'ಉರಿಗೌಡ-ನಂಜೇಗೌಡ' ಆಯ್ತು.. ಈಗ 'ಟಿಪ್ಪು': ಚುನಾವಣೆ ಬೆನ್ನಲ್ಲೇ ಮೋಷನ್ ಪೋಸ್ಟರ್ ರಿಲೀಸ್
ಕೆಲವು ದಿನಗಳ ಹಿಂದಷ್ಟೇ ನಿರ್ಮಾಪಕ ಹಾಗೂ ಬಿಜೆಪಿ ಮುಖಂಡ ಮುನಿರತ್ನ 'ಉರಿಗೌಡ-ನಂಜೇಗೌಡ' ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಈ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಈ ಸಿನಿಮಾವನ್ನು ವಿರೋಧಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಮುನಿರತ್ನ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. ಬಳಿಕ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ಸಿನಿಮಾ ಮಾಡದಂತೆ ಸಲಹೆ ನೀಡಿದ್ದರು. ಆ ಬಳಿಕ ಮುನಿರತ್ನ 'ಉರಿಗೌಡ-ನಂಜೇಗೌಡ' ಸಿನಿಮಾವನ್ನು ಕೈ ಬಿಟ್ಟಿದ್ದರು.

ಇನ್ನೇನು 'ಉರಿಗೌಡ ನಂಜೇಗೌಡ' ಕಥೆ ಮುಗೀತು ಅನ್ನುವಾಗಲೇ ಟಿಪ್ಪು ಸುಲ್ತಾನ್ ಕುರಿತ ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಬಾಲಿವುಡ್ ನಿರ್ಮಾಪಕರೊಬ್ಬರು 'ಟಿಪ್ಪು' ಹೆಸರಿಟ್ಟು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಸಿನಿಮಾದ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಆದರೆ, ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಿರುವ ಬೆನ್ನಲ್ಲೇ 'ಟಿಪ್ಪು' ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಯಾಕೆ?
ಚುನಾವಣೆ ಬೆನ್ನಲ್ಲೇ 'ಟಿಪ್ಪು' ಸಿನಿಮಾ
ರಾಜ್ಯದಲ್ಲಿ ಮತದಾನಕ್ಕೆ ಇನ್ನೊಂದು ವಾರ ಬಾಕಿಯಿದೆ. ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರ ಆರಂಭ ಮಾಡಿವೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ವಿವಾದಕ್ಕೆ ಸಿಲುಕಿರುವ ಟಿಪ್ಪು ಸುಲ್ತಾನ್ ಹೆಸರು ಮತ್ತೆ ಸದ್ದು ಮಾಡುತ್ತಿದೆ. ಬಾಲಿವುಡ್ ನಿರ್ಮಾಪಕ ಸಂದೀಪ್ ಸಿಂಗ್ 'ಟಿಪ್ಪು' ಸಿನಿಮಾದ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ಇನ್ನೊಂದು ಮುಖವನ್ನು ಈ ಸಿನಿಮಾದಲ್ಲಿ ತೋರಿಸಲು ಮುಂದಾಗಿದ್ದಾಗಿ ಚಿತ್ರತಂಡ ಹೇಳಿಕೊಂಡಿದೆ. ಟಿಪ್ಪು ಸುಲ್ತಾನ್ ಚರಿತ್ರೆಯನ್ನು ರಾಜ್ಯದಲ್ಲಿ ಬಿಜೆಪಿ ವಿರೋಧಿಸಿಕೊಂಡು ಬಂದಿದ್ದು, ತನ್ನ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸಿದೆ. ಹೀಗಿರುವಾಗಲೇ ಚುನಾವಣೆಯ ಈ ಸಂದರ್ಭದಲ್ಲಿ 'ಟಿಪ್ಪು'ದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.
'ಟಿಪ್ಪು' ಬಗ್ಗೆ ಮಣಿಪುರ ಸಿಎಂ ಸಂಶೋಧನೆ
ಬಿಜೆಪಿಯ ಸಲಹೆಗಾರ, ಮಣಿಪುರದ ಮುಖ್ಯಮಂತ್ರಿ, ಲೇಖಕ ಹಾಗೂ ಟಿವಿ ನಿರೂಪಕ ರಜತ್ ಸೇತಿ 'ಟಿಪ್ಪು' ಸಿನಿಮಾಗಾಗಿ ಸಂಶೋಧನೆ ಮಾಡಿದ್ದಾರೆ ಎನ್ನಲಾಗಿದೆ. ಇಂದು(ಮೇ 4) ಟಿಪ್ಪು ಸುಲ್ತಾನ್ ಡೆತ್ ಆ್ಯನಿವರ್ಸರಿ. ಈ ಕಾರಣಕ್ಕೆ ಚಿತ್ರತಂಡ ಇಂದು ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಸದ್ಯ ಮೋಷನ್ ಪೋಸ್ಟರ್ ಕೂಡ ವಿವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ. ಈ ಪೋಸ್ಟರ್‌ನಲ್ಲಿ 'ಮತಾಂಧ ಸುಲ್ತಾನನ ಕಥೆ' ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ಅಲ್ಲದೇ ಅಲ್ಲದೆ 8 ಸಾವಿರ ದೇವಸ್ಥಾನಗಳು, 27 ಚರ್ಚ್‌ಗಳ ನಾಶ. 4 ಮಿಲಿಯನ್ ಹಿಂದೂಗಳ ಮತಾಂತರ, ಗೋಮಾಂಸ ತಿನ್ನುವಂತೆ ಒತ್ತಾಯ, 1 ಲಕ್ಷ ಹಿಂದೂಗಳಿಗೆ ಜೈಲು ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿದೆ.
ಫಿಲ್ಮ್ ಮೇಕರ್ಸ್ ಏನಂತಾರೆ?
"ನಮಗೆ ಶಾಲೆಯಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಕೊಟ್ಟಿರೋ ಮಾಹಿತಿಯಲ್ಲಿ ತಪ್ಪು ಇದೆ. ಟಿಪ್ಪು ಒಬ್ಬ ಮತಾಂಧ ರಾಜ ಅನ್ನೋ ಸತ್ಯ ತಿಳಿದುಕೊಂಡಾಗ ನನಗೆ ಅದುರಿ ಹೋದೆ. ನನ್ನ ಸಿನಿಮಾದ ಮೂಲಕ ನಿಜವನ್ನು ಹೇಳುತ್ತಿದ್ದೇನೆ" ಎಂದು ಟಿಪ್ಪು ನಿರ್ದೇಶಕ ಪವನ್ ಶರ್ಮಾ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಸಿನಿಮಾದ ನಿರ್ಮಾಪಕ ಸಂದೀಪ್ ಸಿಂಗ್ ಈ ಹಿಂದೆ 'ಪಿಎಂ ನರೇಂದ್ರ ಮೋದಿ', 'ಸ್ವತಂತ್ರ ವೀರ ಸಾವರ್ಕರ್', 'ಅಟಲ್' ಹಾಗೂ 'ಬಾಲ್ ಶಿವಾಜಿ' ಅಂತ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ 'ಟಿಪ್ಪು' ನಿರ್ಮಾಣಕ್ಕೆ ಮುಂದಾಗಿದ್ದು, ಇರೋಸ್ ಇಂಟರ್‌ನ್ಯಾಷನಲ್ ಹಣ ಹೂಡಿದೆ. ಈ ಸಿನಿಮಾ ಕನ್ನಡ, ತೆಲುಗು,ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆ.


Click it and Unblock the Notifications











