ಲಾಪತಾ ಲೇಡೀಸ್ ಬೆನ್ನಲ್ಲಿಯೇ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ 'ಸ್ವಾತಂತ್ರ್ಯ ವೀರ ಸಾವರ್ಕರ್' ...!
ಭಾರತಕ್ಕೊಂದು ಆಸ್ಕರ್ ತರಬೇಕು ಅನ್ನುವ ಕನಸನ್ನ ಇಲ್ಲಿಯವರೆಗೆ ಅನೇಕರು ಕಂಡಿದ್ದಾರೆ. ಆದರೆ ಆ ಕನಸು ಇಲ್ಲಿಯವರೆಗೆ ಮರಿಚೀಕೆಯಾಗಿಯೇ ಉಳಿದಿದೆ.
ನಿಜಾ.. ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಆಸ್ಕರ್ ಸಿಕ್ಕಿತ್ತು. ರೆಹಮಾನ್‌ಗೆ, ಗುಲ್ಜಾರ್ ಅವರಿಗೆ, ರಸೂಲ್ ಪೂಕುಟ್ಟಿಗೆ ಆಸ್ಕರ್ ಲಭಿಸಿತ್ತು. ಆ ಕ್ಷಣಕ್ಕೆ ಖುಷಿಯನ್ನೂ ಕೊಟ್ಟಿತ್ತು. ಆದರೆ. ಗೆಲುವು ನಮ್ಮದಲ್ಲ. ತಾಂತ್ರಿಕವಾಗಿ ಆ ಸಿನಿಮಾ ಭಾರತೀಯರದ್ದಲ್ಲ. ಯಾಕೆಂದರೆ ಆ ಸಿನಿಮಾದ ನಿರ್ದೇಶಕ ಭಾರತೀಯನಲ್ಲ. ಆ ಕಾಲಕ್ಕೆ ಆ ಚಿತ್ರದ ನಿರ್ದೇಶಕ ಡ್ಯಾನಿ ಬಾಯಲ್ ಖುದ್ದು ಹೇಳಿಕೊಂಡಂತೆ ಸ್ಲಂ ಡಾಗ್ ಮಿಲಿಯನೇರ್ ಬ್ರಿಟಿಷ್ ಸಿನಿಮಾ.

ಇನ್ನೂ ಆರ್ ಆರ್ ಆರ್ ಚಿತ್ರಕ್ಕೆ ಆಸ್ಕರ್ ಬಂತಾದರೂ ಅದು ಹಾಡಿಗಷ್ಟೇ. ಚಿತ್ರಕ್ಕಲ್ಲ. ನಿಜಾ ಇದು ಹೆಮ್ಮೆಯ ವಿಷ್ಯವೇ. ಆದರೆ ಚಿತ್ರಕ್ಕೆ ಬಂದಿದ್ದರೆ ಆ ಸಂಭ್ರಮ ಇನ್ನೂ ಹೆಚ್ಚಿರುತ್ತಿತ್ತು. ಆರ್.ಆರ್.ಆರ್ ಜೊತೆ ಕಳೆದ ವರ್ಷ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಯಿತು. ಇತಿಹಾಸವನ್ನೂ ಸೃಷ್ಟಿಸಿತ್ತು.
ಆದರೂ, ಇಲ್ಲಿಯವರೆಗೆ ಭಾರತೀಯರು ಮಾಡಿದ ಭಾರತದ ಚಿತ್ರವೊಂದಕ್ಕೆ ಅತ್ಯುತ್ತಮ ಚಿತ್ರ ಎಂಬ ಆಸ್ಕರ್ ಸಿಗಲಿಲ್ಲ ಎಂಬ ಕೊರಗು ಇದ್ದೇ ಇದೆ. ಈ ಕೊರಗನ್ನು ಈ ವರ್ಷ ಲಾಪತಾ ಲೇಡೀಸ್ ಚಿತ್ರ ನೀಗಿಸುತ್ತಾ ಅನ್ನುವುದು ಮುಂದೆ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ಲಾಪತಾ ಲೇಡೀಸ್ ಆಸ್ಕರ್ ಗೆದ್ದು ಬರಲಿ ಎಂಬ ಪ್ರಾರ್ಥನೆಯನ್ನು ಅನೇಕರು ಮಾಡುತ್ತಿದ್ದಾರೆ. ಲಾಪತಾ ಲೇಡೀಸ್ ಆಸ್ಕರ್‌ಗೆ ಆಯ್ಕೆಯಾಗಿದ್ದಕ್ಕೆ ಚಿತ್ರದ ನಿರ್ಮಾಪಕ ಅಮೀರ್ ಖಾನ್ ಮತ್ತು ನಿರ್ದೇಶಕಿ ಕಿರಣ್ ರಾವ್ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಇನ್ನೂ ಕೆಲವರು ಪಾಯಲ್ ಕಪಾಡಿಯಾ ನಿರ್ದೇಶನದ ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರವನ್ನು ಲಾಪತಾ ಲೇಡೀಸ್ ಬದಲು ಆಸ್ಕರ್‌ಗೆ ಕಳುಹಿಸಬೇಕಿತ್ತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಈ ಬಾರಿಯ ಆಸ್ಕರ್‌ಗೆ ಭಾರತದಿಂದ ಕೇವಲ ಲಾಪತಾ ಲೇಡೀಸ್ ಚಿತ್ರವನ್ನು ಮಾತ್ರ ಕಳುಹಿಸಲಾಗಿಲ್ಲ ಬದಲಿಗೆ ರಣ್ ದೀಪ್ ಹೂಡ ನಿರ್ದೇಶನದ ಚೊಚ್ಚಲ ಚಿತ್ರ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರವನ್ನೂ ಕೂಡ ಆಸ್ಕರ್‌ಗೆ ಕಳುಹಿಸಲಾಗಿದೆ ಎನ್ನುವ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಹೌದು, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಲಾಪತಾ ಲೇಡೀಸ್ ಜೊತೆಯಲ್ಲಿ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರವನ್ನು ಕೂಡ ಆಸ್ಕರ್‌ಗೆ ಕಳುಹಿಸಿದೆ. ಚಿತ್ರದ ನಿರ್ದೇಶಕ ರಣ್ ದೀಪ್ ಹೂಡ ಖುದ್ದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಚಿತ್ರ 'ಸ್ವಾತಂತ್ರ್ಯ ವೀರ ಸಾವರ್ಕರ್' ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಚಲನಚಿತ್ರ ಫೆಡರೇಶನ್‌ಗೆ ಧನ್ಯವಾದಗಳು, ಇದೊಂದು ಅದ್ಭುತ ಪ್ರಯಾಣವಾಗಿದ್ದು ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಣ್‌ದೀಪ್ ಹೂಡ ಬರೆದುಕೊಂಡಿದ್ದಾರೆ.
ಅಂದ್ಹಾಗೇ ಹಿಂದುತ್ವ ಸಿದ್ದಾಂತವಾದಿ ಸಾವರ್ಕರ್ ಕುರಿತ ಈ ಚಿತ್ರ ಈ ವರ್ಷದ ಮಾರ್ಚ್ ನಲ್ಲಿ ತೆರೆಗೆ ಬಂದಿತ್ತು. ಸಾವರ್ಕರ್ ಪಾತ್ರಕ್ಕೆ ಬಣ್ಣ ಹಚ್ಚುವುದಲ್ಲದೇ ಈ ಚಿತ್ರವನ್ನು ರಣ್ ದೀಪ್ ಹೂಡ ನಿರ್ದೇಶನ ಮಾಡಿದ್ದರು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿ ಸಂದೀಪ್ ಸಿಂಗ್ ಜೊತೆ ಹಣವನ್ನು ಹೂಡಿದ್ದರು. ಆದರೆ, ಅಂದುಕೊಂಡ ಪ್ರತಿಕ್ರಿಯೆ ರಣ್ ದೀಪ್ ಹೂಡ ಅವರಿಗೆ ಪ್ರೇಕ್ಷಕರ ವಲಯದಿಂದ ಸಿಗಲಿಲ್ಲ. ಬಾಕ್ಸಾಫೀಸ್‌ನಲ್ಲಿ ಚಿತ್ರ 35 ಕೋಟಿಯನ್ನು ಕೂಡ ಗಳಿಸಲಿಲ್ಲ. ಇದರಿಂದ ಬೇಸರಗೊಂಡಿದ್ದ ರಣ್ ದೀಪ್ ಹೂಡ ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ನನ್ನ ತಂದೆ ಕಷ್ಟ ಪಟ್ಟು ದುಡಿದು ನನಗಾಗಿ ಕೊಟ್ಟಿದ್ದ 'ಆಸ್ತಿ'ಯನ್ನು ಮಾರಿ ನಾನು ಚಿತ್ರವನ್ನು ನಿರ್ಮಾಣ ಮಾಡಿದೆ, ಚಿತ್ರಕ್ಕಾಗಿ ಊಟ ಬಿಟ್ಟೆ, ನಿದ್ದೆ ಬಿಟ್ಟೆ ಕೇವಲ ನೀರು, ಬ್ಲ್ಯಾಕ್ ಕಾಫಿ ಹಾಗೂ ಗ್ರೀನ್ ಟೀ ಅಷ್ಟೇ ಕುಡಿದು ಬದುಕಿದೆ, ಪಾತ್ರಕ್ಕೆ ಜೀವ ತುಂಬಿದೆ. ಆದರೂ ಪ್ರೇಕ್ಷಕರು ನನ್ನ ಕೈ ಹಿಡಿಯಲಿಲ್ಲ, ಚಿತ್ರವನ್ನ ಬಂದು ನೋಡಲಿಲ್ಲ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು.
ಈಗ ರಣ್ ದೀಪ್ ಹೂಡ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ. ಆಸ್ಕರ್ ಅಂಗಳಕ್ಕೆ ಲಾಪತಾ ಲೇಡೀಸ್ ಚಿತ್ರದ ಜೊತೆ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರ ಧುಮುಕಿದೆ. ಲಾಪತಾ ಲೇಡೀಸ್ ಮತ್ತು 'ಸ್ವಾತಂತ್ರ್ಯ ವೀರ ಸಾವರ್ಕರ್' ಇವೆರಡು ಸಿನಿಮಾ ಆಸ್ಕರ್‌ನಲ್ಲಿ ಎದುರಾಗುವ ಸವಾಲುಗನ್ನೇದುರಿಸಿ ಅಂತಿಮ ಐದರ ಹಂತಕ್ಕೆ ಹೋಗಿ ತಲುಪುತ್ತಾವಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











