07 ವರ್ಷ ಜೊತೆಯಲ್ಲಿ ಓಡಾಡಿ ಮದ್ವೆಯಾಗದೇ ಮಲ್ಲಿಕಾ ಶೆರಾವತ್‌ಗೆ ಕೈ ಕೊಟ್ಟ ಫ್ರೆಂಚ್ ಬಾಯ್‌ಫ್ರೆಂಡ್...!
ಪ್ರೀತಿಸುವುದೇ ಆಗಲಿ, ಪ್ರೀತಿಯನ್ನು ಕಳೆದುಕೊಳ್ಳುವುದೇ ಆಗಲಿ, ಯಾವುದು ಹೇಳಿ ಕೇಳಿ ಬರುವುದಿಲ್ಲ. ಪ್ರೀತಿಗೆ ನಿರ್ದಿಷ್ಟ ತಳಪಾಯ ಮತ್ತು ನಂಬಿಕೆ ಮತ್ತು ಪರಸ್ಪರ ಗೌರವದ ಭಾವನೆ ಇಲ್ಲವಾದರೆ ಪ್ರೀತಿ-ಪ್ರೀತಿಯಾಗಿ ಉಳಿಯುವುದಿಲ್ಲ.
ಇನ್ನೂ. ಪ್ರೀತಿಯಲ್ಲಿ ಹೃದಯ ಚೂರು ಚೂರಾಗುವಾಗ ನೋವಾಗುವುದು ಸಹಜ. ಆದರೆ ನಕಾರಾತ್ಮಕವಾದ ಪ್ರೀತಿಯಲ್ಲಿ ಭವಿಷ್ಯ ಇರುವುದಿಲ್ಲ. ಹೀಗಾಗಿಯೇ ಎಷ್ಟೇ ನೋವಾದರೂ ಅನೇಕರು ಮುಂದೊಂದು ದಿನ ನಿಜವಾದ ಪ್ರೀತಿ ಸಿಗಬಹುದು ಎಂದುಕೊಂಡು ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಅಂದುಕೊಂಡ ಪ್ರೀತಿ ಸಿಗದೇ ಇದ್ದರೂ ಕೊನೆ ಪಕ್ಷ ನೆಮ್ಮದಿಯಿಂದ ಆದರೂ ಇರಬಹುದು ಎಂದು ಮುರಿದು ಬಿದ್ದ ಪ್ರೀತಿಯನ್ನು ಮಾನಸಿಕವಾಗಿ ಮರೆಯುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಮಲ್ಲಿಕಾ ಶೆರಾವತ್ ಸದ್ಯದ ತಾಜಾ ಉದಾಹರಣೆ.

ಹೌದು, ಒಂದ್ಕಾಲದಲ್ಲಿ ರಸಿಕರ ಮೈಬಿಸಿಯೇರಿಸಿದ ಮಲ್ಲಿಕಾ ಶೆರಾವತ್, ಹಾಗೇ ನೋಡಿದರೆ ಚಿತ್ರರಂಗದಲ್ಲಿ ಕೀರ್ತಿಯ ಶಿಖರದ ತುತ್ತ ತುದಿಯನ್ನು ತಲುಪಬೇಕಿತ್ತು. ಆದರೆ, ಮಲ್ಲಿಕಾ ಅಭಿನಯಕ್ಕಿಂತ ಹೆಚ್ಚು ಅರ್ಧಂಬರ್ಧ ಬಟ್ಟೆಗಳನ್ನು ಹಾಕಿಕೊಳ್ಳುವತ್ತ ಗಮನ ನೀಡಿದರು. ಇನ್ನು ಬಾಲಿವುಡ್ ಕೂಡ ಮಲ್ಲಿಕಾ ಅವರನ್ನು ಬಿಚ್ಚಮ್ಮ ಎಂದು ಬ್ರ್ಯಾಂಡ್ ಮಾಡಿತ್ತು. ಹಸಿ ಬಿಸಿ ದೃಶ್ಯಗಳಿಗಷ್ಟೇ ಮಲ್ಲಿಕಾ ಶೆರಾವತ್ ಅವರನ್ನು ಸೀಮಿತಗೊಳಿಸಿತು. ಇದರಿಂದ ಬೇಸತ್ತ ಮಲ್ಲಿಕಾ ಆ ನಂತರ ಚೈನೀಸ್ ಮತ್ತು ಇಂಗ್ಲೀಷ್ ಚಿತ್ರಗಳತ್ತ ಹೊರಳಿದರು. ಒಂದೆರಡು ತಮಿಳು ಚಿತ್ರಗಳನ್ನು ಮಾಡಿದರು. ಇನ್ನೂ ಪ್ರೇಮ್ ಗೋರಿಪಾಳ್ಯದ ಗಲ್ಲಿಯೊಳಗೆ ಕೂಡ ಇವರನ್ನು ಕರೆದುಕೊಂಡು ಬಂದರು. ಆದರೆ, ಎಲ್ಲೆಡೆ ಹಾಡುಗಳಿಗೆ ಕುಣಿದಿದ್ದಷ್ಟೇ ಬಂತು. ಮಲ್ಲಿಕಾಗೆ ಬೇಕಿದ್ದ ಗೆಲುವು ಸಿಗಲಿಲ್ಲ.
ಇಂಥಾ ಮಲ್ಲಿಕಾ ಶೆರಾವತ್ 2017ರ ಆಸು-ಪಾಸು ತಮ್ಮ 41ನೇ ವಯಸ್ಸಿನಲ್ಲಿ ಸಿರಿಲ್ ಆಕ್ಸೆನ್ ಫ್ಯಾನ್ಸ್ ಎಂಬ ಫ್ರೆಂಚ್ ವ್ಯಕ್ತಿಗೆ ತಮ್ಮ ಹೃದಯವನ್ನು ನೀಡಿದ್ದರು. ಎಲ್ಲೆಂದರಲ್ಲಿ ಕೈ ಕೈ ಹಿಡಿದು ಓಡಾಡಿದರು. ಪ್ರೇಮದ ಅಮಲನ್ನೇರಿಸಿಕೊಂಡಿದ್ದರು. ಆದರೆ, ಈಗ ಅಮಲು ಇಳಿದಿದೆ. ಮಲ್ಲಿಕಾ ಶೆರಾವತ್ ಹೃದಯ ಒಡೆದಿದೆ. ಹೆಚ್ಚು ಕಡಿಮೆ 07 ವರ್ಷ ಜೊತೆಯಲ್ಲಿದ್ದ ನಂತರ ಭಿನ್ನಾಭಿಪ್ರಾಯಗಳಿಂದ ಸಿರಿಲ್ ಆಕ್ಸೆನ್ ಫ್ಯಾನ್ಸ್ ಜೊತೆ ಬ್ರೇಕಪ್ ಆಗಿದೆ. ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾ ಶೆರಾವತ್, ಸಿರಿಲ್ ಆಕ್ಸೆನ್ ಫ್ಯಾನ್ಸ್ ಜೊತೆ ಇದ್ದ ಸಂಬಂಧದ ಬಗ್ಗೆ ಹೆಚ್ಚೇನು ನಾನು ಹೇಳುವುದಿಲ್ಲ ಆದರೆ ಒಂದು ಮಾತ್ರ ಸತ್ಯ ನಮ್ಮ ಸಂಬಂಧ ಮುರಿದು ಬಿದ್ದಿದೆ ಎಂದಿದ್ದಾರೆ. ಸದ್ಯಕ್ಕೆ ನಾನು ಈಗ ಸಿಂಗಲ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಇದೇ ಸಂದರ್ಶನದಲ್ಲಿ ಮದುವೆಯ ಕುರಿತು ಮಾತನಾಡಿರುವ ಮಲ್ಲಿಕಾ ಶೆರಾವತ್, ನಾನು ಮದುವೆಯನ್ನು ವಿರೋಧಿಸುವುದಿಲ್ಲ. ಹಾಗಂಥ ಮದುವೆಯಾಗಲು ಬಯಸುವುದಿಲ್ಲ, ಇಬ್ಬರು ವ್ಯಕ್ತಿಗಳ ಮೇಲೆ ಅದು ಅವಲಂಬಿತವಾಗಿರುತ್ತೆ ಎಂದು ಹೇಳಿದ್ದಾರೆ. ಮದುವೆಯಾಗಲು ಸೂಕ್ತವಾದ ವ್ಯಕ್ತಿ ಸಿಗಬೇಕು ಎಂದು ಹೇಳಿದ್ದಾರೆ. ಅಂದ್ಹಾಗೇ ಈ ಹಿಂದೆ ಐಎಎನ್‌ಎಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಲ್ಲಿಕಾ ತಮ್ಮ ಮಾಜಿ ಪ್ರಿಯಕರ ಸಿರಿಲ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು.ಅವನು ನನಗೆ ಸಂಪೂರ್ಣ ಪ್ಯಾರಿಸ್ ತೋರಿಸಿದ್ದಾನೆ, ಫ್ರೆಂಚ್ ಶೈಲಿಯಲ್ಲಿ ರೊಮ್ಯಾನ್ಸ್ ಮಾಡಿದ್ದಾನೆ, ಈಗ ನನ್ನ ಸರದಿ, ಶೀಘ್ರದಲ್ಲಿಯೇ ನನ್ನ ಬಾಯ್‌ಫ್ರೆಂಡ್‌ನ ಮುಂಬೈಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದರು. ತಾಜ್‌ಮಹಲ್‌ಗೆ ಕರೆದುಕೊಂಡು ಹೋಗಿ ಬೀದಿ ಬದಿಯ ಆಹಾರವನ್ನು ಅವನ ಜೊತೆ ತಿನ್ನಬೇಕೆನ್ನುವುದು ನನ್ನ ಆಸೆ ಎಂದು ಹೇಳಿದ್ದರು. ಆದರೆ ಈಗ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ಧಾರೆ.


Click it and Unblock the Notifications











