ಆರಾಧ್ಯ ನನ್ನ ಮಗಳು ಏನಾಯ್ತು ಈಗ, ವಿಚ್ಛೇದನವದ ವದಂತಿ ನಡುವೆ ಸಿಟ್ಟಾದ ಐಶ್ವರ್ಯ ರೈ...!
ಐಶ್ವರ್ಯ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರ ಬಾಲ್ಯ ಮತ್ತು ಯವ್ವನವನ್ನು ಕಿತ್ತುಕೊಳ್ಳುತ್ತಿದ್ದಾರೆ ಅನ್ನುವುದು ಹಲವರ ವಾದ. ಆರಾಧ್ಯಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡದೇ ಸದಾ ಕಾಲ ಆಕೆಯನ್ನು ತಮ್ಮ ಸೆರಗಿನಡಿಯಲ್ಲಿಯೇ ಐಶ್ವರ್ಯ ಕಟ್ಟಿಕೊಂಡು ತಿರುಗುವುದರಿಂದ, ಆರಾಧ್ಯ ಮನಸಿನ ಮೇಲೆ ಪರಿಣಾಮ ಬೀರುತ್ತೆ, ಅಮ್ಮನ ಬದುಕು ಆಕೆಯ ಬದುಕಿನ ಮೇಲೆ ಪ್ರಭಾವ ಬೀರುತ್ತೆ ಎಂದು ಅನೇಕರು ಇಲ್ಲಿಯವರೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಬೇಸರವನ್ನೂ ಹೊರ ಹಾಕಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕನ್ನಡದ ಹಿರಿಯ ನಟಿ ಮಾಳವಿಕಾ ಅವಿನಾಶ್ ಕೂಡ ಇದೇ ವಿಚಾರಕ್ಕೆ ಕೆಂಡವನ್ನೂ ಕಾರಿದ್ದಾರೆ.
ಆದರೆ, ವ್ಯಕ್ತವಾಗುವ ಈ ಸಾರ್ವತ್ರಿಕ ಅಭಿಪ್ರಾಯಗಳಿಗೆಲ್ಲ ಐಶ್ವರ್ಯ ರೈ ತಲೆ ಕೆಡಿಸಿಕೊಳ್ಳುವವರಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನ್ನೆಯಷ್ಟೇ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಪ್ಯಾರಿಸ್ ಪ್ಯಾಷನ್ ವೀಕ್‌ಗೆ ತಮ್ಮ ಮಗಳನ್ನು ಕರೆದೊಯ್ದಿದ್ದ ಐಶ್ವರ್ಯ ರೈ ಈಗ ಆರಾಧ್ಯ ಅವರನ್ನು ಅಬುದಾಬಿಗೆ ಕರೆದೊಯ್ದಿದ್ದಾರೆ. ಸೈಮಾ ನಂತರ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಮಿರಮಿರ ಮಿಂಚಿದ್ದಾರೆ. ಈ ಸಮಯದಲ್ಲಿ ಆರಾಧ್ಯ ಅವರ ಕುರಿತು ಕೇಳಲಾದ ಪ್ರಶ್ನೆಗೆ ವಿಚಿತ್ರವಾದ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದ್ದಾರೆ ಐಶ್ವರ್ಯ ರೈ.

ಹೌದು, ಐಫಾ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಗ್ರೀನ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಇದೇ ಸಮಯದಲ್ಲಿ ಅಲ್ಲಿದ್ದ ವರದಿಗಾರರೊಬ್ಬರು ಐಶ್ವರ್ಯಗೆ ಅವರ ಮಗಳು ಆರಾಧ್ಯ ಕುರಿತು ಪ್ರಶ್ನೆಯನ್ನು ಕೇಳಿದರು. ನಿಮ್ಮ ಮಗಳು ಯಾವಾಗಲೂ ನಿಮ್ಮ ಜೊತೆಯಲ್ಲಿಯೇ ಇರುತ್ತಾಳೆ, ನಿಮ್ಮಿಂದ ಅತ್ಯುತ್ತಮವಾದದ್ದವನ್ನೇ ನಿಮ್ಮ ಮಗಳು ಕಲಿಯುತ್ತಿದ್ದಾಳೆ ಎಂದರು. ಅಷ್ಟರಲ್ಲಿಯೇ ವರದಿಗಾರನ ಪ್ರಶ್ನೆಯನ್ನು ಮೊಟಕುಗೊಳಿಸಿದ ಐಶ್ವರ್ಯ ರೈ ವ್ಹಾ !! ಅವಳು ನನ್ನ ಮಗಳು, ಅವಳು ಯಾವಾಗಲೂ ನನ್ನೊಂದಿಗೆ ಇರುತ್ತಾಳೆ ಎಂದು ವಿಚಿತ್ರ ಪ್ರತಿಕ್ರಿಯೆಯನ್ನು ನೀಡಿ ಮುಂದೆ ತೆರಳಿದರು.
ಐಶ್ವರ್ಯ ರೈ ಅವರ ಈ ನಡೆ ಮತ್ತು ನುಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಐಶ್ವರ್ಯ ರೈ ಅವರ ಈ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಅನೇಕರು ಐಶ್ವರ್ಯ ರೈ ಅವರಿಗೆ ಪೇರೆಂಟಿಂಗ್ ಪಾಠವನ್ನು ಮತ್ತೊಮ್ಮೆ ಮಾಡುತ್ತಿದ್ದಾರೆ. ತನ್ನ ಮಗಳನ್ನು ಓದಲು ಬಿಡದೇ ಸದಾ ಕಾಲ ಆಕೆಯೊಂದಿಗೆ ಅಂಟಿಕೊಂಡೇ ಇರುವುದೆಷ್ಟು ಸರಿ ಎಂದು ಐಶ್ವರ್ಯ ರೈ ಅವರಿಗೆ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಆರಾಧ್ಯಗೆ ಅವರದ್ದೇ ಆದ ಬದುಕು ಇದೆ ಅದನ್ನು ಆಕೆಗೆ ಬದುಕಲು ಬಿಡಿ ಎನ್ನುತ್ತಿದ್ದಾರೆ.
ಅಂದ್ಹಾಗೇ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ಮೊನ್ನೆ ಸೈಮಾದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದ ಐಶ್ವರ್ಯ ರೈ, ಐಫಾದಲ್ಲಿ ಕೂಡ ಇದೇ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೇ ಸಮಯದಲ್ಲಿ ತಮ್ಮ ಗುರು ಸಮಾನರಾದ ನಿರ್ದೇಶಕ ಮಣಿರತ್ನಂ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಕೂಡ ಐಶ್ವರ್ಯ ರೈ ಪಡೆದಿದ್ದಾರೆ. ಐಶ್ವರ್ಯ ಅವರ ಈ ಸರಳತೆ ಮತ್ತು ಸಂಸ್ಕಾರದ ಕುರಿತು ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಭಿಮಾನಿಗಳ ಹೃದಯವನ್ನೂ ಕೂಡ ಈ ವಿಡಿಯೋ ಗೆಲ್ಲುತ್ತಿದೆ.
ಉಳಿದಂತೆ ಸದ್ಯಕ್ಕೆ ಐಶ್ವರ್ಯ ರೈ ಬೇರೆ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಇನ್ನೂ ಕಳೆದ ಕೆಲ ದಿನಗಳಿಂದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಾಂಸಾರಿಕ ಜೀವನ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ. ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕೇಳಿ ಬರುತ್ತಿರುವ ಈ ಅಂತೆ-ಕಂತೆ ಎಲ್ಲ ಶುದ್ಧ ಸುಳ್ಳು ಎಂದು ಇಬ್ಬರು ಹೇಳಿಲ್ಲ. ನಿಜಾ ಎಂದು ಕೂಡ ಒಪ್ಪಿಕೊಂಡಿಲ್ಲ. ಈ ಕಾರಣಕ್ಕೆ ಚರ್ಚೆ ಮುಕ್ತಾಯವಾಗುತ್ತಿಲ್ಲ ಅನ್ನುವುದು ಬೇರೆ ವಿಚಾರ.


Click it and Unblock the Notifications











