49ನೇ ವಯಸ್ಸಿನಲ್ಲಿ ಮದ್ವೆಯಾಗಲು ರೆಡಿಯಾದ ಸೌರವ್ ಗಂಗೂಲಿ ಮಾಜಿ ಪ್ರೇಯಸಿ ನಗ್ಮಾ...?
ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ವ್ಯಕ್ತಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಕೈಗೊಬ್ಬರು ಕಾಲಿಗೊಬ್ಬರು ಸೇವಕರು ಇದ್ದರು ಸಂತೈಸಲು ಸಂಗಾತಿ ಇಲ್ಲವೆಂಬ ಕೊರಗು ಕಾಡುತ್ತಿರುತ್ತೆ. ಎಷ್ಟೇ ಪ್ರಯತ್ನ ಮಾಡಿದರೂ ಪ್ರೀತಿಯಲ್ಲಿ ಇವರು ಗೆಲ್ಲುವುದಿಲ್ಲ. ಪ್ರೀತಿ ದಕ್ಕುವುದಿಲ್ಲ. ಇದಕ್ಕೆ ನಗ್ಮಾ ಸದ್ಯದ ತಾಜಾ ಉದಾಹರಣೆ.
ಹೌದು, ನಗ್ಮಾ.. ಒಂದ್ಕಾಲದ ಅಪ್ರತಿಮ ಸುಂದರಿ. ಸಲ್ಮಾನ್ ಖಾನ್ ಅಭಿನಯದ ಭಾಘಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಚೆಲುವೆ. ಮೊದಲ ಚಿತ್ರದಲ್ಲಿಯೇ ಗೆಲುವಿನ ಧ್ವಜ ಹಾರಿಸಿದ ನಗ್ಮಾ ಆ ನಂತರ ತನ್ನ ಆಪ್ತ ಸ್ನೇಹಿತೆ ದಿವ್ಯಾ ಭಾರತಿ ಒತ್ತಾಯಕ್ಕೆ ದಕ್ಷಿಣದತ್ತ ಮುಖ ಮಾಡಿದರು. ಘರಾನಾ ಮೊಗಡು ಮೂಲಕ ಆಂಧ್ರದ ಮನೆ ಮಗಳಾದರು. ಬಾಷಾ ಚಿತ್ರದ ಮೂಲಕ ತಮಿಳುನಾಡಿನ ಹೃದಯವನ್ನು ಗೆದ್ದರು. ತೆಲುಗು ಮತ್ತು ತಮಿಳಿನಲ್ಲಿ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಲೇ ಕನ್ನಡ ಚಿತ್ರರಂಗಕ್ಕೂ ಕೂಡ ಬಂದರು. ಕುರುಬನ ರಾಣಿ, ರವಿಮಾಮಾ, ಹೃದಯವಂತ, ಚಿತ್ರಗಳಲ್ಲಿ ಕಾಣಿಸಿಕೊಂಡರು.

ಆ ನಂತರ ಮತ್ತೆ ಮರಳಿ ಗೂಡು ಸೇರಿದ ನಗ್ಮಾ ಹಿಂದಿ ಜೊತೆ ಜೊತೆಯಲ್ಲಿ ಭೋಜ್‌ಪುರಿ ಮತ್ತು ಮರಾಠಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡರು. ಹೀಗೆ ನಗ್ಮಾ ತಮ್ಮ ವೃತ್ತಿ ಬದುಕಿನಲ್ಲಿ ಅತ್ಯಂತ ಯಶಸ್ವಿ ನಾಯಕಿಯಾಗಿ ಹೊರ ಹೊಮ್ಮಿದರು. ಆದರೆ ವ್ಯೆಯಕ್ತಿಕ ಬದುಕಿನಲ್ಲಿ ಇದೇ ಸಮಯದಲ್ಲಿ ಅನೇಕ ರಾದ್ಧಾಂತಗಳನ್ನು ಮಾಡಿಕೊಂಡರು. ಪ್ರೀತಿ-ಪ್ರೇಮ ಎಂದು ತಲೆ ಕೆಡಿಸಿಕೊಂಡರು. ಬಯಸಿದ ಪ್ರೀತಿ ಸಿಗದಿದ್ದಾಗ ಕಣ್ಣೀರಾದರು. ನಗ್ಮಾ ತಮ್ಮ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿದ್ದಾಗಲೇ ಸೌರವ್ ಗಂಗೂಲಿ ಜೊತೆ ಹೆಸರು ಥಳುಕು ಹಾಕಿಕೊಂಡಿತ್ತು. ಇನ್ನೇನು ಸೌರವ್ ಗಂಗೂಲಿ ತಮ್ಮ ಪತ್ನಿಗೆ ವಿಚ್ಛೇದನವನ್ನು ನೀಡಿ ನಗ್ಮಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಮಾತೆಲ್ಲ ಆಗ ಕೇಳಿ ಬಂದಿತ್ತು. ಆದರೆ, ಆ ನಂತರ ಅದೇನಾಯ್ತೋ ನಗ್ಮಾ ಅವರಿಂದ ಸೌರವ್ ಗಂಗೂಲಿ ದೂರ ಸರಿದರು.
ಸೌರವ್ ಗಂಗೂಲಿ ಅವರಿಂದ ದೂರವಾದ ನಂತರ ಶರತ್ ಕುಮಾರ್ ಅವರ ಜೊತೆ ನಗ್ಮಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಪುಕಾರು ಹಬ್ಬಿತ್ತು. ಇದಕ್ಕೆ ಪೂರಕವಾಗಿ ಶರತ್ ಕುಮಾರ್ ಮತ್ತು ಛಾಯಾ ದಾಂಪತ್ಯ ಮುರಿದು ಬಿತ್ತು. ನಗ್ಮಾ ಜೊತೆ ಶರತ್ ಕುಮಾರ್ ಹೆಸರು ಕೇಳಿ ಬಂದ ಬೆನ್ನಲ್ಲಿಯೇ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ ಛಾಯಾ 2000ನೇ ಇಸ್ವಿಯಲ್ಲಿ ಶರತ್ ಕುಮಾರ್ ಅವರಿಂದ ದೂರವಾದರು. ಆ ಕಾಲಕ್ಕೆ ಶರತ್ ಕುಮಾರ್ ಮತ್ತು ಛಾಯಾ ದಾಂಪತ್ಯದ ಸುತ್ತ ಮುತ್ತ ವಾದ ವಿವಾದ ಕೂಡ ಸೃಷ್ಟಿಯಾಗಿದ್ದವು. ಇನ್ನೂ ಛಾಯಾ ಜೊತೆ ತಮ್ಮ ದಾಂಪತ್ಯ ಮುರಿದು ಬಿದ್ದ ನಂತರ ನಗ್ಮಾ ಅವರಿಗೆ ಶರತ್ ಕುಮಾರ್ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎನ್ನುವ ಸುದ್ದಿ ಕೂಡ ಸದ್ದು ಮಾಡಿತ್ತು. ದಕ್ಷಿಣ ಭಾರತೀಯ ಚಿತ್ರರಂಗದಿಂದ ನಗ್ಮಾ ದೂರ ಸರಿಯಲು ಇದೇ ಪ್ರಮುಖ ಕಾರಣವೆನ್ನುವುದು ಇವತ್ತು ಅನೇಕರು ಮಾಡುವ ವಾದ.
ಶರತ್ ಕುಮಾರ್ ಆದ ನಂತರ ನಗ್ಮಾ ಮತ್ತು ಭೋಜ್‌ಪುರಿ ಸ್ಟಾರ್ ರವಿಕಿಶನ್ ಅವರ ಮದುವೆ ಸುದ್ದಿ ಹೊರ ಬಿತ್ತು. ಆಶ್ಚರ್ಯ ಎಂದರೆ ಈ ಅನೈತಿಕ ಸಂಬಂಧದಿಂದ ರವಿಕಿಶನ್ ಪತ್ನಿ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಖುದ್ದು ರವಿಕಿಶನ್ ಹೇಳಿದ್ದರು. ನಗ್ಮಾ ನನ್ನ ಮನೆಗೆ ಬರುತ್ತಾರೆ, ನನ್ನ ಪತ್ನಿಯ ಜೊತೆ ಸೇರಿ ಅಡುಗೆಯೆಲ್ಲ ಮಾಡುತ್ತಾರೆ ಎಂದು ಕೂಡ ಹೇಳಿದ್ದರು. ನಗ್ಮಾ ಕುರಿತು ಅನೇಕ ಬಾರಿ ಮನ ಬಿಚ್ಚಿ ಮಾತನಾಡಿದ್ದರು. ಆದರೆ, ನಗ್ಮಾ ಮಾತ್ರ ರವಿಕಿಶನ್ ಜೊತೆ ತಮ್ಮ ಸಂಬಂಧವನ್ನು ಯಾವತ್ತು ಒಪ್ಪಿಕೊಳ್ಳಲಿಲ್ಲ.
ರವಿಕಿಶನ್ ಅವರ ನಂತರ ಮತ್ತೊಬ್ಬ ಭೋಜ್‌ಪುರಿ ಹೀರೋ ಮನೋಜ್ ತಿವಾರಿ ಹೆಸರು ಕೇಳಿ ಬಂತು. ಆ ಕಾಲಕ್ಕೆ ರವಿಕಿಶನ್ ಮತ್ತು ಮನೋಜ್ ತಿವಾರಿ ಭೋಜ್‌ಪುರಿ ಚಿತ್ರರಂಗದ ಬದ್ಧ ವೈರಿಗಳಾಗಿದ್ದ ಹಿನ್ನೆಲೆ ಈ ಸುದ್ದಿ ತೀವೃ ಕುತೂಹಲ ಕೆರಳಿಸಿತ್ತು. ಆದರೆ ಆ ನಂತರ ಮನೋಜ್ ತಿವಾರಿ ಮತ್ತು ನಗ್ಮಾ ಈ ಸುದ್ದಿಯನ್ನು ಅಲ್ಲಗೆಳೆದಿದ್ದರು. ಇಬ್ಬರು ಜೊತೆಯಲ್ಲಿ ಸಿನಿಮಾ ಮಾಡಿದ ಮಾತ್ರಕ್ಕೆ ಸಂಬಂಧ ಇದೆ ಎಂಬ ಅರ್ಥ ಅಲ್ಲ ಎಂದು ಕೆಂಡ ಕಾರಿದ್ದರು.
ಇಂಥಾ ನಗ್ಮಾ ಈಗ ತಮ್ಮ 49ನೇ ವಯಸ್ಸಿನಲ್ಲಿ ಮದುವೆಗೆ ಸಿದ್ಧರಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯ ಉತ್ತರದಿಂದ ದಕ್ಷಿಣದವರೆಗೆ ಸಖತ್ ಸದ್ದು ಮಾಡುತ್ತಿದೆ. ಇನ್ನೂ ಪ್ರತಿ ಬಾರಿ ವಿವಾಹಿತ ಪುರುಷನ ಜೊತೆ ಪ್ರೀತಿಯಲ್ಲಿ ಬಿದ್ದ ನಗ್ಮಾ ಈ ಬಾರಿ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಶೀಘ್ರದಲ್ಲಿಯೇ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಮಾತು ಕೂಡ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ. ಈ ಕುರಿತು ನಗ್ಮಾ ಇನ್ನೂ ಮೌನ ಮುರಿದಿಲ್ಲ.


Click it and Unblock the Notifications











