'ದಿ ಕಾಶ್ಮೀರ್ ಫೈಲ್ಸ್' ಆಯ್ತು, ಈಗ 'ದಿ ಕೇರಳ ಸ್ಟೋರಿ': ಕತೆ ಏನು?
ಕಾಶ್ಮೀರಿ ಪಂಡಿತರ ಮೇಲೆ 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ದೌರ್ಜನ್ಯದ ಕತೆ ಹೊಂದಿದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೊಡ್ಡ ಹಿಟ್ ಎನಿಸಿಕೊಂಡಿದೆ. ಜೊತೆಗೆ ದೊಡ್ಡ ಮಟ್ಟದ ಚರ್ಚೆಯನ್ನೂ ಹುಟ್ಟುಹಾಕಿದೆ.
ಈ ಸಿನಿಮಾ ಹುಟ್ಟುಹಾಕಿರುವ ಚರ್ಚೆ ಒಂದೆರಡಲ್ಲ. ಕಲೆಯ ಉದ್ದೇಶ, ಸಿನಿಮಾ ಮೂಲಕ ರಾಜಕಾರಣ, ರಾಜಕಾರಣಕ್ಕೆ ಸಿನಿಮಾ ಬಳಕೆ, ಸಿನಿಮಾ ಹಾಗೂ ಇತಿಹಾಸ, ಸಿನಿಮಾ ಮೂಲಕ ಇತಿಹಾಸದ ತಿರುಚುವಿಕೆ ಮತ್ತು ಮರು ಸೃಷ್ಟಿ ಹೀಗೆ ಹಲವು ಆಯಾಮಗಳ ಚರ್ಚೆಗೆ ಈ ಸಿನಿಮಾ ನಾಂದಿಯಾಗಿದೆ.
ಪ್ರಧಾನಿ ಮೋದಿ ಒಳಗೊಂಡಂತೆ ಬಿಜೆಪಿಯ ದೊಡ್ಡ ಬೆಂಬಲವನ್ನು ಪಡೆದುಕೊಂಡಿರುವ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಟೀಕಿಸುತ್ತಿರುವ ವಿಪಕ್ಷಗಳು, 'ದಿ ಗೋಧ್ರಾ ಫೈಲ್ಸ್', 'ದಿ ಕೊರೊನಾ ಲಾಕ್‌ಡೌನ್ ಫೈಲ್ಸ್', 'ದಿ ಡಿಮಾನಿಟೇಶನ್ ಫೈಲ್ಸ್' ಸಿನಿಮಾಗಳೂ ಬರಲೆಂದು ಒತ್ತಾಯಿಸಿವೆ. ಈ ಸಿನಿಮಾಗಳು ಬರುತ್ತವೇಯೋ ಇಲ್ಲವೋ ಆದರೆ 'ದಿ ಕೇರಳ ಸ್ಟೋರಿ' ಎಂಬ ಸಿನಿಮಾ ಇದರ ನಡುವೆಯೇ ಸೆಟ್ಟೇರಿದೆ. ಈ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಿಂದಲೇ ಸ್ಪೂರ್ತಿ ಪಡೆದಿರುವುದು ಖಾತ್ರಿ.

ಈ ಸಿನಿಮಾವು ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮಾನವ ಕಳ್ಳಸಾಗಣೆ ಕುರಿತ ಕತೆಯನ್ನು ಒಳಗೊಂಡಿರಲಿದೆ ಎಂದು ನಿರ್ದೇಶಕ ಸುದಿಪ್ತೊ ಸೇನ್ ಹೇಳಿದ್ದಾರೆ. ಕಳೆದ 12 ವರ್ಷಗಳಲ್ಲಿ ಸಾವಿರಾರು ಮುಸ್ಲಿಂ ಹೆಣ್ಣು ಮಕ್ಕಳನ್ನು ಉಗ್ರ ಸಂಘಟನೆ ಐಸಿಸ್‌ಗೆ ಬಲವಂತವಾಗಿ ಕಳಿಸಲಾಗಿದೆ. ಕೇರಳದ ಈ ಭಯನಾಕ ಕತೆಯನ್ನು ಸಿನಿಮಾ ಮಾಡುತ್ತಿರುವುದಾಗಿ 'ದಿ ಕೇರಳ ಸ್ಟೋರಿ' ಟೀಸರ್‌ನಲ್ಲಿ ಚಿತ್ರತಂಡ ಹೇಳಿದೆ.
''ದಿ ಪಾಪುಲರ್ ಫ್ರಂಟ್ ಸಂಘಟನೆಯು ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಂಚು ರೂಪಿಸಿದೆ. ನಿಷೇಧಿತ ಸಂಘಟನೆ ಎನ್‌ಡಿಎಫ್ ಸಹ ಇದೇ ಮಾದರಿಯ ಆಲೋಚನೆಯನ್ನು ಹೊಂದಿತ್ತು. ಮುಂದಿನ 20 ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವುದು ಪಾಪ್ಯುಲರ್ ಫ್ರಂಟ್‌ನ ಗುರಿ'' ಎಂದು ಕೇರಳದ ಮಾಜಿ ಸಿಎಂ ಅಚ್ಯುತಾನಂದ್ ಹೇಳಿರುವ ವಿಡಿಯೋವನ್ನು ಟೀಸರ್‌ನಲ್ಲಿ ಬಳಸಿಕೊಳ್ಳಲಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಐಸಿಸ್ ಹಾಗೂ ಇತರ ಮುಸ್ಲಿಂ ಯುದ್ಧ ಪೀಡಿತ ಸ್ಥಳಗಳಿಗೆ ಕೇರಳದಿಂದ ಸಾವಿರಾರು ಯುವತಿಯರನ್ನು ರವಾನೆ ಮಾಡಲಾಗಿದೆ. ಕಳ್ಳಸಾಗಣೆಗೆ ಒಳಪಟ್ಟ 32,000 ಮುಸ್ಲಿಂ ಮಹಿಳೆಯರ ಜೀವನ ಆಧರಿಸಿದ ಸಿನಿಮಾ 'ದಿ ಕೇರಳ ಸ್ಟೋರಿ' ಎಂದು ಟೀಸರ್‌ನಲ್ಲಿ ಹೇಳಲಾಗಿದೆ.
ಸಿನಿಮಾವನ್ನು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನ ಮಾಡುತ್ತಿರುವುದು ಸುದಿಪ್ತೊ ಸೇನ್.
ಸಮುದಾಯವೊಂದರ ಮೇಲೆ ದ್ವೇಷ ಹೆಚ್ಚಿಸುವ ಚಿತ್ರಗಳು ಒಂದರ ಹಿಂದೊಂದರಂತೆ ಬರುತ್ತಿದ್ದು, 'ದಿ ಕಾಶ್ಮೀರ್ ಫೈಲ್ಸ್' ನಂತೆ 'ದಿ ಕೇರಳ ಸ್ಟೋರಿ' ಸಿನಿಮಾ ಸಹ ವಿವಾದ ಎಬ್ಬಿಸುವ ಸಾಧ್ಯತೆ ಇದೆ. ಕೇರಳ ಸರ್ಕಾರವು ಈ ಸಿನಿಮಾದ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ


Click it and Unblock the Notifications











