Cannes 2023: ವಿಚಿತ್ರ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಐಶ್ ಎಂಟ್ರಿ: ಸಖತ್ ಟ್ರೋಲ್ ಆಗ್ತಿದೆ ಈ ಲುಕ್
ಐಶ್ವರ್ಯ ರೈ ಅಭಿಮಾನಿಗಳು ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಟ್ಟಿದೆ. 76ನೇ ಕಾನ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಐಶ್ ಎಂಟ್ರಿ ಕೊಟ್ಟಾಗಿದೆ. ವಿಚಿತ್ರ ಗೌನ್ ಧರಿಸಿ ರಾಣಿಯಂತೆ ಮಾಜಿ ವಿಶ್ವಸುಂದರಿ ಕಂಗೊಳಿಸಿದ್ದಾರೆ. ಆಕೆಯ ಅವತಾರ ನೋಡಿ ಕೆಲವರು ಮೆಚ್ಚಿಕೊಂಡರೆ ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಫೋಟೊಗಳಂತೂ ಸಖತ್ ವೈರಲ್ ಆಗ್ತಿದೆ.
ಈ ಹಿಂದೆ ಕೂಡ ಹಲವು ಬಾರಿ ಐಶ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿ ಆಗಿದ್ದರು. ಆಕೆಯ ರೆಡ್ ಕಾರ್ಪೆಟ್ ಲುಕ್‌ಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಆಕೆಯನ್ನು ಕಾನ್ ಸಿನಿಉತ್ಸವದ ರಾಣೆ ಎಂದೇ ಕರೆಯಲಾಗುತ್ತದೆ. ಈ ವರ್ಷ ರೆಡ್ ಕಾರ್ಪೆಟ್ ಮೇಲೆ ರಾಣಿಯ ಆಗಮನವಾಗಿದೆ. ಉಳಿದವರೆಲ್ಲಾ ಮನೆ ಸೇರಿಕೊಳ್ಳಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಗುರುವಾರ ರಾತ್ರಿ 'ಇಂಡಿಯಾನಾ ಜೋನ್ಸ್ & ದಿ ಡಯಲ್ ಆಫ್ ಡೆಸ್ಟಿನಿ' ಸಿನಿಮಾ ಸ್ಕ್ರೀನಿಂಗ್ ವೇಳೆ ಐಶ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಸೋಫಿ ಕೌಚರ್ ಕಲೆಕ್ಷನ್‌ನ ಸಿಲ್ವರ್ ಕಲರ್ ಗೌನ್‌ಲ್ಲಿ ಐಶ್ವರ್ಯ ರೈ ದರ್ಶನ ಕೊಟ್ಟಿದ್ದಾರೆ. ಅರ್ಧ ದೇಹ ಸುತ್ತಿಕೊಂಡಂತ ದೊಡ್ಡ ಕುಲಾಯಿ, ಹಿಂದೆ ಉದ್ದ ಟ್ರೇಲ್ ಇರುವಂತಹ ಗೌನ್ ಗಮನ ಸೆಳೆಯುತ್ತಿದೆ. ಉದ್ದ ಟ್ರೇಲ್ ಹಿಡಿದು ಬರುವಂತಾಯಿತು. ಇನ್ನು ಸಿಂಪಲ್ ಮೇಕಪ್ ಹಾಗೂ ಕೆಂಪು ಬಣ್ಣದ ಲಿಪ್‌ಸ್ಟಿಕ್‌ನಲ್ಲಿ ಮೋಡಿ ಮಾಡಿದ್ದಾರೆ. ಮಗಳು ಆರಾಧ್ಯ ಕೂಡ ಅಮ್ಮನ ಜೊತೆ ಕಾನ್ ಸಿನಿ ಉತ್ಸವಕ್ಕೆ ಹೋಗಿದ್ದಾಳೆ.
21ನೇ ಬಾರಿ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿ
ಪ್ರತಿ ವರ್ಷ ಐಶ್ವರ್ಯ ರೈ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿ ಆಗುತ್ತಾರೆ. ತಮ್ಮ ವಿಭಿನ್ನ ಲುಕ್‌ನಿಂದ ಸದ್ದು ಮಾಡುತ್ತಾರೆ. 21ನೇ ಬಾರಿಗೆ ಐಶ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. 2002ರಲ್ಲಿ ಮೊದಲ ಬಾರಿಗೆ 'ದೇವದಾಸ್' ಚಿತ್ರದ ಸಹನಟ ಶಾರುಕ್ ಖಾನ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಐಶ್ ಹೆಜ್ಜೆ ಹಾಕಿದ್ದರು. ಅಲ್ಲಿಂದ ಮುಂದೆ ಪ್ರತಿ ವರ್ಷವೂ ಮಾಜಿ ವಿಶ್ವ ಸುಂದರಿ ಕಾನ್ ಉತ್ಸವಕ್ಕೆ ಹಾಜರಾಗುತ್ತಿದ್ದಾರೆ.

ಚಿಕನ್ ಶವರ್ಮಾ ಎಂದು ಟ್ರೋಲ್
ಸದ್ಯ ಐಶ್ವರ್ಯ ರೈ ರೆಡ್ ಕಾರ್ಪೆಟ್ ಲುಕ್ ಸಖತ್ ವೈರಲ್ ಆಗ್ತಿದೆ. ಆಕೆಯ ವಿಚಿತ್ರ ಗೌನ್ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಅಭಿಮಾನಿಗಳಂತೂ ಐಶ್ ರೆಡ್ ಕಾರ್ಪೆಟ್ ಲುಕ್ ನೋಡಿ ಫಿದಾ ಆಗಿದ್ದಾರೆ. ಕೆಲವರಂತೂ ಐಶ್ವರ್ಯ ರೈಗೆ ಮಾತ್ರ ಗೊತ್ತು ಇಂತಹ ದೊಡ್ಡ ಈವೆಂಟ್‌ನಲ್ಲಿ ಹೇಗೆ ಗಮನ ಸೆಳೆಯಬೇಕು ಅಂತ, ಆಕೆಯ ಕಾನ್ಫಿಡೆಂಟ್‌ಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ. ಆದರೆ ಕೆಲವರು ಮಾತ್ರ ಟ್ರೋಲ್ ಮಾಡುತ್ತಿದ್ದಾರೆ. ಐಶ್ ಅವತಾರ ಚಿಕನ್ ಶವರ್ಮಾ, ಗಿಫ್ಟ್ ವ್ರಾಪರ್ ನೆನಪಿಸುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೀಮ್ಸ್‌ಗೋಸ್ಕರ ಆಕೆ ಈ ವೇಷದಲ್ಲಿ ಕಾಣಿಸಿಕೊಂಡಂತಿದೆ ಎನ್ನುತ್ತಿದ್ದಾರೆ.
'PS' ಸರಣಿಯಲ್ಲಿ ನಂದಿನಿಯಾಗಿ ಮೋಡಿ
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸರಣಿಯಲ್ಲಿ ಐಶ್ವರ್ಯಾ ರೈ ನಂದಿನಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2 ಭಾಗಗಳಾಗಿ ಬಂದ ಚಿತ್ರದಲ್ಲಿ ಆಕೆಯ ನಂದಿನಿ ಪಾತ್ರಕ್ಕೆ ಹೆಚ್ಚಿನ ಮಹತ್ವ ಇತ್ತು. ಈ ಪಾತ್ರದಲ್ಲಿ ಆಕೆಯೇ ನಟಿಸಬೇಕು ಎಂದು ನಿರ್ದೇಶಕರು ಪಟ್ಟು ಹಿಡಿದಿದ್ದರು. ತೆರೆಮೇಲೆ ಸುಂದರವಾಗಿ ಕಾಣಿಸಿದ್ದು ಅಷ್ಟೇ ಅಲ್ಲ, ಸೊಗಸಾಗಿ ನಟಿಸಿ ಐಶ್ ಸಿನಿರಸಿಕರ ಮನಗೆದ್ದರು.

ಮತ್ತೆ ವಿಕ್ರಂ ಜೋಡಿಯಾಗಿ ಐಶ್
ಇತ್ತೀಚಿನ ವರ್ಷಗಳಲ್ಲಿ ಐಶ್ವರ್ಯ ರೈ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಆಗೊಂದು ಈಗೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ತಮಿಳು ನಟ ಚಿಯಾನ್ ವಿಕ್ರಂ ಜೊತೆ 2 ಸಿನಿಮಾಗಳಲ್ಲಿ ಐಸ್ವರ್ಯ ರೈ ನಟಿಸಿದ್ದಾರೆ. 'ರಾವಣ್', 'ಪೊನ್ನಿಯಿನ್ ಸೆಲ್ವನ್' ನಂತರ ಮತ್ತೊಮ್ಮೆ ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಸದ್ಯಕ್ಕೆ ಐಶ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.


Click it and Unblock the Notifications











