ಕಂಗನಾ ರಣಾವತ್ ಗಜಪ್ರಸವ ವೇದನೆ ಅಂತ್ಯ, ಹಲವು ಅಡೆ ತಡೆಗಳ ನಂತರ ಕೊನೆಗೂ ಬಿಡುಗಡೆಗೆ ಸಿದ್ಧವಾದ ಎಮರ್ಜೆನ್ಸಿ...!
ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇಂಥಾ ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಬಿಜೆಪಿ ಸಂಸದೆಯೂ ಹೌದು.
ಆದರೆ, ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾ ರಣಾವತ್‌ಗೆ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರು ತಮ್ಮ ಎಮರ್ಜೆನ್ಸಿ ಚಿತ್ರವನ್ನು ಬಿಡುಗಡೆ ಮಾಡಲು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ. ಇದಕ್ಕೆ ಸೆನ್ಸಾರ್ ಸೇರಿ ಹತ್ತು ಹಲವು ಕಾರಣಗಳು ಇದ್ದವು. ಆದರೆ ಈಗ ಎಲ್ಲ ಸಮಸ್ಯೆಯನ್ನು ಕಂಗನಾ ಬಗೆಹರಿಸಿಕೊಂಡಂತೆ ಇದೆ. ಹೀಗಾಗಿಯೇ ತಮ್ಮ ಎಮರ್ಜೆನ್ಸಿ ಚಿತ್ರದ ಹೊಸ ಬಿಡುಗಡೆಯ ದಿನಾಂಕವನ್ನು ಕಂಗನಾ ಘೋಷಿಸಿದ್ದಾರೆ. ಮುಂದಿನ ವರ್ಷಕ್ಕೆ ತಮ್ಮ ಚಿತ್ರವನ್ನು ಮುಂದೂಡಿದ್ಧಾರೆ.

ಹೌದು, ಚಿತ್ರದ ಕಥಾನಾಯಕಿ ಮತ್ತು ನಿರ್ದೇಶಕಿಯಾಗಿರುವ ಕಂಗನಾ ರಣಾವತ್ ಜನವರಿ 17-2025ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಭಾರತದ ಶಕ್ತಿಶಾಲಿ ಮಹಿಳೆಯ ಕಥೆ ಜನವರಿ 17ರಂದು ಚಿತ್ರಮಂದಿರಗಳಲ್ಲಿ ಅನಾವರಣವಾಗಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಂದ್ಹಾಗೇ ಈ ಹಿಂದೆ ಸೆಪ್ಟೆಂಬರ್ ಆರರಂದು ಕಂಗನಾ ತಮ್ಮ ಈ ಕನಸಿನ ಕೂಸನ್ನು ಜನರ ಮುಂದೆ ತರುವ ಪ್ರಯತ್ನ ಮಾಡಿದ್ದರು. ಆದರೆ.. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಚಿತ್ರದಲ್ಲಿನ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳಿತ್ತು. ಆದರೆ ಇದನ್ನು ಒಪ್ಪದ ಕಂಗನಾ ಆ ನಂತರ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಆದರೆ ಅಲ್ಲಿ ಕೂಡ ಕಂಗನಾಗೆ ಹಿನ್ನೆಡೆಯಾಗಿತ್ತು. ಈ ಕಾರಣಕ್ಕೆ ಬಾಂಬೆ ಹೈಕೋರ್ಟ್ ಆದೇಶದ ಮೆರೆಗೆ ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಹೇಳಿದ್ದ 13 ವಿವಾದಾತ್ಮಕ ಸನ್ನಿವೇಶಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡರು. ಹೀಗೆ ಸೆನ್ಸಾರ್ ಸುಳಿಯಿಂದ ಪಾರಾದ ತಮ್ಮ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಮಾಡಿದ್ದಾರೆ ಕಂಗನಾ ರಣಾವತ್.
ಇನ್ನುಳಿದಂತೆ ಎಮರ್ಜೆನ್ಸಿಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ವಿಶಾಕ್ ನಾಯರ್ ಮತ್ತು ದಿವಂಗತ ನಟ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಿದ್ದಾರೆ. ರಿಂಕು ಪಿಟ್ಟಿ ನಿರ್ಮಾಣದಲ್ಲಿ ಕಂಗನಾ ಜೊತೆ ಕೈ ಜೋಡಿಸಿದ್ಧಾರೆ. ಉಮೇಶ್ ಬನ್ಸಲ್ ಚಿತ್ರದ ಮತ್ತೊಬ್ಬ ನಿರ್ಮಾಪಕರು.
ಇನ್ನೂ ಸಿನಿಮಾದಲ್ಲಿ ಇಂದಿರಾ ಗಾಂಧಿಯ ಗಟ್ಟಿ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ ಎಂಬ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಈ ಕಾರಣಕ್ಕೆ ಈ ಚಿತ್ರ ಕುತೂಹಲವನ್ನೂ ಕೆರಳಿಸಿದೆ. ಇನ್ನೂ ಕಂಗನಾ ರಣಾವತ್ ಅಭಿನಯದ ಯಾವ ಚಿತ್ರ ಕೂಡ ಇತ್ತೀಚಿನ ದಿನಗಳಲ್ಲಿ ಗೆದ್ದಿಲ್ಲ. ಕಂಗನಾ ಅಭಿನಯಕ್ಕೆ ಪ್ರೇಕ್ಷಕರು, ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರೂ ಚಿತ್ರಗಳು ಪವಾಡವನ್ನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯದಲ್ಲಿಯೂ ಗೆದ್ದ ಕಂಗನಾಗೆ ಎಮರ್ಜೆನ್ಸಿ ಗೆಲ್ಲಲೇಬೇಕಿದೆ. ಚಿತ್ರ ಕಂಗನಾ ಕೈ ಹಿಡಿಯಬೇಕಿದೆ.
ಒಟ್ನಲ್ಲಿ ಸಾರ್ವತ್ರಿಕ ವಲಯದಲ್ಲಿ ಕಂಗನಾ ಕುರಿತು ಅಭಿಪ್ರಾಯಗಳು ಏನೇ ಇರಲಿ, ಆದರೆ ಕಂಗನಾ ಅತ್ಯುತ್ತಮ ಅಭಿನೇತ್ರಿ ಅನ್ನುವುದರಲ್ಲಿ ದೂಸ್ರಾ ಮಾತು ಇಲ್ಲ. ಇದಕ್ಕೆ ಅವರಿಗೆ ಸಿಕ್ಕ ನಾಲ್ಕು ರಾಷ್ಟ್ರ ಪ್ರಶಸ್ತಿಗಳೇ ಸಾಕ್ಷಿ. ಎಮರ್ಜೆನ್ಸಿ ಚಿತ್ರದಲ್ಲಿನ ಅಭಿನಯಕ್ಕೆ ಕಂಗನಾ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರಾ, ಈ ಚಿತ್ರದ ಮೂಲಕ ಗೆದ್ದು ಬೀಗುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











