''ಬಣ್ಣ''ಗಳಿಂದ ಆಡಿಕೊಳ್ಳೋರ ''ಬಾಯಿ'' ಮುಚ್ಚಿಸಿದ ಐಶ್ವರ್ಯ ರೈ - ಅಭಿಷೇಕ್ ಬಚ್ಚನ್...!
ಅದ್ಯಾಕೋ ಏನೋ ಗೊತ್ತಿಲ್ಲ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದ ವಿಚಾರದಲ್ಲಿ, ಅನೇಕರಲ್ಲಿ ಕೆಟ್ಟ ಕುತೂಹಲ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಬ್ಬರ ದಾಂಪತ್ಯ ಗೀತೆ ಹಳಿ ತಪ್ಪಿದೆ ಅನ್ನುವ ಮಾತು ಆಗಾಗ ಕೇಳಿ ಬರುತ್ತಾನೇ ಇರುತ್ತೆ. ಇನ್ನೂ ಇಬ್ಬರಿಗೂ ಈಗಾಗಲೇ ಡಿವೋರ್ಸ್ ಕೊಡಿಸಿದವರ ಸಂಖ್ಯೆ ಲೆಕ್ಕಕ್ಕೆ ಇಲ್ಲ.
ಆದರೆ ಐಶ್ವರ್ಯ ಆಗಲಿ, ಅಭಿಷೇಕ್ ಆಗಲಿ.. ಇಂಥಾ ಗಾಳಿ ಸುದ್ದಿಗಳಿಗೆ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ಇಬ್ಬರು ಇದ್ದಾರೆ. ಬದುಕನ್ನ ಎಂಜಾಯ್ ಮಾಡುತ್ತಿದ್ದಾರೆ. ಸಂಭ್ರಮದಿಂದನೇ ಹಬ್ಬ ಹರಿದಿನಗಳನ್ನ ಆಚರಿಸುತ್ತಿದ್ದಾರೆ. ಇದಕ್ಕೆ ಹೋಳಿ ಹಬ್ಬ ಅತ್ಯುತ್ತಮ ಉದಾಹರಣೆ.

ಹೌದು, ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಹೋಳಿ ಹಬ್ಬವನ್ನ ಆಚರಿಸಿದ್ದಾರೆ. ಈ ಮೂಲಕ ಅಂತೆ ಕಂತೆಯ ಸಂತೆಯಲ್ಲಿ ನಿಂತು, ಇಬ್ಬರೂ ದೂರವಾಗುವ ದಿನವನ್ನ ಎದುರು ನೋಡ್ತಿದ್ದವರ ಬಾಯಿಯನ್ನೂ ಇಬ್ಬರು ಮುಚ್ಚಿಸಿದ್ದಾರೆ.
ಅಮಿತಾಬ್ ಮೊಮ್ಮಗಳು ನವ್ಯಾ ನವೇಲಿ ನಂದಾ ಹೋಳಿ ಹಬ್ಬದ ಸಂಭ್ರಮಾಚರಣೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಂದ್ಹಾಗೇ ಹೋಳಿ ಸಂದರ್ಭದಲ್ಲಿ ಅಗ್ನಿ ಉರಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಈ ಆಚರಣೆ ಇದೆ. ಇದಕ್ಕೆ 'ಹೋಳಿಕಾ ದಹನ್' ಎಂದು ಉತ್ತರ ಭಾರತದವರು ಕರೆಯುತ್ತಾರೆ. ಇದಕ್ಕಾಗಿ ಮನೆ ಮಂದಿಯೆಲ್ಲ ಒಟ್ಟಿಗೆ ಸೇರಿ ಕಟ್ಟಿಗೆಗಳನ್ನು ಜೋಡಿಸಿ, ಬೆಂಕಿ ಹಾಕುತ್ತಾರೆ. ಹೋಳಿಯ ಸುತ್ತ ಪ್ರದಕ್ಷಿಣೆ ಹಾಕುತ್ತ, ಅಕ್ಕಿ, ಗೋಧಿ, ಅರಿಶಿನ, ಬತ್ತಾಸುಗಳನ್ನು ಅಗ್ನಿಗೆ ಅರ್ಪಿಸುತ್ತಾರೆ. ಡೋಲು ಬಾರಿಸುತ್ತ, ಹಾಡು ಹೇಳುತ್ತ, ನೃತ್ಯ ಮಾಡುತ್ತಾರೆ. ಇದು ನಡು ರಾತ್ರಿಯವರೆಗೆ ಸಾಗುತ್ತದೆ. ಅಮಿತಾಬ್ ಮನೆಯಲ್ಲಿ ನಡೆದಿದ್ದು ಇದೇ ಸಂಭ್ರಮಾಚರಣೆ.

ಇನ್ನೂ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಅವರ ಈ ಹೋಳಿ ಹಬ್ಬವನ್ನ ನೋಡಿದ ಅನೇಕರು, ಈ ಜೋಡಿಗೆ ಯಾವ ದೃಷ್ಟಿಯೂ ತಾಗದಿರಲಿ ಎಂದು ಸಾಮಾಜಿಕ ಜಾಲತಾಣದ ಮೂಲಕವೇ ದೃಷ್ಟಿ ನಿವಾಳಿಸಿ ನೆಟಿಕೆ ತೆಗೆಯುತ್ತಿದ್ದಾರೆ. 'ನಿಮ್ಮ ಕುಟುಂಬವನ್ನು ಒಟ್ಟಿಗೆ ನೋಡುವುದೇ ಖುಷಿ' ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, 'ಸುಳ್ಳು ಸುದ್ದಿ ಹರಿಡಿಸಿದವರ ಬಾಯಿಗೆ ಬೀಗ ಜಡಿದಂತೆ ಆಯಿತು' ಎಂದು ಸಂತೋಷವನ್ನೂ ವ್ಯಕ್ತಪಡಿಸುತ್ತಿದ್ದಾರೆ
ಅಂದು ಇಂದು ಅಮಿತಾಬ್ ಹೋಳಿ ನೆನಪು..!
ಇನ್ನೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ತಮ್ಮ ಹಳೆಯ ಹಾಗೂ ಇಂದಿನ ಫೋಟೋಗಳನ್ನ ಹಂಚಿಕೊಂಡು ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯವನ್ನ ಕೋರಿದ್ದಾರೆ. ಅಂದು ಮತ್ತು ಇಂದು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದಿರುವ ಅಮಿತಾಬ್, ಸಂತೋಷ ಮತ್ತು ಉಲ್ಲಾಸದ ಶಾಶ್ವತ ಬಣ್ಣಗಳ ಪ್ರತೀಕ. ಪ್ರತೀಕ್ಷಾದಲ್ಲಿ ಹೋಳಿ ಆಚರಣೆ ಮಾಡಿದ್ದೇವೆ. ದೇವರು ದಯೆ ತೋರಿದ್ದಾನೆ. ಹಿತೈಷಿಗಳ ದಯೆಯೂ ಸಮೃದ್ಧವಾಗಿದೆ. ಎಲ್ಲರಿಗೂ ಶುಭಾಶಯಗಳು ಎಂದಿದ್ದಾರೆ

ಒಟ್ನಲ್ಲಿ ಸಿನಿಮಾ ಕಲಾವಿದರೆಂದ ಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಈ ಬಣ್ಣ ಬಣ್ಣದ ಸುದ್ದಿಗಳಿಗೆ ಬಣ್ಣಗಳ ಮೂಲಕವೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಉತ್ತರವನ್ನ ಕೊಟ್ಟಿದ್ದಾರೆ


Click it and Unblock the Notifications











