ಭಾರತದಲ್ಲಿ ಪಾಕಿಸ್ತಾನದ ಸಿನಿಮಾ, ಧಾರಾವಾಹಿ, ಸಂಗೀತ ಬ್ಯಾನ್ ; ಕೇಂದ್ರ ಸರ್ಕಾರದ ಆದೇಶ..!
ಕಲೆಗೆ ಯಾವುದೇ ಗಡಿಯಿಲ್ಲ. ಕಲಾವಿದರಿಗೆ ಯಾವುದೇ ಧರ್ಮ ಭೇದ ಕೂಡ ಇಲ್ಲ. ಹಾಗಂಥ ನಮ್ಮ ನೆಲಕ್ಕೆ .. ನಮ್ಮ ಭಾಷೆಗೆ .. ಅವಮಾನ ಮಾಡಿದರೆ, ಅಪಚಾರ ಎಸಗಿದರೆ, ಸುಖಾ ಸುಮ್ಮನೆ ಕಾಲು ಕೆರೆದುಕೊಂಡು ನಮ್ಮವರ ಜೊತೆ ಜಗಳಕ್ಕೆ ಬಂದರೆ, ಕ್ಯಾತೆ ತೆಗೆದರೆ, ಸುಮ್ಮನೆ ಕೂರಲು ಕೂಡ ಸಾಧ್ಯ ಇಲ್ಲ. ಅಲ್ಲಲ್ಲಿಯೇ ಉತ್ತರವನ್ನು ಕೊಡಬೇಕಾಗುತ್ತೆ. ಗಡಿಪಾರು ಮಾಡಬೇಕಾಗುತ್ತೆ.
ಕಟ್ಟು ನಿಟ್ಟಿನ ಕ್ರಮಗಳನ್ನು ಕೂಡ ಕೈಗೊಳ್ಳಬೇಕಾಗುತ್ತೆ. ಇದಕ್ಕೆ ಪಾಕಿಸ್ತಾನದ ವಿರುದ್ದ ಭಾರತ ಹೊರಡಿಸಿರುವ ಫರ್ಮಾನು ಸದ್ಯದ ಮತ್ತೊಂದು ಸಾಕ್ಷಿ. ಹೌದು, ಭಾರತೀಯ ಸೇನೆ ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಉದ್ವಿಗ್ನತೆ ಇದೆ.

1971ರ ನಂತರ ಇದೇ ಮೊದಲ ಬಾರಿಗೆ ಬೃಹತ್ ನಾಗರಿಕ ರಕ್ಷಣಾ ಮಾಕ್ ಡ್ರಿಲ್ ಕೂಡ ನಡೆದಿದೆ. ಇದರ ನಡುವೆ ಇದೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಮೂಲದ ಎಲ್ಲ ಕಂಟೆಂಟ್‌ಗಳ ಪ್ರಸಾರವನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಿದೆ. ಆದೇಶವನ್ನು ಪಾಲಿಸುವಂತೆ ಓಟಿಟಿ ಸಂಸ್ಥೆಗಳಿಗೆ ಸೂಚನೆಯನ್ನು ಕೂಡ ನೀಡಲಾಗಿದೆ.
ಹೌದು, ಅಸಲಿಗೆ ಭಾರತದಲ್ಲಿ ಅಮೆಜಾನ್ ಪ್ರೈಂ ಸೇರಿ ಹಲವು ಓಟಿಟಿ ವೇದಿಕೆಗಳಲ್ಲಿ ಪಾಕಿಸ್ತಾನದ ಸಿನಿಮಾ ಮತ್ತು ಧಾರಾವಾಹಿಗಳು ವೀಕ್ಷಣೆಗೆ ಲಭ್ಯವಾಗಿದ್ದವು. ಯೂಟ್ಯೂಬ್‌ನಲ್ಲಿ ಕೂಡ ಅನೇಕ ಭಾರತೀಯರು ಪಾಕಿಸ್ತಾನದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಪಾಕಿಸ್ತಾನದ ಹಾಡುಗಳನ್ನು ಕೂಡ ಕೇಳುತ್ತಿದ್ದರು.
ಆದರೆ ಈಗ ಇದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಪಾಕಿಸ್ತಾನದ ಪ್ರತಿಯೊಂದು ಕಂಟೆಂಟ್‌ಗಳನ್ನು ಅದು ವೆಬ್ ಸರಣಿಯಾಗಿರಬಹುದು, ಧಾರಾವಾಹಿಯಾಗಿರಬಹುದು, ಹಾಡುಗಳಿರಬಹುದು ಅಥವಾ ಪಾಕಿಸ್ತಾನದ ವ್ಯಕ್ತಿಯ ಸಂದರ್ಶನಗಳಿರಬಹುದು, ಪಾಕಿಸ್ತಾನದ ಡ್ರಾಮಾ ಇರಬಹುದು, ಎಲ್ಲವನ್ನು ಕೂಡಲೇ ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಸಬ್ಸ್ಕ್ರಿಪ್ಷನ್ ಅಥವಾ ಉಚಿತವಾಗಿ ಪ್ರಸಾರವಾಗುವ ಎಲ್ಲ ಪ್ಲಾಟ್ಫಾರ್ಮ್ಗಳಿಗೂ ಕೂಡ ಇದು ಅನ್ವಯವಾಗುತ್ತೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆಯನ್ನು ನೀಡಿದೆ.
ಅಂದ್ಹಾಗೇ ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನದ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಅದಕ್ಕೂ ಕೂಡ ಕಡಿವಾಣ ಹಾಕಿತ್ತು. ಇನ್ನು ಇದಕ್ಕೂ ಮುನ್ನ ಪಾಕಿಸ್ತಾನದ ಕಲಾವಿದರನ್ನು ಭಾರತ ಬಹಿಷ್ಕರಿಸಿತ್ತು. ಅನೇಕ ವರ್ಷಗಳಿಂದ ಪಾಕಿಸ್ತಾನದವರಿಗೆ ನಮ್ಮ ಮನರಂಜನಾ ಕ್ಷೇತ್ರ ದೂರ ಇಟ್ಟಿತ್ತು.
ಆದರೂ ಕೂಡ ಇತ್ತೀಚೆಗೆ ಫವಾದ್ ಖಾನ್ ಅಬೀರ್ ಗುಲಾಲ್ ಎಂಬ ಚಿತ್ರವನ್ನು ಮಾಡಿದ್ದರು. ಪಹಲ್ಗಾಮ್ ದಾಳಿಯ ನಂತರ ಸದ್ಯ ಈ ಚಿತ್ರವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ. ಹೀಗಿರುವಾಗ ಇದೀಗ ಕೇಂದ್ರ ಸರ್ಕಾರ ಪಾಕಿಸ್ತಾನದ ಕಂಟೆಂಟ್‌ಗಳನ್ನು ತೆಗೆದು ಹಾಕುವಂತೆ ಹೇಳಿದೆ. ಸಚಿವಾಲಯದ ಈ ಆದೇಶದ ಕುರಿತು ಓಟಿಟಿ ಫ್ಲಾಟ್‌ಫಾರ್ಮ್‌ಗಳು ಇನ್ನು ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ.


Click it and Unblock the Notifications











