ಹೃದಯಾಘಾತವಾದ 36 ದಿನಗಳ ಬಳಿಕ ವರ್ಕ್‌ಔಟ್: ರಿಸ್ಕ್ ತೆಗದುಕೊಂಡ್ರಾ ಮಾಜಿ ಭುವನ ಸುಂದರಿ
ಬಾಲಿವುಡ್ ನಟಿ ಸುಶ್ಮಿತಾ ಸೇನ್ ಕೆಲವು ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದರು. ಒಂದು ವಾರದ ಬಳಿಕ ಸುಶ್ಮಿತಾ ಸೇನ್ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಶ್ಮಿತಾಗೆ ಹೃದಯಾಘಾತವಾಗಿತ್ತು ಅನ್ನೋ ಸುದ್ದಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಶಾಕ್ ಆಗಿತ್ತು.
ಹೃದಯಾಘಾತವಾದ ಸಂದರ್ಭದಲ್ಲಿ ಅವರ ಹೃದಯದಲ್ಲಿ ಶೇ.95ರಷ್ಟು ಬ್ಲಾಕೇಜ್ ಇತ್ತು ಎಂದು ಸ್ವತ: ಸುಶ್ಮಿತಾ ಸೇನ್ ಅವರೇ ಹೇಳಿಕೊಂಡಿದ್ದಾರೆ. ಈಗ ಸುಶ್ಮಿತಾ ಸೇನ್ ಎಂದಿನಂತೆ ವರ್ಕ್‌ಔಟ್ ಶುರು ಮಾಡಿದ್ದಾರೆ. ಸಹಜವಾಗಿ ಹೃದಯಘಾತವಾದ ಕೆಲವು ದಿನಗಳ ಬಳಿಕ ವರ್ಕ್‌ಔಟ್ ಮಾಡಲು ವೈದ್ಯರು ಸಲಹೆ ನೀಡುವುದಿಲ್ಲ. ಆದ್ರೀಗ ಸುಶ್ಮಿತಾ ಸೇನ್ ವರ್ಕ್‌ಔಟ್‌ಗೆ ಮುಂದಾಗಿದ್ದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಸುಶ್ಮಿತಾ ಸೇನ್ ವರ್ಕ್‌ಔಟ್ ಶುರು ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನೊಂದು ಕಡೆ 'ಆರ್ಯ 3' ವೆಬ್ ಸೀರಿಸ್‌ನ ಸಹನಟ ವಿಕಾಸ್ ಕುಮಾರ್ ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಜೈಪುರದಲ್ಲಿ ಸುಶ್ಮಿತಾಗೆ ಹೃದಯಾಘಾತವಾಗಿತ್ತು
'ಆರ್ಯ 3' ಸೀರಿಸ್‌ನ ಸಹನಟ ವಿಕಾಸ್ ಕುಮಾರ್ ನೀಡಿದ ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಹೃದಯಾಘಾತವಾದ ಸಂದರ್ಭ ಹೇಗಿತ್ತು ಎಂದು ವಿವರಿಸಿದ್ದಾರೆ. ಸುಶ್ಮಿತಾ ಸೇನ್ ಶೂಟಿಂಗ್‌ಗಾಗಿ ಜೈಪುರಕ್ಕೆ ಬಂದು ಇಳಿಯುತ್ತಿದ್ದಂತೆ ಹೃದಯಾಘಾತವಾಗಿತ್ತು. ಆ ಬಳಿಕ ಶೂಟಿಂಗ್ ಅನ್ನು ನಿಲ್ಲಿಸಿದ್ದೆವು ಎಂದು ವಿಕಾಸ್ ಕುಮಾರ್ ಹೇಳಿದ್ದಾರೆ.
"ಆರ್ಯ ಸೀಸನ್ 3 ರ ಪ್ರಮುಖ ಭಾಗದ ಚಿತ್ರೀಕರಣ ನಡೆಯುತ್ತಿತ್ತು. ರಾಜಸ್ಥಾನದಲ್ಲಿಯೇ ಕಥೆ ನಡೆಯುವುದರಿಂದ ಜೈಪುರದಲ್ಲಿ ಶೂಟಿಂಗ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಜೈಪುರದ ಹೊರವಲುದಲ್ಲಿ ಶೂಟಿಂಗ್ ಮಾಡುವುದಕ್ಕೆ ಮುಂದಾಗಿದ್ದೆವು. ಆದರೆ, ಜೈಪುರಕ್ಕೆ ಬಂದು ಇಳಿಯುತ್ತಿದ್ದಂತೆ ಸುಶ್ಮಿತಾ ಸೇನ್‌ಗೆ ಹೃದಯಾಘಾತವಾಗಿತ್ತು. ಆರಂಭದಲ್ಲಿ ನಮಗೆ ಇದು ಗೊತ್ತಾಗಲೇ ಇಲ್ಲ. ಕೆಲವು ದಿನಗಳ ಬಳಿಕ ಅವರೇ ಹೇಳಿದ ಬಳಿಕ ಗೊತ್ತಾಯ್ತು" ಎಂದಿದ್ದಾರೆ.
36 ದಿನಗಳಲ್ಲಿ ಸುಶ್ಮಿತಾ ಸೇನ್ ವರ್ಕ್ಔಟ್
ಸುಶ್ಮಿತಾ ಸೇನ್‌ಗೆ ಹೃದಯಾಘಾತವಾದ ಸುದ್ದಿ ಕೇಳಿ ಇಡೀ ದೇಶವೇ ಶಾಕ್ ಆಗಿತ್ತು. ಹಾರ್ಟ್ ಅಟ್ಯಾಕ್ ಆದ 36 ದಿನಗಳ ಬಳಿಕ ಸುಶ್ಮಿತಾ ಸೇನ್ ಸಹಜ ಜೀವನಕ್ಕೆ ಮರಳಿದ್ದು, ವರ್ಕ್‌ಔಟ್ ಆರಂಭಿಸಿದ್ದಾರೆ. ಸುಶ್ಮಿತಾ ಸೇನ್ ತರಬೇತಿ ಪಡೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದು, "ಸಂಕಲ್ಪವೊಂದೇ ದಾರಿ.. 36 ದಿನಗಳ ಬಳಿಕ ವರ್ಕ್‌ಔಟ್‌ಗೆ ಅವಕಾಶ ಸಿಕ್ಕಿದೆ" ಎಂದು ಬರೆದುಕೊಂಡಿದ್ದಾರೆ.
ಸುಶ್ಮಿತಾ ಸೇನ್ ಶೀಘ್ರದಲ್ಲಿಯೇ 'ಆರ್ಯ 3' ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿರುವುದಾಗಿ ಹೇಳಿದ್ದಾರೆ. ಅದಕ್ಕಾಗಿಯೇ ಬಾಲಿವುಡ್ ನಟಿ ವರ್ಕ್‌ಔಟ್ ಆರಂಭ ಮಾಡಿದ್ದಾರೆ. ಆದರೆ, ಸುಶ್ಮಿತಾ ಸೇನ್ ಇಷ್ಟು ಬೇಗ ವರ್ಕ್‌ಔಟ್ ಆರಂಭ ಮಾಡಿರೋದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಹೃದಯಾಘಾತದ ಬಳಿಕ ವರ್ಕ್‌ಔಟ್ ಮಾಡಬಹುದೇ?
ಹೃದಯಘಾತದ ಬಳಿಕ ವೈದ್ಯರು ವರ್ಕ್‌ಔಟ್ ಮಾಡುವುದಕ್ಕೆ ಸಲಹೆ ನೀಡುವುದಿಲ್ಲ. ಹೃದಯ ಹೇಗೆ ಕೆಲಸ ಮಾಡುತ್ತಿದೆ ಅನ್ನೋದನ್ನು ತಿಳಿದು ಆ ಬಳಿಕ ಕೆಲವು ವರ್ಕ್‌ಔಟ್ ಬಗ್ಗೆ ಸಲಹೆ ನೀಡುತ್ತಾರೆ. ವೈದ್ಯರ ಪ್ರಕಾರ, ಆಂಜಿಯೋಪ್ಲ್ಯಾಸ್ಟಿ ಮಾಡಿದ ಬಳಿಕ ಅವರ ಹೃದಯದ ಕಂಡಿಷನ್ ಅನ್ನು ನೋಡಿಕೊಂಡು ವೈದ್ಯರು ವರ್ಕ್‌ಔಟ್ ಬಗ್ಗೆ ಸಲಹೆ ನೀಡುತ್ತಾರೆ.
ಹೃದಯದ ಬಡಿತ ಸಹಜವಾಗಿದ್ದರೆ, ವೈದ್ಯರು ಭಾರ ಎತ್ತುವುದನ್ನು ಬಿಟ್ಟು ಸ್ಟ್ರೆಚ್ ಮಾಡುವಂತಹ ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತಾರೆ. ಮತ್ತೊಂದು ಸಂದರ್ಭದಲ್ಲಿ ಎರಡು ಕೆಜಿಗೂ ಅಧಿಕ ತೂಕದ ವಸ್ತುವನ್ನು ಎತ್ತಲು ವೈದ್ಯರು ಬಿಡುವುದಿಲ್ಲ. ಅಲ್ಲದೆ ವೈದ್ಯರ ಸಲಹೆ ಪಡೆಯದೇ ವರ್ಕ್‌ಔಟ್ ಮಾಡಲು ಅವಕಾಶವಿರುವುದಿಲ್ಲ. ಈಗ ಸುಶ್ಮಿತಾ ಸೇನ್ ವೈದ್ಯರ ಸಲಹೆಯಂತೆಯೇ ವರ್ಕ್‌ಔಟ್‌ಗೆ ಮರಳಿದ್ದು, ಬೇರೆ ರೋಗಿಗಳಿಗೆ ಸ್ಪೂರ್ತಿಯಾಗಿದ್ದಾರೆ.


Click it and Unblock the Notifications











