಕೂಡ ಇದೇ ತರಹದ ವಾತಾವರಣ ಇತ್ತು. ಎರಡು ಚಿತ್ರಗಳಿಂದ{ಶಿವಾಯ್ ₹100,35 + ಏ ದಿಲ್ ಹೈ ಮುಷ್ಕೀಲ್ ₹112,50=₹212,85 ಕೋಟಿ } ₹212,85 ಕೋಟಿ ಬಾಕ್ಸಾಫೀಸ್‌ನಲ್ಲಿ ಲೂಟಿಯಾಗಿತ್ತು.
ಈ ಎಲ್ಲ ದಾಖಲೆಗಳನ್ನು ಅಜಯ್ ದೇವಗನ್ ಮತ್ತು ಕಾರ್ತಿಕ್ ಆರ್ಯನ್ ಜೋಡಿ ಮುರಿದಿದೆ. ಕೇವಲ ಒಂದು ವಾರದಲ್ಲಿ ಎರಡು ಚಿತ್ರಗಳು ಸೇರಿ ₹400 + ಕೋಟಿಯನ್ನು ಗಳಿಸಿವೆ. ಆ ಪೈಕಿ ಸಿಂಗಂ ಅಗೇನ್ ಚಿತ್ರದ ಪಾಲು {ನಿನ್ನೆಯವರೆಗೆ } ₹232.25 ಕೋಟಿ ಇದ್ದರೆ, ಭೂಲ್ ಭೂಲಯ್ಯ 03 ಪಾಲು {ನಿನ್ನೆಯವರೆಗೆ } ₹208 ಕೋಟಿ ಇದೆ.ಎರಡು ಚಿತ್ರಗಳ ಒಟ್ಟು ಮೊತ್ತ ಸೇರಿಸಿದರೆ {ಸಿಂಗಂ ಅಗೇನ್ ₹232.25 + ಭೂಲ್ ಭುಲಯ್ಯ 03 ₹208 =₹440.25 ಕೋಟಿ } ಗಳಿಕೆ ₹440.25 ಕೋಟಿಯಾಗಿದೆ. 2017ರಿಂದ ಗೋಲ್ ಮಾಲ್ ಅಗೇನ್ ಮತ್ತು ಸಿಕ್ರೇಟ್ ಸೂಪರ್ ಸ್ಟಾರ್ ಹೆಸರಿನಲ್ಲಿದ್ದ ದಾಖಲೆ ಈ ಮೂಲಕ ಉಡೀಸ್ ಆಗಿದೆ. 2574 ದಿನಗಳ ನಂತರ ಹೊಚ್ಚ ಹೊಸ ದಾಖಲೆ ಈ ಮೂಲಕ ನಿರ್ಮಾಣವಾಗಿದೆ.


Click it and Unblock the Notifications











