ಸಾಲು ಸಾಲು ಸಿನಿಮಾಗಳ ಸೋಲು: ದೇವರ ಮುಂದೆ ದುಃಖ ತೋಡಿಕೊಂಡ ನಟಿ ಕಂಗನಾ ರನೌತ್!
ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಈ ವರ್ಷ ಕೂಡ ಖುಷಿ ಸಿಕ್ಕಿಲ್ಲ. ಅವರು ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಅದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ 'ತೇಜಸ್' ಸಿನಿಮಾ ಕೂಡ ಪ್ಲಾಪ್ ಆಗಿದೆ. ಇದೇ ಬೇಸರದಲ್ಲಿದ್ದಾರೆ ನಟಿ ಕಂಗನಾ ರನೌತ್.
ಕಳೆದ ವಾರ ಬಿಡುಗಡೆಯಾದ ತೇಜಸ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ಇದೇ ಬೇಸರದಲ್ಲಿ ನಟಿ ಕಂಗನಾ ರನೌತ್ ಅವರು ಗುಜರಾತ್‌ನ ದ್ವಾರಕಾಧೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯ ಬಗ್ಗೆಯೂ ಬರೆದುಕೊಂಡಿದ್ದಾರೆ.

ದ್ವಾರಕೆಗೆ ಭೇಟಿ ನೀಡಿದ ಕಂಗನಾ ರನೌತ್
ಹಿಂದೂ ತೀರ್ಥಯಾತ್ರೆಯ ಚಾರ್ ಧಾಮ್ ತಾಣಗಳಲ್ಲಿ ಒಂದಾಗಿರುವ ಗುಜರಾತ್‌ನ ದ್ವಾರಕೆಗೆ ನಟಿ ಕಂಗನಾ ಭೇಟಿ ನೀಡಿದ್ದಾರೆ. ದ್ವಾರಕಾಧೀಶ ಅಥವಾ ದ್ವಾರಕಾ ರಾಜ ಎಂಬ ಹೆಸರಿನಿಂದ ಪೂಜಿಸಲ್ಪಡುವ ಭಗವಾನ್ ಕೃಷ್ಣನ ಸನ್ನಿಧಾನಕ್ಕೆ ಭೇಟಿ ನೀಡಿರುವ ನಟಿ ಕಂಗನಾ ರನೌತ್ ದೇವಾಲಯದ ಒಳಳೆ ಕೃಷ್ಣನ ಮುಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.
"ಕೆಲವು ದಿನಗಳಿಂದ ನನ್ನ ಮನಸ್ಸು ತುಂಬಾ ತೊಂದರೆಗೆ ಒಳಗಾಗಿತ್ತು. ನನಗೆ ದ್ವಾರಕೆಗೆ ಭೇಟಿ ಮಾಡಬೇಕು ಎನಿಸಿತ್ತು. ಶ್ರೀಕೃಷ್ಣನ ಈ ದಿವ್ಯ ನಗರಿ ದ್ವಾರಕೆಗೆ ಬಂದ ಕೂಡಲೇ ಇಲ್ಲಿನ ಮಣ್ಣನ್ನು ನೋಡಿದೊಡನೆಯೇ ನನ್ನ ಚಿಂತೆಗಳೆಲ್ಲ ಕಳಚಿ ಬಿದ್ದಂತೆ ಭಾಸವಾಯಿತು. ನನ್ನ ಮನಸ್ಸು ಸ್ಥಿರವಾಯಿತು. ನಾನು ಅನಂತ ಆನಂದವನ್ನು ಅನುಭವಿಸಿದೆ. ಓ ದ್ವಾರಕಾ ಪ್ರಭುವೇ, ನಿಮ್ಮ ಆಶೀರ್ವಾದ ಹೀಗೆ ಇರಲಿ. ಹರೇ ಕೃಷ್ಣ" ಎಂದು ಬರೆದುಕೊಂಡಿದ್ದಾರೆ.

ಪ್ರೇಕ್ಷಕರನ್ನು ಸಿನಿಮಾ ಮಂದಿರಗಳಿಗೆ ಸೆಳೆಯುವಲ್ಲಿ ತೇಜಸ್ ವಿಫಲ
ಸರ್ವೇಶ್ ಮೇವಾರಾ ನಿರ್ದೇಶಿಸಿದ ಕಂಗನಾ ರನೌತ್ ಅವರ 'ತೇಜಸ್' ಸಿನಿಮಾ, ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ತೇಜಸ್ ಗಿಲ್ ಅವರ ಜೀವನ ಕಥೆ. ದೊಡ್ಡ ಆಕ್ಷನ್ ಚಿತ್ರವಾಗಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿದೆ. ಕಳೆದ ಕೆಲವು ವಾರಗಳಿಂದ, ಕಂಗನಾ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದರು. ಈ ಸಿನಿಮಾ ದೇಶಭಕ್ತಿ ಹೆಚ್ಚಿಸುತ್ತದೆ. ವಾಯುಪಡೆಯ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿಕೊಂಡಿದ್ದರು. ಆದರೂ ಕೂಡ ಸಿನಿಮಾ ಹೀನಾಯ ಸೋಲು ಕಂಡಿದೆ.
ತೇಜಸ್ ಚಲನಚಿತ್ರವು ಅಕ್ಟೋಬರ್ 27 ರಂದು ಬಿಡುಗಡೆಯಾಯಿತು. Sacnilk.com ವರದಿಯ ಪ್ರಕಾರ ಮೊದಲ ವಾರದಲ್ಲಿ ಭಾರತದಲ್ಲಿ ಅಂದಾಜು 5.5 ಕೋಟಿ ರೂಪಾಯಿ ಗಳಿಸಿದೆ. ತೇಜಸ್ ಬಿಡುಗಡೆಯ ದಿನವೇ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಕೇವಲ 1.25 ಕೋಟಿ ಸಂಗ್ರಹಿಸುವ ಮೂಲಕ ಪ್ಲಾಪ್ ಎಂದು ಬಿಂಬಿಸಿಕೊಂಡಿತ್ತು. ಬಳಿಕ ಇದರ ಕಲೆಕ್ಷನ್‌ನಲ್ಲಿ ಅಂತಹ ಹೆಚ್ಚಳ ಕಂಡು ಬರಲಿಲ್ಲ.
ತೇಜಸ್‌ನಲ್ಲಿ ಅಂಶುಲ್ ಚೌಹಾನ್, ವರುಣ್ ಮಿತ್ರ, ಆಶಿಶ್ ವಿದ್ಯಾರ್ಥಿ, ವಿಶಾಕ್ ನಾಯರ್ ಮತ್ತು ದಿವಂಗತ ರಿಯೊ ಕಪಾಡಿಯಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ತಾರಾ ಬಳಗವಿದ್ದರೂ ಕೂಡ ಸಿನಿಮಾ ಚೆನ್ನಾಗಿಲ್ಲ ಎಂಬ ವಿಮರ್ಶೆಗಳು ಬಂದಿದ್ದವು. ನಟಿ ಕಂಗನಾ ಕೂಡ ತಮ್ಮ ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಿ. ಉತ್ತಮ ದೇಶಭಕ್ತಿಯ ಸಿನಿಮಾ ಮಾಡಿದ್ದೇವೆ ಎಂದು ಮನವಿ ಮಾಡಿದ್ದರು.
ಇದಲ್ಲದೇ ಇತ್ತೀಚಿಗಷ್ಟೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಗಣ್ಯರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಸಿನಿಮಾ ನೋಡಿದ ನಂತರ ಯೋಗಿ ಆದಿತ್ಯನಾಥ್ ಭಾವುಕರಾಗಿದ್ದರು. ಇಷ್ಟೇಲ್ಲಾ ಆದರೂ ಸಿನಿಮಾ ಪ್ರೇಕ್ಷಕರನ್ನು ತಲುಪಲಿಲ್ಲ.


Click it and Unblock the Notifications











